'ಕೈ' ಬಲಕ್ಕೆ ಹಲವರ ಬೆಂಬಲ
ಕ.ಪ್ರ.ವಾರ್ತೆ ಮೈಸೂರು ಏ. 13
ಈ ಲೋಕಸಭಾ ಚುನಾವಣೆಯಲ್ಲಿ ಪೌರ ಕಾರ್ಮಿಕ ಸಮುದಾಯದವರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮಾಜಿ ಮೇಯರ್ ನಾರಾಯಣ್ ಮನವಿ ಮಾಡಿದರು. ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದರು. ಜೊತೆಗೆ ಹೈಕೋರ್ಟ್ ಸಹ ಪೌರಕಾರ್ಮಿಕರನ್ನು ಕಾಯಂಗೊಳಿಸಲು ಸೂಚಿಸಿದೆ. ಚುನಾವಣೆಯ ನಂತರ ಸಚಿವ ಸಂಪುಟದ ಸಭೆ ನಡೆಸಿ, ಉಪ ಸಮಿತಿ ರಚಿಸಿ ಪೌರಕಾರ್ಮಿಕರನ್ನು ಕಾಯಂಗೊಳಿಸುವುದಾಗಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಮುಖಂಡರಾದ ವೆಂಕಟೇಶ್, ಶಿವಣ್ಣ, ಬಸವಣ್ಣ ಇದ್ದರು.
ಬಂಜಾರ ಸಮುದಾಯ
ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಅವರನ್ನು ಬೆಂಬಲಿಸುವಂತೆ ಬಂಜಾರ (ಲಂಬಾಣಿ) ಸಮುದಾಯದವರಿಗೆ ಭಾರತ್ ಬಂಜಾರ (ಲಂಬಾಣಿ) ಸೇವಾಲಾಲ್ ಸೇನೆಯ ಜಿಲ್ಲಾಧ್ಯಕ್ಷ ಎಚ್.ಎಲ್. ಬಸವರಾಜ ನಾಯ್ಕ ಕೋರಿದರು. ಬಂಜಾರ ಸಮುದಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ 50 ಕೋಟಿ ರು. ಅನುದಾನ ನೀಡಿದ್ದಾರೆ. ತಾಂಡಾ ಅಭಿವೃದ್ಧಿ ನಿಗಮದ ಪ್ರಾದೇಶಿಕ ಕಚೇರಿಗಳನ್ನು ಮೈಸೂರು ಸೇರಿದಂತೆ ರಾಜ್ಯದ 4 ಕಡೆ ಆರಂಭಿಸಿದ್ದಾರೆ. ಹೀಗಾಗಿ, ಬಂಜಾರರು ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಬಲಪಡಿಸಬೇಕು ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ಸೇನೆಯ ಕಾರ್ಯದರ್ಶಿ ಎಚ್. ರಮೇಶ್‌ನಾಯ್ಕ, ಮುಖಂಡರಾದ ಪ್ರಸಾದ್ ನಾಯ್ಕ, ಸಿದ್ದು ನಾಯ್ಕ, ಶ್ರೀನಿವಾಸ್, ಜಯರಾಮ್ ಮತ್ತಿತರರು ಇದ್ದರು.
ವಿಶ್ವಕರ್ಮ ಮಹಾಸಭಾ
ವಿಶ್ವಕರ್ಮ ಸಮುದಾಯದವರು ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಅವರನ್ನು ಬೆಂಬಲಿಸುವಂತೆ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ಚಂದ್ರು ವಿಶ್ವಕರ್ಮ ಮನವಿ ಮಾಡಿದರು. ಎಲ್ಲ ಜನಾಂಗದ ಹಿತ ಕಾಪಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವ ಮೂಲಕ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಬಲಪಡಿಸುವಂತೆ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು. ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಕಾಂಗ್ರೆಸ್ ಬೆಂಬಲಿಸಿ, ರಾಜ್ಯಾದ್ಯಂತ ಕಾಂಗ್ರೆಸ್ ಪರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಮೈಸೂರು, ಮಡಿಕೇರಿ, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯಲ್ಲಿರುವ ವಿಶ್ವಕರ್ಮರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತಚಲಾಯಿಸಬೇಕು ಎಂದು ಕರೆ ನೀಡಿದರು. ಮುಖಂಡರಾದ ಎಸ್.ಪಿ. ಲೋಕೇಶ್, ಪಿ. ಸಿದ್ದಾಚಾರ್, ಎಂ.ಎನ್. ಬಸವರಾಜು, ಪಿ. ಬಸವರಾಜು, ಪುಟ್ಟಸ್ವಾಮಚಾರ್ ಇದ್ದರು.
ಕೆಎಸ್‌ಆರ್‌ಟಿಸಿ ಕಾರ್ಮಿಕರು
ಕೆಎಸ್‌ಆರ್‌ಟಿಸಿ ಕಾರ್ಮಿಕರು ಕಾಂಗ್ರೆಸ್‌ಗೆ ಮತ ನೀಡಬೇಕು ಎಂದು ಕೆಎಸ್‌ಆರ್‌ಟಿಸಿ ಕೆಲಸಗಾರರ ಸಂಘದ ಗೌರವ ಅಧ್ಯಕ್ಷ ಎಂ. ಮಲ್ಲಯ್ಯ ಕೋರಿದ್ದಾರೆ. ಸಾರಿಗೆ ಸಂಸ್ಥೆ, ಮೈಸೂರು ನಗರ, ಮೈಸೂರು ಗ್ರಾಮಾಂತರ, ಮಂಡ್ಯ, ಚಾಮರಾಜನಗರ ಮತ್ತು ಪುತ್ತೂರು ವಿಭಾಗಗಳ ಐಎನ್‌ಟಿಯುಸಿ ಸಂಘಟನೆಗೆ ಸೇರಿದ ಕಾರ್ಮಿಕರು ಸಭೆ ನಡೆಸಿ ಕಾಂಗ್ರೆಸ್‌ಗೆ ಮತ ನೀಡಲು ತೀರ್ಮಾನಿಸಿದೆ. ಕೇಂದ್ರ ಸರ್ಕಾರ ಕಾರ್ಮಿಕರ ಗ್ರಾಚ್ಯುಟಿ ಗರಿಷ್ಠ ಮೊತ್ತವನ್ನು ರು. 2.5 ಲಕ್ಷ ದಿಂದ 10 ಲಕ್ಷಕ್ಕೆ ಏರಿಸಿದೆ. ಕಾರ್ಮಿಕರು, ನಿವೃತ್ತರಾದಾಗ ಗ್ರಾಚ್ಯುಯಿಟಿ ಹಣವನ್ನು ರು.10 ಲಕ್ಷದವರೆಗೆ ಪಡೆಯಬಹುದು ಎಂದು ಹೇಳಿದ್ದಾರೆ. ಆದ್ದರಿಂದ ಕಾಂಗ್ರೆಸ್‌ಗೆ ಈ ಬಾರಿ ಬೆಂಬಲಿಸುವುದಾಗಿ ಎಂ. ಮಲ್ಲಯ್ಯ ತಿಳಿಸಿದ್ದಾರೆ.