ನಾಯಕರೇ, ಎಲ್ಲಿ ನಿಮ್ಮ ಸಾಧನೆ!
-ಅಂಶಿ ಪ್ರಸನ್ನಕುಮಾರ್ / ಎಚ್.ಟಿ. ಅನಿಲ್
ಮೈಸೂರು/ ಮಡಿಕೇರಿ: ಕಳೆದ 5 ವರ್ಷದಲ್ಲಿ ಕೇಂದ್ರದಿಂದ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತದಾರರು ಪ್ರಶ್ನಿಸುತ್ತಿರುವುದು, ಅಲ್ಲಲ್ಲಿ ಚರ್ಚೆ ನಡೆಯುತ್ತಿರುವುದು ಗಮನಾರ್ಹ ಸಂಗತಿ. ಐದು ವರ್ಷಗಳಲ್ಲಿ ನೀವೇನು ಮಾಡಬೇಕಿತ್ತು. ಮಾಡಿದ್ದೀರಿ ಎಂದು ಜನ ಕೇಳುತ್ತಿದ್ದಾರೆ.
-ಮೈಸೂರು ನಗರಕ್ಕೆ ನರ್ಮ್ನಿಂದ 1,292 ಕೋಟಿ ಸಿಕ್ಕಿದೆ. ನಗರದ 30 ಬಡಾವಣೆ ಹಾಗೂ ಸುತ್ತಮುತ್ತಲಿನ 40 ಗ್ರಾಮಗಳ ಕುಡಿವ ನೀರಿನ ಯೋಜನೆಗೆ ಈ ಹಣ ಬಳಕೆಯಾಗಲಿದೆ. ನಗರದ ಒಳಚರಂಡಿ, ಸಂಚಾರ ವ್ಯವಸ್ಥೆ, ಪಾರಂಪರಿಕ ತಾಣಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ.
-ರಾಜೀವ್ ಅವಾಜ್ ಯೋಜನೆಯಲ್ಲಿ ಮೈಸೂರು ನಗರವನ್ನು ಕೊಳಚೆ ಪ್ರದೇಶ ಮುಕ್ತವಾಗಿ ಮಾಡಲು ಸಮೀಕ್ಷೆ ಕಾರ್ಯಕ್ಕೆ ರು.4.5 ಕೋಟಿ ನೀಡಲಾಗಿದೆ. ಶೋಷಿತ ವರ್ಗದವರಿಗೆ 6 ಸಾವಿರ ಮನೆ ನಿರ್ಮಿಸಲು ನೆರವು ಸಿಗುತ್ತಿದೆ.
-ಮೈಸೂರು ವಿವಿ ಉತ್ಕೃಷ್ಟ ಕೇಂದ್ರವಾಗಿ ಅಭಿವೃದ್ಧಿಪಡಿಸಲು 2 ಕಂತುಗಳಲ್ಲಿ ರು.150 ಕೋಟಿ ದೊರೆತಿದೆ.
-350 ಕೋಟಿ ರು.ಗಳ ಮೈಸೂರು- ಮಡಿಕೇರಿ ರೇಲ್ವೆ ಮಾರ್ಗಕ್ಕಾಗಿ ಕುಶಾಲನಗರವರೆಗೆ ರು.5.5 ಕೋಟಿ ವೆಚ್ಚದಲ್ಲಿ ಸಮೀಕ್ಷೆ ನಡೆಸಲವಾಗಿದೆ. ಭೂಸ್ವಾಧೀನ ಕಾರ್ಯ ಆರಂಭವಾಗಿದೆ.
-ಮೈಸೂರು ರೇಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ರೈಲುಗಳನ್ನು ನಿಲ್ಲಿಸಲು ಜಾಗ ಇಲ್ಲ. ಹೀಗಾಗಿ ಬೆಳಗೊಳದಲ್ಲಿ 2ನೇ ರೈಲ್ವೆ ನಿಲ್ದಾಣ ನಿರ್ಮಿಸಲು ಒಪ್ಪಿಗೆ ಸಿಕ್ಕಿದ್ದು, ಕೆಲಸ ಆರಂಭವಾಗಿದೆ.
-2010ರಲ್ಲಿ ಮಂಜೂರಾಗಿರುವ ರೇಲ್ವೆ ವೈದ್ಯಕೀಯ ಕಾಲೇಜು ರೈಲ್ವೆ ಕಾರ್ಯಾಗಾರದ 18 ಎಕರೆ ಜಮೀನಿನಲ್ಲಿ ಆರಂಭಿಸಲು ಹಸಿರು ನಿಶಾನೆ ಸಿಕ್ಕಿದೆ.
