ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

28ರಂದು ಸಂಸ್ಕೃತ ವಿಚಾರ ಸಂಕಿರಣ

Srinivasa Murthy VN
Updated On : 14 Apr 2014, 12:07 pm

ಮೈಸೂರು: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕರ್ನಾಟಕ ಸಂಸ್ಕೃತ ವಿವಿ ಸಹಯೋಗದಲ್ಲಿ ಏ.28 ರಂದು ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಏರ್ಪಡಿಸಿದೆ. ಅಂದು ಬೆಳಗ್ಗೆ 10ಕ್ಕೆ ವಿವಿ  ಆವರಣದಲ್ಲಿ ನಡೆಯಲಿರುವ ವಿಚಾರ ಸಂಕಿರಣದಲ್ಲಿ ಮೈಸೂರು ವಾಸುದೇವಚಾರ್ಯ ಮತ್ತು ಜಯಚಾಮರಾಜೇಂದ್ರ ಒಡೆಯರ್ ಸಂಸ್ಕೃತ ಕೃತಿಗಳು (ಧಾತು-ಮಾತು ಸಮನ್ವಯ) ವಿಷಯ ಕುರಿತು ತಜ್ಞರು ಮಾತನಾಡಿದರು. ಹಲವು ವಿದ್ವಾಂಸರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವರು. ಸಂಸ್ಕೃತ ಅಧ್ಯಾಪಕರು, ಸಂಶೋಧಕರು, ಪ್ರದರ್ಶಕ ಕಲೆಗಳ ಅಭ್ಯಾಸಿಗಳು ಹಾಗೂ ಕಲಾಸಕ್ತರಿಗೆ ಈ ವಿಚಾರ ಸಂಕಿರಣವು ಉಪಯುಕ್ತವಾಗಿದೆ. ಭಾಗವಹಿಸಲಿರುವ ಆಸಕ್ತರು ಏ.24 ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ವಿವಿಯ ಕುಲಸಚಿವ ಪ್ರೊ. ವೈ.ಎನ್. ಸಿದ್ದೇಗೌಡ ತಿಳಿಸಿದ್ದಾರೆ. ಡಾ.ಎಂ.ಎಸ್. ಶೇಖರ್, ಪರೀಕ್ಷಾಂಗ ಕುಲಸಚಿವ, ದೂ. 0821 2419443 ಅಥವಾ ಮೊ. 94820-13998 ಅಥವಾ ಎಚ್.ಎಂ. ನಟರಾಜು ಮೊ. 84530-75207 ಸಂಪರ್ಕಿಸಬಹುದು.

