ಪ್ರಜೆಗಳಿಗೆ ಮತದಾನ ಹಕ್ಕು ಅರಿವು
ಕ.ಪ್ರ.ವಾರ್ತೆ ಮೈಸೂರು ಏ. 12
ಮತದಾನದ ಹಕ್ಕು ಹಾಗೂ ಕರ್ತವ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರಂಗಾಯಣ ಕಲಾವಿದರು ಶನಿವಾರ ಅಭಿಯಾನ ನಡೆಸಿದರು. ಮೈಸೂರಿನ ರಂಗ ಕಲಾವಿದರ ಸಹಯೋಗದೊಂದಿಗೆ ಏರ್ಪಡಿಸಿದ್ದ ಈ ಕಾರ್ಯಕ್ರಮವು ವಿ.ವಿ. ಮೊಹಲ್ಲಾದ ಮಾತೃ ಮಂಡಳಿ ವೃತ್ತದಿಂದ ಆರಂಭವಾಯಿತು.
ಮತದಾನ ನಮ್ಮ ಹಕ್ಕು. ಎಲ್ಲರೂ ಮತದಾನವನ್ನು ತಪ್ಪದೇ ಚಲಾಯಿಸಬೇಕು ಎಂದು ಹಾಡುತ್ತಾ ಮನೆ ಮನಗಳೊಂದಿಗೆ ಮತದಾನದ ಮಹತ್ವ ಸಾರಿದ ಕಲಾವಿದರು, ಸಂವಿಧಾನದ ಪರಿಪಾಲನೆಯಲ್ಲಿ ನಾವೆಲ್ಲರೂ ಜವಾಬ್ದಾರಿಯಿಂದ ಮುನ್ನಡೆಯಬೇಕು ಎಂದು ಸಾರಿದರು.
ರಂಗಾಯಣ ನಿರ್ದೇಶಕ ಎಚ್.ಜನಾರ್ದನ್ ಮಾತನಾಡಿ, ದೇಶದ ಉತ್ತಮ ವ್ಯವಸ್ಥೆಗಾಗಿ ಎಲ್ಲರೂ ಮತದಾನ ಮಾಡುವುದು ಅವಶ್ಯಕ. ಆದರೆ ಇಂದು ಮತದಾನದಲ್ಲಿ ಭಾಗವಹಿಸುವವರ ಸಂಖ್ಯೆಯೂ ಪರಿಪೂರ್ಣವಾಗಿಲ್ಲ. ಅದರಲ್ಲೂ ಅವಿದ್ಯಾವಂತರೂ ಹಾಗೂ ಗ್ರಾಮೀಣ ಜನರಿಗೆ ಅರಿವು ಮೂಡಿಸಬೇಕಾದ ಸುಶಿಕ್ಷಿತ ಸಮಾಜ ನಿರ್ಲಕ್ಷ್ಯ ಮನೋಭಾವ ವಹಿಸಿರುವುದು ಅಪಾಯಕಾರಿ. ಕೆಲವು ಅಧ್ಯಾಪಕರು ಸಹ ಮತದಾನ ಮಾಡದಿರುವ ಉದಾಹರಣೆಗಳಿವೆ. ಆದ್ದರಿಂದ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೆಪಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ನಂತರ ಅಲ್ಲಿಂದ ಹೊರಟ ತಂಡವು ಅಶೋಕ ವೃತ್ತ, ವಿದ್ಯಾರಣ್ಯಪುರಂ, ಕುವೆಂಪುನಗರ, ವಿವೇಕಾನಂದನಗರ, ಶಾರದಾದೇವಿ ನಗರ, ಅಗ್ರಹಾರ, ನಜರಬಾದ್, ಇಟ್ಟಿಗೆಗೂಡು ಹಾಗೂ ಕೆ.ಆರ್. ವೃತ್ತದಲ್ಲಿ ಜಾಗೃತಿ ಅಭಿಯಾನ ನಡೆಸಿತು.