-ಅಶೋಕಪುರಂ ರೇಲ್ವೆ ಕಾರ್ಯಾಗಾರ ಮೇಲ್ದರ್ಜೆಗೇರಿಸಲು ಅನುಮತಿ ಸಿಕ್ಕಿದೆ. ನಗರದ ದೇಶದ ವಿವಿಧ ಭಾಗಗಳಿಗೆ 14 ಹೊಸ ರೈಲುಗಳು ಆರಂಭವಾಗಿವೆ. ಸುಸಜ್ಜಿತ ಗೂಡ್ಶೆಡ್ ನಿರ್ಮಾಣವಾಗಿದೆ. ಮೈಸೂರು-ಕೊಡಗಿನಲ್ಲಿ 6 ರೈಲ್ವೆ ಕೌಂಟರ್ಗಳನ್ನು ತೆರೆಯಲಾಗಿದೆ. ಅಸಂಘಟಿತ ಕಾರ್ಮಿಕರ 200 ಕಿ.ಮೀ. ಪ್ರಯಾಣಕ್ಕೆ ಮಾಸಿಕ ರು.25 ಇಜತ್ ಪಾಸ್ ಕೊಡಿಸಲಾಗಿದೆ.
-ಕೊಡಗಿನ ಕಾಫಿ ಬೆಳೆಗಾರರಿಗೆ ರು.1,400 ಕೋಟಿ ಪ್ಯಾಕೇಜ್ ಸಿಕ್ಕಿದೆ. ಕೊಡಗಿನಲ್ಲಿ ಒನ್ಜಿಸಿ ಸಹಯೋಗದಲ್ಲಿ ರು.1.5 ಕೋಟಿ ವೆಚ್ಚದಲ್ಲಿ ಮೂರು ತೂಗು ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಕೊಡಗಿನಲ್ಲಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಶಂಕುಸ್ಥಾಪನೆ.
-ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಕೊಡಗಿನ 101.25 ಕಿ.ಮೀ. ರಸ್ತೆ ಅಭಿವೃದ್ಧಿ.
-ಮೈಸೂರು ವಿಮಾನ ನಿಲ್ದಾಣ ಉನ್ನತೀಕರಣಕ್ಕೆ 140 ಕೋಟಿ ರು. ನೀಡಿದ್ದು, ರಾಜ್ಯ ಸರ್ಕಾರದಿಂದ ಭೂಸ್ವಾಧೀನ ಮತ್ತಿತರ ಸಹಾಯ ಆಗಬೇಕಿದೆ. ಈಗ ಪ್ರತಿನಿತ್ಯ ಒಂದು ವಿಮಾನ ಹಾರಾಟ ನಡೆಸುತ್ತಿದೆ.
-ಮೈಸೂರಿನಲ್ಲಿ ನಾಲ್ಕು ಕಡೆ ಫ್ಲೈಓವರ್ ನಿರ್ಮಿಸಲು ಹಾಗೂ ರೈಲ್ವೆ ಸೇತುವೆಗಳ ವಿಸ್ತರಣೆಗೆ ಅನುಮತಿ ಸಿಕ್ಕಿದೆ.
-ಮೈಸೂರನ್ನು ಸೌರಶಕ್ತಿ ನಗರವಾಗಿಸಲು 450 ಕೋಟಿ ರು.ಗಳ ಯೋಜನೆ ರೂಪಿಸಲಾಗಿದೆ. ಸಮೀಕ್ಷೆ ಮತ್ತಿತರ ಕಾರ್ಯಕ್ಕೆ 5 ಕೋಟಿ ರು. ಬಿಡುಗಡೆಯಾಗಿದೆ.
-ಬೆಂಗಳೂರು- ಮಡಿಕೇರಿ-ಮಂಗಳೂರು, ಮಳವಳ್ಳಿ- ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಸೇರಿಸಲು ಯತ್ನ ನಡೆದಿದೆ.
-ತಂಬಾಕು ಬೆಳಾಗರಿರಗೆ ಅನುಕುಲ ಮಾಡಿಕೊಡಲು ಇ- ಹರಾಜು ಕೇಂದ್ರ, ಪಿರಿಯಾಪಟ್ಟಣದಲ್ಲಿ ಪ್ರಾದೇಶಿಕ ವ್ಯವಸ್ಥಾಪಕರ ಕಚೇರಿ ತೆರೆಯಲಾಗಿದೆ. ತಂಬಾಕಿಗೆ ಸೂಕ್ತ ಬೆಳೆ, ಪ್ಯಾಕೇಜ್ ನೀಡಲಾಗುತ್ತಿದೆ.
