ರಂಗಾಯಣದಲ್ಲಿ ಮಕ್ಕಳ ಬೇಸಿಗೆ ಶಿಬಿರ
ಕ.ಪ್ರ.ವಾರ್ತೆ ಮೈಸೂರು ಏ. 12
ರಂಗಾಯಣದ ಚಿಣ್ಣರ ಮೇಳ ಮಕ್ಕಳ ಬೇಸಿಗೆ ಶಿಬಿರವು ಏ.13 ರಿಂದ ಮೇ 11 ರವರೆಗೆ ನಡೆಯಲಿದೆ ಎಂದು ರಂಗಾಯಣದ ನಿರ್ದೇಶಕ ಎಚ್.ಜರ್ನಾದನ್ ತಿಳಿಸಿದರು.
ಹದಿನೆಂಟನೇ ವರ್ಷದ ಈ ಬೇಸಿಗೆ ಶಿಬಿರವನ್ನು ಗ್ರಾಮ ಭಾರತದೊಳಗೆ ಚಿಣ್ಣರ ಮೇಳ ಎಂಬ ಶೀರ್ಷಿಕೆಯಲ್ಲಿ ಆಯೋಜಿಸಲಾಗಿದ್ದು, 13 ರಂದು ಸಂಜೆ 5ಕ್ಕೆ ವನರಂಗದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮತದಾನ ಜಾಗೃತಿಯ ಮೂಲಕ ಮಕ್ಕಳು ಉದ್ಘಾಟಿಸುವರು. ಈ ಸಂದರ್ಭದಲ್ಲಿ ಶ್ರೀಲಂಕಾ ಪಾರಂಪರಿಕ ತಂಡದವರು ಜಾನಪದ ನೃತ್ಯ ಪ್ರದರ್ಶಿಸುವರು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒಂದು ತಿಂಗಳ ಮೇಳದಲ್ಲಿ ಬುದ್ಧದೇವನ ಜಾತಕದ ಕಥೆಗಳ ಸರಲೀಕರಣ ರೂಪದ ನಾಟಕಗಳನ್ನು ಮಕ್ಕಳೊಂದಿಗೆ ಸಿದ್ದಪಡಿಸಲು ಚಿಂತಿಸಲಾಗಿದೆ. ಆ ಮೂಲಕ ಪ್ರೀತಿ, ಸಂಕಲ್ಪ, ಮೈತ್ರಿಯನ್ನು ಬೆಸೆಯುವುದು ಹಾಗೂ ಪಂಚಶೀಲ ತತ್ವವನ್ನು ಮಕ್ಕಳ ಮನಸ್ಸಿನಲ್ಲಿ ಅಳವಡಿಸುವುದು ಪ್ರಮುಖ ಆಶಯವಾಗಿದೆ ಎಂದರು.
ಪ್ರತಿ ವರ್ಷದಂತೆ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿದ್ದು, ಇದರಲ್ಲಿ ಸ್ನೇಕ್ಶ್ಯಾಮ್ ಅವರಿಂದ ಉರಗ ಪ್ರದರ್ಶನ, ಹುಲಿಕಲ್ ನಟರಾಜ್ ಅವರಿಂದ ಪವಾಡ ಬಯಲು, ಅಗ್ನಿಶಾಮಕದಳ ಹಾಗೂ ಶ್ವಾನದಳದಿಂದ ಪ್ರಾತ್ಯಕ್ಷಿಕೆ, ಜಾದೂ ಪ್ರದರ್ಶನ ಹಾಗೂ ದೊಂಬರಾಟ ಪ್ರದರ್ಶನ ಇರುತ್ತದೆ. ಅಲ್ಲದೆ ವಿಜ್ಞಾನಿಗಳನ್ನು ಆಹ್ವಾನಿಸಿ ಆಕಾಶಕಾಯದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ವಿವರಿಸಿದರು.
ಹೊಂದಾಣಿಕೆ ಕೊರತೆ: ಇಂದಿನ ಶಿಕ್ಷಣ ಪದ್ಧತಿ ಹಾಗೂ ಶಾಲಾ ವ್ಯವಸ್ಥೆಯು ಹೆದರಿಕೆ ಹುಟ್ಟಿಸಲಿದೆ. ಪೋಷಕರು, ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರ ನಡುವೆ ಮಕ್ಕಳ ವಿದ್ಯೆ ನಡೆದಿದೆ.
ಪರಸ್ಪರ ಹೊಂದಾಣಿಕೆಯ ಕೊರತೆಯಿದೆ. ಇಂತಹ ಆತಂಕದ ವಾತಾವರದಲ್ಲಿ ಮಕ್ಕಳು ಕಲಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಮಕ್ಕಳಲ್ಲಿರುವ ಭಯ ಹಾಗೂ ಆತಂಕ ದೂರ ಮಾಡಿ ಅವರನ್ನು ಸದೃಢರನ್ನಾಗಿಸಲು ಈ ಮೇಳ ಸಹಕಾರಿಯಾಗಿದೆ ಎಂದರು.
ಮಕ್ಕಳ ವಯೋವಾನಕ್ಕೆ ಅನುಗುಣವಾಗಿ 5 ವಿಭಾಗಗಳಲ್ಲಿ ತರಬೇತಿ ನೀಡಲಾಗುವುದು. ರಂಗಾಯಣದ ಕಲಾವಿದರು ಆಯಾಯ ವಿಭಾಗದ ನಿರ್ದೇಶಕರಾಗಿ ಕೆಲಸ ಮಾಡುವರು, ಇಲ್ಲಿನ ಭಾರತೀಯ ರಂಗಶಿಕ್ಷಣ ಕೇಂದ್ರದ ಕಲಾವಿದರು ಸಹಾಯಕರಾಗಿ ಕಾರ್ಯನಿರ್ವಹಿಸುವರು. ಸುಮಾರು 350 ಮಕ್ಕಳು ಭಾಗವಹಿಸುವರು. ಮೇಳದ ಪ್ರಮುಖ ಆಕರ್ಷಣೆಯಾಗಿ ಬೃಹತ್ ಬೋಧಿ ವೃಕ್ಷ ಹಾಗೂ ಬೃಹತ್ ಹಂಸವನ್ನು ತಯಾರಿಸಲಾಗುವುದು ಎಂದರು.