ಕಲುಷಿತ ನೀರು ಸೇವಿಸಿ 50ಕ್ಕೂ ಹೆಚ್ಚು ಅಸ್ವಸ್ಥ
ಮೈಸೂರು: ಕಲುಷಿತ ನೀರು ಸೇವಿಸಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಭಾನುವಾರ ನಡೆದಿದೆ. ಟಿ. ನರಸೀಪುರ ತಾಲೂಕಿನ ತಲಕಾಡು ಬಳಿಯ ಕಾಳಬಸನಹುಂಡಿಯಲ್ಲಿ ಕುಡಿಯುವ ನೀರಿಗೆ ಚರಂಡಿ ನೀರು ಸೇರಿದ್ದೇ  ಗ್ರಾಮಸ್ಥರು ಅಸ್ವಸ್ಥಗೊಳ್ಳಲು ಕಾರಣ ಎಂದು ತಿಳಿದು ಬಂದಿದೆ. ಅಸ್ವಸ್ಥರನ್ನು ಮೈಸೂರಿನ ಸಾಂಕ್ರಮಿಕ ರೋಗ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಸರಗಳ್ಳರ ಸೆರೆ, ನಾಡ ಪಿಸ್ತೂಲ್ ವಶ
ಗುಲ್ಬರ್ಗ: ನಗರದ ಹಲವಾರು ಕಡೆ ಮಹಿಳೆಯರ ಸರಗಳನ್ನು ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 5 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ.
ಅಮೀನಾ ಮೊಹಲ್ಲಾದ ಅರುಣ ಡೆಂಗೆ(32), ಗುಲ್ಶನ್ ಅರಾವತ್ ಕಾಲೋನಿಯ ಬಿಲಾಲ್ ಅಲಿಯಾಸ್ ಮಹ್ಮದ್ ಬಿಲಾಲ್ ಶೇಖ್(27) ಬಂಧಿತರು. ಬಂಧಿತರು ಗಣೇಶ ನಗರ, ರಾಜಾಪುರ, ರಿಂಗ್ ರೋಡ್, ಭರತ ನಗರ ತಾಂಡಾ, ಜಯನಗರ, ಡಾಲರ್ಸ್  ಕಾಲೋನಿ ಹಾಗೂ ಜೇವರ್ಗಿಯಲ್ಲಿ ಪಾದಚಾರಿ ಮಹಿಳೆಯರ ಮಂಗಳಸೂತ್ರಗಳನ್ನು ಬೈಕ್ ಮೇಲೆ ಬಂದು ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಅಲ್ಲದೆ ನಗರದ ಹೊರವಲಯದಲ್ಲಿ ವ್ಯಕ್ತಿ ಮೇಲೆ ಗುಂಡು ಹಾರಿಸಿ ಚಿನ್ನದ ಸರ ದರೋಡೆ ಮಾಡಿದ್ದನ್ನು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ. ಇವರ ಬಳಿಯಿದ್ದ ನಾಡ ಪಿಸ್ತೂಲ್, ಐದು ಜೀವಂತ ಕಾಡತೂಸುಗಳು, 15 ತೊಲೆ ಚಿನ್ನಭರಣ, ಬೈಕನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಅಮಿತ್‌ಸಿಂಗ್ ತಿಳಿಸಿದ್ದಾರೆ.
ಸರಗಳ್ಳರ ಪತ್ತೆಗೆ ಎಎಸ್ಪಿ ಸಂತೋಷ ಬಾಬು ನೇತೃತ್ವದ ತಂಡವನ್ನು ರಚಿಸಲಾಗಿತ್ತು. ಖಚಿತ ಮಾಹಿತಿಯಂತೆ ಎಸ್ಪಿ ಅಮಿತ್‌ಸಿಂಗ್ ಮತ್ತು ಹೆಚ್ಚುವರಿ ಎಸ್ಪಿ ಕಾಶಿನಾಥ ತಳಕೇರಿ ಮಾರ್ಗದರ್ಶನದಲ್ಲಿ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ತಂಡದ ಕಾರ್ಯವನ್ನು ಮೆಚ್ಚಿದ ಎಸ್ಪಿ ತನಿಖಾ ತಂಡಕ್ಕೆ 10 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ. ಫರಹತಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಯೋಧನ ಸ್ಮಾರಕ ಜಖಂ
ಮದ್ದೂರು: ತಾಲೂಕಿನ ಗೆಜ್ಜಲಗೆರೆಯ ಕೈಗಾರಿಕಾ ಪ್ರದೇಶದ ಬಳಿಯ ರುದ್ರಭೂಮಿಯಲ್ಲಿ ನಿರ್ಮಿಸಿದ್ದ ವೀರಯೋಧ ದಿ.ಜಿ.ಎಂ. ಸುಮಂತ್ ಅವರ ಸಮಾಧಿಯ ಸ್ಮಾರಕ ಕಲ್ಲನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 20 ದಿನ ಹಿಂದೆ ಜಮ್ಮವಿನ ಪೂಂಖ್ ಕಣಿವೆಯಲ್ಲಿ ಸಂಭವಿಸಿದ ಟ್ರಕ್ ಅಪಘಾತದಲ್ಲಿ ಗೆಜ್ಜಲಗೆರೆಯ ಯೋಧ ಜಿ.ಎಂ. ಸುಮಂತ್ ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರ ಕೈಗಾರಿಕಾ ಪ್ರದೇಶದ ರುದ್ರಭೂಮಿಯಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರೆವೇರಿತ್ತು. ಅದೇ ಸ್ಧಳದಲ್ಲಿ ಅವರ ಸ್ಮರಣಾರ್ಥ ಸ್ಮಾರಕ ನಿರ್ಮಿಸಲಾಗಿತ್ತು. ದುಷ್ಕರ್ಮಿಗಳು ಎರಡು ದಿನ ಹಿಂದೆ ಸ್ಮಾರಕದ ಕಲ್ಲನ್ನು ಜಖಂಗೊಳಿಸಿ ಪರಾರಿಯಾಗಿದ್ದಾರೆ. ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ನಾಯಕ ಹತ್ಯೆ: ಇನ್ನೊಬ್ಬ ಆರೋಪಿ ಬಂಧನ
ಕಾರವಾರ: ಉದ್ಯಮಿ ಆರ್.ಎನ್. ನಾಯಕ ಹತ್ಯೆಗೆ ಪಿಸ್ತೂಲು ಒದಗಿಸಿದ್ದ ಆರೋಪದ ಮೇಲೆ ಅಂಕಿತ್ ಎಂಬಾತನನ್ನು ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಬಂಧಿಸಿ ಕರೆತರಲಾಗಿದೆ. ಅಂಕಿತ್ (27) ಆರ್.ಎನ್. ನಾಯಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 13ನೇ ಆರೋಪಿ. ಸದ್ಯ ಕಾರವಾರ ಠಾಣೆಯಲ್ಲಿ ಮೂವರು ಆರೋಪಿಗಳನ್ನು ಇಡಲಾಗಿದೆ. ಕಾರವಾರದಲ್ಲಿ ಸೆಕೆ ಇರುವುದರಿಂದ ಆರೋಪಿಗಳನ್ನು ಇಡಲಾದ ಕಸ್ಟಡಿಯಲ್ಲಿ ಏರ್ ಕೂಲರ್ ವ್ಯವಸ್ಥೆ ಮಾಡಲಾಗಿದೆ.