-ಅರಣ್ಯ ವಾಸಿಗಳಿಗೆ 78.62 ಕೋಟಿ ರು.ಗಳ ವೆಚ್ಚದಲ್ಲಿ ಮನೆ ನಿರ್ಮಿಸಲಾಗಿದೆ. ಇವುಗಳಲ್ಲಿ ಮೈಸೂರಿನ 79, ಕೊಡಗಿನ 40 ಹಾಡಿಗಳು ಸೇರಿವೆ. ಕೊಡಗಿನ ಹಾಡಿಗಳಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ. 280 ಆದಿವಾಸಿ ಕುಟುಂಬಗಳಿಗೆ ಜಮೀನು ಆಧಾರಿತ ಪುನರ್ವಸತಿ ಕಲ್ಪಿಸಲಾಗಿದೆ.
-ಕೊಡಗು ಜಿಲ್ಲೆಯ ಸಣ್ಣ ಕಾಫಿ ಬೆಳೆಗಾರರಿಗೆ 107.14 ಕೋಟಿ ರು. ಸಾಲ ಮನ್ನಾ ಮಾಡಿದೆ. ಕಾರ್ಮಿಕರ ಹಿತರಕ್ಷಣೆಗಾಗಿ ಯಂತ್ರೋಪಕರಣ ಅಳವಡಿಸಲು ಶೇ.50 ರಷ್ಟು ಸಹಾಯಧನ ನೀಡಲಾಗಿದೆ. 2.05 ಕೋಟಿ ರು. ವೆಚ್ಚದಲ್ಲಿ ಹನಿ ಪಾರ್ಕ್ ನಿರ್ಮಿಸಲಾಗಿದೆ.
ಕೊಡಗು ಜಿಲ್ಲೆ
-ಮಡಿಕೇರಿ - ಕೊಡಗು ಜಿಲ್ಲೆ ಮೂರು ತಾಲೂಕುಗಳ, ಎರಡು ವಿಧಾನಸಭಾ ಕ್ಷೇತ್ರಗಳ ಪುಟ್ಟ ಜಿಲ್ಲೆಯಾಗಿದ್ದರೂ ಸಮಸ್ಯೆಗಳು ಮಾತ್ರ ಈ ಜಿಲ್ಲೆಗೆ ಮೇಲಿಂದ ಮೇಲೆ ಸುನಾಮಿಯಂತೆ ಅಪ್ಪಳಿಸುತ್ತಲೇ ಇರುತ್ತದೆ.
-ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಬಗೆಹರಿಸುವಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯನ್ನು ಕೊಡಗು ಕೂಡ ಕಳೆದ 5 ವರ್ಷಗಳ ಅವಧಿಯಲ್ಲಿ ಕಂಡಿದೆ.
-ಕೊಡಗಿಗೆ ರೈಲು ಮಾರ್ಗ ಬೇಕೆಂಬುದು ಹಲವು ವರ್ಷಗಳ ಬೇಡಿಕೆ. ಸಂಸದ ವಿಶ್ವನಾಥ್ ಮೈಸೂರು- ಕುಶಾಲನಗರ ನಡುವೆ ರೇಲ್ವೆ ಮಾರ್ಗಕ್ಕಾಗಿ ಪ್ರಯತ್ನಿಸಿದ್ದರೂ ಅದಿನ್ನೂ ಈಡೇರಿಲ್ಲ. ಕುಶಾಲನಗರಕ್ಕೆ ರೇಲ್ವೆ ಬುಕ್ಕಿಂಗ್ ಕೇಂದ್ರ ನೀಡಿದ್ದೇ ಸಾಧನೆಯಾಯಿತು. ಇತ್ತೀಚಿನ ಮಾಹಿತಿ ಪ್ರಕಾರ ಈ ರೇಲ್ವೆ ಮಾರ್ಗ ಆರ್ಥಿಕವಾಗಿ ಸೂಕ್ತವಲ್ಲ ಎಂಬ ಹಿನ್ನಲೆಯಲ್ಲಿ ಯೋಜನೆಯನ್ನೇ ರೇಲ್ವೆ ಸಚಿವಾಲಯ ಕೈಬಿಟ್ಟಿದೆ. ಹೀಗಾಗಿ ಸಂಸದರು ಕೊಡಗಿಗೇ ರೈಲು ಎಂದದ್ದು ಇನ್ನೂ ರೈಲಾಗಿಯೇ ಉಳಿದಿದೆ.
-ಕೊಡಗು ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಅಭಿವೃದ್ಧಿ ಸಮರ್ಪಕವಾಗಿ ನಡೆದಿಲ್ಲ. ಇದಕ್ಕೆ ಕಾರಣ ಸ್ಥಳೀಯ ಅಧಿಕಾರಿಗಳೇ ಎನ್ನುವುದು ಸಂಸತ್ ಸದಸ್ಯರ ಸಿಟ್ಟು. ಆದರೆ ಕೇಂದ್ರ ಪುರಸ್ಕೃತ ಯೋಜನೆಗೆ ಸಂಬಂಧಿತ ಸಭೆ ನಿಯಮಿತವಾಗಿ ನಡೆಸಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವಲ್ಲಿ ಸಂಸದರು ವಿಫಲರಾಗಿದ್ದರು ಎಂಬುದು ಸತ್ಯ. ಕುಡಿಯುವ ನೀರು, ರಸ್ತೆ, ಸೇತುವೆ ಸೇರಿದಂತೆ ಅನೇಕ ಯೋಜನೆಗಳು 5 ವರ್ಷಗಳಿಂದ ಸಮರ್ಪಕ ರೀತಿಯಲ್ಲಿ ಜಾರಿಯಾಗಿಲ್ಲ.
-ಅಂತೆಯೇ ಕೊಡಗನ್ನು 16 ವರ್ಷಗಳಿಂದ ಕಾಡುತ್ತಿರುವ ಕಾಡಾನೆ ಸಮಸ್ಯೆ ಇನ್ನೂ ನಿವಾರಣೆಯಾಗಿಲ್ಲ. ಸಂಸದರಾದ ಮೊದಲಲ್ಲಿ ಹುರುಪಿನಿಂದ ವಿಶ್ವನಾಥ್ ಕಾಡಾನೆ ಸಮಸ್ಯೆ ನಿವಾರಣೆಗೆ ಅರಣ್ಯಾಧಿಕಾರಿಗಳು, ನಾಗರಿಕ ಪ್ರಮುಖರ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿ ರಚಿಸಿದ್ದರು. ಈ ಸಮಿತಿ ಕಾಡಾನೆ ಸಮಸ್ಯೆ ನಿವಾರಣೆ ಸಂಬಂಧಿತ ವರದಿಯನ್ನೂ ಸರ್ಕಾರಕ್ಕೆ ಸಲ್ಲಿಸಿತ್ತು. ವರದಿ ಧೂಳುತಿನ್ನುವ ಕಡತಗಳ ಸಾಲಿಗೆ ಸೇರಿತೇ ವಿನಾ ಕೊಡಗಿನಲ್ಲಿ ಕಾಡಾನೆ ಸಮಸ್ಯೆ ಮಾತ್ರ ನಿವಾರಣೆಯಾಗಲೇ ಇಲ್ಲ.
-ಕಸ್ತೂರಿರಂಗನ್ ವರದಿ ಕೊಡಗಿಗೆ ಇತ್ತೀಚಿಗೆ ತಗುಲಿರುವ ಆತಂಕ. ಕೊಡಗಿನ 55 ಗ್ರಾಮಗಳಿಗೆ ಕಂಟಕಪ್ರಾಯವಾಗಿರುವ ಈ ವರದಿಯನ್ನು ವಿರೋಧಿಸಿ ವಿಶ್ವನಾಥ್ ಲೋಕಸಭೆಯಲ್ಲಿ ಚಕಾರವೆತ್ತಿಲ್ಲ. ಕೊಡಗಿನ ಪಕ್ಕದ ಕೇರಳ ರಾಜ್ಯದಲ್ಲಿ ಇದೇ ವರದಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿ ಆ ರಾಜ್ಯಕ್ಕೆ ವರದಿಯ ಅನುಷ್ಠಾನದಲ್ಲಿ ಹಲವು ರಿಯಾಯಿತಿ ದೊರಕಿದ್ದರೂ ಕೊಡಗಿಗೆ ಮಾತ್ರ ಈ ನಿಟ್ಟಿನಲ್ಲಿ ವಿಶ್ವನಾಥ್ ಯಾವುದೇ ಪ್ರಯೋಜನ ಮಾಡಿಲ್ಲ ಎಂಬ ನೋವು ಜಿಲ್ಲೆಯ ಜನತೆಯಲ್ಲಿದೆ.
-ಕೊಡಗು ಜಿಲ್ಲೆಯ ಗ್ರಾಮೀಣ ಜನರಿಗೆ ದೂರವಾಣಿಯೇ ಸಂಪರ್ಕ ಸಾಧನ. ಆದರೆ ದೂರವಾಣಿ ವ್ಯವಸ್ಥೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಹದಗೆಟ್ಟಿದೆ. ದೂರು ನೀಡಿದರೂ ಪ್ರಯೋಜನವಿಲ್ಲದಂತಾಗಿದೆ. ಸಂಸತ್ ಸದಸ್ಯರು ದೂರವಾಣಿ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಸೂಕ್ತ ಸ್ಪಂದನ ನೀಡಿಲ್ಲದಿರುವುದೂ ದೂರವಾಣಿ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ.
-ಕೊಡವ ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಚೇದಕ್ಕೆ ಸೇರ್ಪಡೆಗೊಳಿಸುವ ಸಂಬಂಧ 8 ವರ್ಷಗಳಿಂದ ಕೊಡವರಿಂದ ಒತ್ತಾಯ ಕೇಳಿಬರುತ್ತಲೇ ಇದೆ. ಆದರೆ ವಿಶ್ವನಾಥ್ ಕೇವಲ ಭರವಸೆ ನೀಡುತ್ತಲೇ ಬಂದಿದ್ದರಾದರೂ ಈ ನಿಟ್ಟಿನಲ್ಲಿಯೂ ಏನೂ ಮಾಡಿಲ್ಲ ಎಂಬ ಅಸಮಾಧಾನ ಜನತೆಯಲ್ಲಿದೆ.
ಪ್ರಗತಿ ಅಂದ್ರೆ ಇದೇನಾ...!
-ಮೈಸೂರು ರಫ್ತು ಕೇಂದ್ರ, ಪ್ಯಾಕೇಜಿಂಗ್ ಗುಚ್ಚ ಅಭಿವೃದ್ಧಿಯಾಗಿಲ್ಲ
-ಮಂಡಕಳ್ಳಿ ವಿಮಾನ ನಿಲ್ದಾಣ ವಿಸ್ತರಣೆ, ಮಳವಳ್ಳಿಯಿಂದ ಮೈಸೂರುವರೆಗೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಆಗಿಲ್ಲ
-ಬೆಂಗಳೂರು-ಮೈಸೂರು- ಬಿಳಿಕೆರೆ- ಬಂಟ್ವಾಳವರೆಗಿನ ರಸ್ತೆಗೆ ರಾಷ್ಟ್ರೀಯ ಹೆದ್ದಾರಿ ಮನ್ನಣೆ ಸಿಕ್ಕಿಲ್ಲ.
-ಪಾರಂಪರಿಕ, ಪ್ರವಾಸೋದ್ಯಮವಾಗಿ ಮೈಸೂರು ಘೋಷಣೆ ಆಗಿಲ್ಲ.
-ಬೆಂಗಳೂರಿನಿಂದ ಚಾಮರಾಜನಗರಕ್ಕೆ ರೈಲು ಮಾರ್ಗ ಆಗಿಲ್ಲ.
-ಮೈಸೂರಿನಿಂದ ಕುಶಾಲನಗರಕ್ಕೆ ರೈಲು ಮಾರ್ಗ ಆಗಿಲ್ಲ.
-ತಂಬಾಕು, ಕಾಫಿ ಬೆಳೆಗಾರರ ಸಮಸ್ಯೆ, ಗಿರಿಜನರ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಕ್ಕಿಲ್ಲ
-ಕೈಗಾದಿಂದ ಮೈಸೂರಿಗೆ ಬರುತ್ತಿರುವ ಪವರ್ ಗ್ರಿಡ್ ಮಾರ್ಗ ಬದಲಾಗಿಲ್ಲ.
-ಕೊಡಗಿನ ಪ್ರವಾಸೋದ್ಯಮ ಅಭಿವೃದ್ಧಿಯಾಗಿಲ್ಲ.
-ಮೈಸೂರು- ಬೆಂಗಳೂರು ಜೋಡಿ ರೈಲು ಮಾರ್ಗ ಕಾಮಗಾರಿ ಮುಗಿದಿಲ್ಲ.
-ಮೈಸೂರು- ನಂಜನಗೂಡು ರಸ್ತೆ ಚತುಷ್ಪಥ ಆಗಿಲ್ಲ.
-ಮೈಸೂರು ರ್ಯಾಪಿಡ್ ಟ್ರಾನ್ಸಿಸ್ಟ್ ಸಿಸ್ಟಂ ಆಗಿಲ್ಲ.
-ಮೈಸೂರು ರೈಲು ನಿಲ್ದಾಣ ವಿಸ್ತರಣೆಯಾಗಿಲ್ಲ.