ಉಪನ್ಯಾಸ: ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ನಡೆಯಿತು. ಮತದಾರರ ಶಿಕ್ಷಣ ಹಾಗೂ ಮತದಾರರ ಭಾಗವಹಿಸುವಿಕೆ ಎಂಬ ವಿಷಯ ಕುರಿತು ಮೈಸೂರು ವಿವಿಯ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಚ್.ಎಂ. ರಾಜಶೇಖರ್ ವಿಶೇಷ ಉಪನ್ಯಾಸ ನೀಡಿ, ಮತದಾನದ ಹಕ್ಕು ಮತ್ತು ಮಹತ್ವ ವಿವರಿಸಿದರು. ಪ್ರಾಂಶುಪಾಲ ಪ್ರೊ.ಕೆ.ಬಿ. ವಾಸುದೇವ ಇದ್ದರು.
ಜಾಗೃತಿಗೆ ಮಾನವ ಸರಪಳಿ: ಗೋಕುಲಂನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ವತಿಯಿಂದ ಮತದಾನ ಜಾಗೃತಿ ಅಭಿಯಾನ ನಡೆಯಿತು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ನಡೆಸಿದ ಈ ಅಭಿಯಾನದಲ್ಲಿ ವಿವಿಧ ಘೋಷಣೆಗಳನ್ನು ಕೂಗಿ ವಿದ್ಯಾರ್ಥಿಗಳು ಸಾರ್ವಜನಿಕರ ಗಮನ ಸೆಳೆದರು. ಅಲ್ಲದೆ ಮಾನವ ಸರಪಳಿ ನಿರ್ಮಿಸಿ ಅರಿವು ಮೂಡಿಸಿದರು. ಸುಮಾರು 50 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಿರ್ಭಿತಿಯಿಂದ ಮತ ಚಲಾಯಿಸುತ್ತೇವೆ...
ಬೆಳವಾಡಿಯಲ್ಲಿರುವ ಜಿಐಎಂಡಿಎಸ್ ಪದವಿ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಮತದಾನ ಜಾಗೃತಿ ಅರಿವು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ, ಪಕ್ಷಭೇದ ಮತ್ತು ಜಾತಿಭೇದ ಮರೆತು ಎಲ್ಲರೂ ಕಡ್ಡಾಯವಾಗಿ ನಮ್ಮ ಪವಿತ್ರವಾದ ಅಮೂಲ್ಯವಾದ ಮತದಾನದ ಹಕ್ಕನ್ನು ಏ.17 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ನಿರ್ಭಿತಿಯಿಂದ ಚಲಾಯಿಸುತ್ತೇವೆ ಎಂದು ವಿದ್ಯಾರ್ಥಿಗಳು ಪ್ರಮಾಣೀಕರಿಸಿದರು.
ಪ್ರಾಂಶುಪಾಲ ಎ.ಎಸ್.ಮಹೇಶ್ ಮಾತನಾಡಿ, ಯುವ ವಿದ್ಯಾರ್ಥಿಗಳು ಚುನಾವಣೆಯಲ್ಲಿ ಯಾವುದೇ ಆಸೆ ಹಾಗೂ ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸುವಂತೆ ಕಿವಿಮಾತು ಹೇಳಿದರು. ಎಂ.ಎಸ್. ದಿವ್ಯಾ ಪ್ರತಿಜ್ಞಾ ವಿಧಿ ಬೋಧಿಸಿದರು.
ಪಾಶುಪತಾಸ್ತ್ರ ನಿಮ್ಮ ಕೈಯಲಿದೆ...
ಮಾನಂದವಾಡಿ ರಸ್ತೆಯಲ್ಲಿರುವ ಎನ್ಐಇ ಕಾಲೇಜಿನಲ್ಲಿ ಮತದಾನ ಜಾಗೃತಿ ಅಭಿಯಾನ ನಡೆಯಿತು. ಈ ಸಂದರ್ಭದಲ್ಲಿ ಉತ್ತಮ ಭಾರತ ನಿರ್ಮಾಣಕ್ಕಾಗಿ ತಪ್ಪದೇ ಮತ ಚಲಾಯಿಸುವೆ ಎಂದು ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ನನ್ನ ಮತ ಮಾರಾಟಕ್ಕಿಲ್ಲ ಎಂಬ ಸಂದೇಶವನ್ನೂ ಸಾರಿದರು. ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳು ನಿರ್ಮಿಸಿರುವ ಪಾಶುಪತಾಸ್ತ್ರ ನಿಮ್ಮ ಕೈಯಲ್ಲಿ ಎಂಬ ಕಿರುಚಿತ್ರವನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳಾದ ಪ್ರವೀಣ್ ಕುಮಾರ್ ಹಾಗೂ ಕೃತಿಕಾ ಪ್ರತಿಜ್ಞಾ ವಿಧಿ ಬೋಧಿಸಿದರು. ಸಂಸ್ಥೆ ಗೌರವ ಕಾರ್ಯದರ್ಶಿ ಎಸ್.ಎಲ್. ರಾಮಚಂದ್ರ, ಪ್ರಾಂಶುಪಾಲ ಡಾ.ಜಿ.ಎನ್. ಶೇಖರ್, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ. ಪಿ.ಎಂ. ಬಂಡಾರ್ಕರ್ ಇದ್ದರು.
ಮತ ಜಾಗೃತಿಗಿಳಿದ ಮೆಕಾನಿಕ್ ಸುರೇಶ್
ಜೆ. ಮಹದೇವ
ಕ.ಪ್ರ.ವಾರ್ತೆ ಮೈಸೂರು ಏ. 12
ಮೆಕಾನಿಕ್ ಒಬ್ಬರು ಸ್ಕೂಟರ್ಗಳನ್ನು ದುರಸ್ತಿ ಮಾಡುವುದರ ಜತೆಗೆ, ಜನರಲ್ಲಿ ಜಾಗೃತಿ ಮಾಡಿಸಲು ಫೀಲ್ಡ್ಗೆ ಇಳಿದಿದ್ದಾರೆ
ಆಶ್ಚರ್ಯಪಟ್ಟೀರಾ? ಹೌದು ಇಂತಹ ಕೆಲಸ ಆರಂಭಿಸಿರುವವರು ನಗರದ ಮೆಕಾನಿಕ್ ಆಟೋಕ್ರಾಫ್ಟ್ ಸುರೇಶ್ ಅವರು ಮತದಾನ ಚಲಾಯಿಸದೆ ಬೇಜವಾಬ್ದಾರಿ ತೋರಿಸುವವರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಡಿ.ಬನುಮಯ್ಯ ವೃತ್ತದ ಬಳಿ ಇರುವ ಆಟೋಕ್ರಾಫ್ಟ್ ಗ್ಯಾರೇಜ್ನಲ್ಲಿ ಮತದಾನ ಮಾಡುವಂತೆ ಪ್ರೇರೇಪಿಸಲು ಉಕ್ತಿಗಳ ಫಲಕಗಳನ್ನು ಪ್ರದರ್ಶಿಸಿದ್ದಾರೆ. ಅವರ ಪ್ರಕಾರ ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಈ ಹಕ್ಕನ್ನು ಚಲಾಯಿಸುವ ಮೂಲಕ ತಮ್ಮ ಅಧಿಕಾರ ಹೊಂದಬೇಕು. ನೆರೆಯ ರಾಜ್ಯಗಳಲ್ಲಿ ಶೇ.70 ರಿಂದ 80 ರಷ್ಟು ಮತದಾನ ನಡೆಯುತ್ತಿದೆ. ಅದೇ ಕರ್ನಾಟಕದಲ್ಲಿ ಶೇ.60 ರಷ್ಟು ಮಾತ್ರ ನಡೆಯುತ್ತಿದೆ. ಆದ್ದರಿಂದ ಈ ಬಾರಿ ಮತದಾನ ಹೆಚ್ಚಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುವಂತೆ ಮನವಿ ಮಾಡುತ್ತೇನೆ. ಮತದಾನ ದಿನದಂದು ಸಹಕಾರ ನೀಡಲು ಕೈಲಾಗದವರಿಗೆ, ಅಂಗವಿಕಲರಿಗೆ, ಹಿರಿಯರಿಗೆ ತಮ್ಮ ಮನೆಯಿಂದ ಮತಗಟ್ಟೆಗೆ ಕರೆದುಕೊಂಡು ಹೋಗಲು ಕಾರಿನ ಸೌಲಭ್ಯ ಕಲ್ಪಿಸುತ್ತೇನೆ. ನನ್ನದೇ ಸ್ವಂತ ಕಾರಿದ್ದು ಅಂದು ಮೂರು ನಾಲ್ಕು ಬಡಾವಣೆಗೆ ತೆರಳಿ ಸಹಾಯ ಮಾಡುತ್ತೇನೆ ಎಂದು ಕನ್ನಡಪ್ರಭಕ್ಕೆ ತಿಳಿಸಿದರು.