'ಆ' ಒಳಾಕ್ಷರ, ರು. ಚಿಹ್ನೆ ಇರುವ ರು. 10ರ ನೋಟುಗಳು ಬಿಡುಗಡೆ
ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಡಾ. ರಘುರಾಮ್ ಜಿ. ರಾಜನ್ ಅವರ ಸಹಿಯುಳ್ಳ ಎರಡು ಸಂಖ್ಯಾಂಕಣಗಳಲ್ಲಿ 'ಆ' ಒಳಾಕ್ಷರವಿರುವ ರು. ಚಿಹ್ನೆ ಹೊಂದಿರುವ ಹೊಸ 10ರ ನೋಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.  ಮಹಾತ್ಮಗಾಂಧಿ ಶ್ರೇಣಿಯ 2005ರ 10ರ ನೋಟುಗಳನ್ನು ಶೀಘ್ರ ಬಿಡುಗಡೆ ಮಾಡಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಪ್ರಾದೇಶಿಕ ನಿರ್ದೇಶಕಿ ಉಮಾ ಶಂಕರ್ ತಿಳಿಸಿದ್ದಾರೆ. ಹೊಸದಾಗಿ ನೀಡಲಿರುವ ನೋಟುಗಳ ವಿನ್ಯಾಸವು ಈ ಹಿಂದೆ ನೀಡಲಾದ ಮಹಾತ್ಮ ಗಾಂಧಿ ಶ್ರೇಣಿ 2005ರ ರು. 10 ಬ್ಯಾಂಕು ನೋಟುಗಳಂತಯೇ ಇರುತ್ತವೆ. ಈ ಹಿಂದಿನ ರು. 10 ರ ಮೌಲ್ಯವರ್ಗದ ಎಲ್ಲಾ ನೋಟುಗಳು ವಿಧಿಮಾನ್ಯ ಚಲಾವಣೆಯಲ್ಲಿ ಮುಂದುವರಿಯುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement