ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕೋಮುತನಕ್ಕೆ ಅಭಯ ನೀಡಿದ್ದೇ 'ಹಸ್ತ'

Srinivasa Murthy VN
Updated On : 14 Apr 2014, 1:25 am

ಕ.ಪ್ರ.ವಾರ್ತೆ ಮೈಸೂರು ಏ. 13
ಅಖಂಡ ಭಾರತ ವಿಭಜಿಸಿದ ಕಾಂಗ್ರೆಸ್ ನಾಯಕರೇ ನಿಜವಾದ ಕೋಮುವಾದಿಗಳು ಎಂದು ಮಾಜಿ ಸಂಸದೆ ತೇಜಸ್ವಿನಿ ರಮೇಶ್ ವಾಗ್ದಾಳಿ ನಡೆಸಿದರು.
ನಗರದ ಗೋವಿಂದರಾವ್ ಸ್ಮಾರಕ ಸಭಾಂಗಣದಲ್ಲಿ ಭಾನುವಾರ ನಡೆದ ಚಾಮರಾಜ ವಿಧಾನಸಭಾ ಬಿಜೆಪಿ ಮಹಿಳಾ ಮೋರ್ಚಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಅಮೆರಿಕಾದಲ್ಲಿ ಒಬ್ಬ ಕ್ರಿಶ್ಚಿಯನ್ ನಾನು ಕ್ರೈಸ್ತ ಎಂದರೆ ತಪ್ಪಲ್ಲ, ಪಾಕಿಸ್ತಾನದಲ್ಲಿ ಒಬ್ಬ ಪಾಕಿಸ್ತಾನಿ ನಾನು ಮುಸಲ್ಮಾನ ಎಂದರೆ ತಪ್ಪಲ್ಲ. ಆದರೆ ಭಾರತದಲ್ಲಿ ಒಬ್ಬ ಭಾರತೀಯ ನಾನು ಹಿಂದೂ ಎಂದರೆ ಆತನಿಗೆ ಕೋಮುವಾದದ ಪಟ್ಟ ಕಟ್ಟಲಾಗುತ್ತದೆ. ದೇಶದ ವಿಭಜನೆ ಬೇಡ ಎಂದು ಅನೇಕರು ಹೇಳಿದರೂ ಕೇಳದೆ ಅಖಂಡ ಭಾರತವನ್ನು ವಿಭಜಿಸಿದವರೆ ನಿಜವಾದ ಕೋಮುವಾದಿಗಳು. ಚುನಾವಣೆ ಇನ್ನೆರಡು ದಿನ ಇದೆ ಎನ್ನುವಾಗ ಮತಗಳು ಬದಲಾಗುತ್ತವೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಕ್ಕ ಉತ್ತರ ನೀಡಬೇಕು. ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಜಯಗಳಿಸಿದ್ದು ಹೇಗೆ ಎಂಬುದು ಗೊತ್ತಿದೆ. ಈ ಚುನಾವಣೆ ಪ್ರಾಮಾಣಿಕವಾಗಿ ನಡೆದರೆ ಬಿಜೆಪಿ ಜಯಗಳಿಸುವುದರಲ್ಲಿ ಸಂಶಯ ಇಲ್ಲ ಎಂದರು.
ಅಡುಗೆ ಮನೆಯಿಂದ ಹೊರಬನ್ನಿ: ರಾಜಕಾರಣಕ್ಕೂ ಮಹಿಳೆಯರಿಗೂ ಸಂಬಂಧ ಇಲ್ಲ ಎಂದು ಅಡುಗೆ ಮನೆ ಸೇರುವಂತಿಲ್ಲ. ಹಾಲು, ಸಿಲಿಂಡರ್, ಈರುಳ್ಳಿ, ಸಕ್ಕರೆ, ಬೇಳೆ, ಅಕ್ಕಿ, ಪೆಟ್ರೋಲ್ ಮುಂತಾದ ದಿನ ನಿತ್ಯದ ವಸ್ತುಗಳ ಬೆಲೆ ಏರುತ್ತಲಿದೆ. ಕಾಂಗ್ರೆಸ್ ಕೈಯಲ್ಲಿ ಈಗ ಅಧಿಕಾರ, ಅಧಿಕಾರಿಗಳು, ಪೊಲೀಸು, ಹೆಂಡ, ಹಣ ಎಲ್ಲವೂ ಇದೆ. ನಮ್ಮ ಬಳಿ ಬ್ರಹ್ಮ ಕಮಲ ಇದೆ. ಧರ್ಮ ಯುದ್ಧಕ್ಕಾಗಿ, ದೇಶದ ಭವಿಷ್ಯಕ್ಕಾಗಿ ನಾವು ಹೋರಾಟ ನಡೆಸಬೇಕು. ಯುದ್ಧಗಳಲ್ಲಿ ಬಂದೂಕು, ಗುಂಡು ಮಾತನಾಡುವುದಿಲ್ಲ. ಯುದ್ಧ ಮಾಡುವವನ ಮನಸ್ಸು ಕೆಲಸ ಮಾಡುತ್ತದೆ. ಅಂತೆಯೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದರು.
ಗಾಳಿಗೆ ಎಂದೂ ಬಣ್ಣ ಇರುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಮೋದಿ ಅಲೆ ಇಲ್ಲ ಎನ್ನುತ್ತಿದ್ದಾರೆ. ಆದರೆ ಗಾಳಿಗೆ ಎಂದೂ ಬಣ್ಣ ಇರುವುದಿಲ್ಲ. ವೇಗವಷ್ಟೆ ಇರುತ್ತದೆ. ಮೋದಿ ಅವರ ಬಗ್ಗೆ ನಮಗಿಂತ ಹೆಚ್ಚು ಚಿಂತೆ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ. ಮೋದಿ ಸ್ವಂತ ಶಕ್ತಿಯಿಂದ ಮೇಲೆ ಬಂದಿದ್ದಾರೆಯೆ ಹೊರತು, ರೆಡಿಮೇಡ್ ವಸ್ತುವಿನಂತೆ ಬಂದವರಲ್ಲ ಎಂದು ರಾಹುಲ್‌ಗಾಂಧಿಗೆ ಟಾಂಗ್ ನೀಡಿದರು.
ಅಧಿಕಾರ ಸಿಕ್ಕಿ, ಹಣ ಸಂಪಾದಿಸುತ್ತಿದ್ದಂತೆಯೆ ಇರುವ ಹೆಂಡತಿ ಬಿಟ್ಟು ಗರ್ಲ್ ಫ್ರೆಂಡ್ಸ್ ಹುಡುಕುವ ಚಾಳಿ ಇರುವವರಿಂದ ಮೋದಿ ಪಾಠ ಕಲಿಯಬೇಕಿಲ್ಲ. ಅರವತ್ತು ವರ್ಷಗಳಿಂದ ಕೇಂದ್ರದಲ್ಲಿ ಮೊಳೆ ಹೊಡೆದುಕೊಂಡು ಕೂತು, ಕೈ ಬೀಸಿ ಮತ ಪಡೆಯುವವರನ್ನು ಅಧಿಕಾರದಿಂದ ಕೆಳಗಿಳಿಸಬೇಕು. ದೇಶದ ಯೋಧರನ್ನು ಕಾಪಾಡುವ ಯೋಗ್ಯತೆ ಅವರಿಗೆ ಇಲ್ಲ. ನಮ್ಮ ಹಿತ್ತಲಿಗೆ ಯಾವದೋ ದನ ನುಗ್ಗಿದರೆ ನಾವು ಸುಮ್ಮನೆ ಇರುವುದಿಲ್ಲ. ಅಂತದ್ದರಲ್ಲಿ ಚೀನಾ 3,500 ಬಾರಿ ಭಾರತವನ್ನು ಅತಿಕ್ರಮಿಸಿಕೊಂಡಿದೆ. ಅರುಣಾಚಲಪ್ರದೇಶವನ್ನು ತನ್ನ ಭೂಪಟದಲ್ಲಿ ಸೇರಿಸಿಕೊಂಡಿದೆ. ಆದರೂ ಕೈಕಟ್ಟಿ ಕೂರುವ ಅಗತ್ಯವಿದೆಯೆ ಎಂದು ಅವರು ಪ್ರಶ್ನಿಸಿದರು.
ಮೋದಿಗೆ ಎರಡು ಮುಖ ಎನ್ನುವ ಸಿದ್ದರಾಮಯ್ಯ ಅವರೇ ನಿಮ್ಮ ಸಂಪುಟದಲ್ಲಿ ಗೂಳಿ ಇದೆ. ಕೆಪಿಸಿಸಿ ಅಧ್ಯಕ್ಷರೇ ಇಂಧನ ಸಚಿವರನ್ನು ಗೂಳಿ ಎಂದು ಹೇಳಿದ್ದಾರೆ. ಮೊದಲು ಅದನ್ನು ಸರಿಪಡಿಸಿ. ಈಗ ಮೋದಿ 'ಭಾರತ ಗೆಲ್ಲಿಸಿ' ಎನ್ನುತ್ತಿದ್ದಾರೆ. ಅಧಿಕಾರಕ್ಕೆ ಬಂದ ಬಳಿ ಯಾಸಿನ್ ಭಟ್ಕಳ್‌ನ ಕರಳನ್ನು ಬಗೆದು ತಾಯಿ ಭಾರತಾಂಬೆ ಕೊರಳಿಗೆ ಮಾಲೆ ಹಾಕುವ ನರಸಿಂಹನಾಗುತ್ತಾರೆ ಕಾಯುತ್ತೀರಿ ಎಂದು ತಿರುಗೇಟು ನೀಡಿದರು.
ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ರೀನಾ ಪ್ರಕಾಶ್ ಮಾತನಾಡಿ, ಭಾರತದ ರಕ್ಷಣೆಗೆ ಮತ್ತು ಉಳಿವಿನ ಕಾರಣಕ್ಕೆ ಈ ಬಾರಿ ಬಿಜೆಪಿಗೆ ಮತ ನೀಡಬೇಕು. ಇಂದಿರಾಗಾಂಧಿ ಹತ್ಯೆ ಬಳಿಕ 3 ಸಾವಿರಕ್ಕೂ ಹೆಚ್ಚು ಮಂದಿ ಸಿಖ್‌ರನ್ನು ಹತ್ಯೆಗೈದವರು ನಿಜವಾದ ನರಹಂತಕರೇ ಹೊರತು ನರೇಂದ್ರಮೋದಿ ಅಲ್ಲ. ಈ ಸತ್ಯ ಎಲ್ಲರಿಗೂ ಅರಿವಾಗಬೇಕು ಎಂದು ಹೇಳಿದರು.
ಅರ್ಪಿತಾ ಪ್ರತಾಪ್‌ಸಿಂಹ ಮಾತನಾಡಿ, ಚುನಾವಣೆ ಎರಡು ದಿನ ಇರುವಂತೆ ಜನ ಬದಲಾಗುತ್ತಾರೆ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ವಿದ್ಯಾವಂತ ವರ್ಗ ಚುನಾವಣಾ ರಜೆಯಲ್ಲಿ ಪ್ರವಾಸಕ್ಕೆ ತೆರಳದೆ, ಇತರರು ಹಣ, ಹೆಂಡಕ್ಕೆ ಬಲಿಯಾಗದೆ ಎಲ್ಲರೂ ಬಂದು ಕಡ್ಡಾಯವಾಗಿ ಮತದಾನ ಮಾಡಿ. ಈ ಬಾರಿ ಬಿಜೆಪಿಗೂ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಸ್ಲಂ ಮೋರ್ಚಾ ರಾಜ್ಯ ಅಧ್ಯಕ್ಷ ಎಲ್. ನಾಗೇಂದ್ರ, ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ವಿದ್ಯಾ ಅರಸ್, ನಗರ ಅಧ್ಯಕ್ಷೆ ಶಾಂತ, ಉಪಾಧ್ಯಕ್ಷೆ ಆಶಾ ನಾಗಭೂಷಣ್, ಚಾಮರಾಜ ಕ್ಷೇತ್ರದ ಅಧ್ಯಕ್ಷ ಸೋಮಸುಂದರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement