ಕಲೆಗಳ ಮೂಲಕ ಕನ್ನಡ ಕಾಪಾಡೋಣ
ಕ.ಪ್ರ.ವಾರ್ತೆ ಮೈಸೂರು ಏ. 12
ಕಲೆಗಳ ಮೂಲಕ ಕನ್ನಡ ಕಾಪಾಡೋಣ. ರಂಗ ಚಳವಳಿಯಲ್ಲಿ ಎಲ್ಲರೂ ಭಾಗವಹಿಸೋಣ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.
ನಗರದ ಜೆಎಸ್‌ಎಸ್ ಆಸ್ಪತ್ರೆಯ ರಾಜೇಂದ್ರ ಭವನದಲ್ಲಿ ಪೌರಾಣಿಕ ರಂಗಚಾವಡಿಯನ್ನು ಶನಿವಾರ ಸಂಜೆ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡವೇ ರಾಜ್ಯ ಭಾಷೆ ಎಂದರು.
ಪೌರಾಣಿಕ ನಾಟಕಗಳು ಪುನರುಜ್ಜೀವನಗೊಳಿಸಲು ರಂಗಚಾವಡಿ ಮಾಡಿಕೊಂಡಿರುವುದು ಒಳ್ಳೆಯ ಕೆಲಸ. ಪೌರಾಣಿಕ ನಾಟಕದ ಬಗ್ಗೆ ನಮ್ಮ ಮನೆ ಮಕ್ಕಳಿಗೂ ಗೊತ್ತಾಗಬೇಕು. ನಾಟಕವು ಸಿನಿಮಾದ ತಾಯಿ ಆಗಿದೆ. ಪೌರಾಣಿಕ ನಾಟಕವು ಜನರಿಗೆ ಅರ್ಥ ಆಗುವಂತೆ ಇರಲಿ ಎಂದು ಸಲಹೆ ನೀಡಿದರು.
ಪುರಾಣದಲ್ಲಿ ಎಲ್ಲದಕ್ಕೂ ಕಾರಣ ಇದೆ. ಹೀಗಾಗಿ ಪುರಾಣಗಳಲ್ಲಿ ಕಾರಣ ಹುಡುಕುವ ಕೆಲಸ ಆಗಬೇಕು. ಪುರಾಣದಲ್ಲಿರುವ ವೈಚಾರಿಕತೆಯನ್ನು ಯುವಜನತೆಗೆ ಹೇಳಬೇಕು ಎಂದು ತಿಳಿಸಿದರು. ಹಾಗೇಯೇ ನಾನು ನಾದಬ್ರಹ್ಮ ಅಲ್ಲ. ನಾನೊಬ್ಬ ಸರಳ ವ್ಯಕ್ತಿಯಷ್ಟೇ. ನಿಜವಾದ ನಾದಬ್ರಹ್ಮರು ಬೇರೆಯವರು ಇದ್ದಾರೆ. ಯಾರಾದರೂ ನಾದಬ್ರಹ್ಮ ಹೆಸರನ್ನು ವಾಪಸ್ ತೆಗೆದುಕೊಳ್ಳಲಿ ಎಂದರು.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಬೆಳಗಲ್ಲು ವೀರಣ್ಣ ಅಧ್ಯಕ್ಷತೆ ವಹಿಸಿದ್ದರು. ರಂಗ ಸಂಗೀತ ತಜ್ಞ ಆರ್.ಪರಮಶಿವನ್, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್, ಪೌರಾಣಿಕ ರಂಗಚಾವಡಿಯ ಅಧ್ಯಕ್ಷ ಸಂಗಾಪುರ ನಾಗರಾಜ್, ಕಾರ್ಯದರ್ಶಿ ಎ.ಎಸ್. ನಾಗರಾಜ್, ಉಪಾಧ್ಯಕ್ಷ ಬಿ.ಎಂ. ರಾಮಚಂದ್ರ, ಖಜಾಂಚಿ ಎಚ್.ಎಸ್. ಗೋವಿಂದೇಗೌಡ, ಸಹ ಕಾರ್ಯದರ್ಶಿ ಸುಬ್ಬಶೆಟ್ಟಿ ಇದ್ದರು.