ಬಿಜೆಪಿ ಬೆಂಬಲಿಸಲು ಸಿದ್ದವೀರಪ್ಪ ಮನವಿ
ಕ.ಪ್ರ.ವಾರ್ತೆ ಟಿ.ನರಸೀಪುರ ಏ. 13
ರಾಜಕಾರಣದಲ್ಲಿ ಸತತವಾಗಿ ಸೋಲನ್ನೇ ಕಂಡಿರುವ ಎ.ಆರ್. ಕೃಷ್ಣಮೂರ್ತಿ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದ ಜನರು ಕೈ ಹಿಡಿಯಬೇಕೆಂದು ಜಿಪಂ ಮಾಜಿ ಅಧ್ಯಕ್ಷ ಕಾ.ಪು. ಸಿದ್ದವೀರಪ್ಪ ಮನವಿ ಮಾಡಿದರು.
ವರುಣ ವಿಧಾನಸಭಾ ಕ್ಷೇತ್ರದ ಈಶ್ವರಗೌಡನಹಳ್ಳಿ ಗ್ರಾಮದಲ್ಲಿ ಭಾನುವಾರ ಪಾದಯಾತ್ರೆ ನಡೆಸಿ ಬಿಜೆಪಿ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಪರ ಮತಯಾಚಿಸಿ ಮಾತನಾಡಿ, ಒಂದು ಮತದಲ್ಲಿ ಶಾಸಕರಾಗುವ ಅವಕಾಶದಿಂದ ವಂಚಿತರಾದ ಕೃಷ್ಣಮೂರ್ತಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಪರಾಭವಗೊಂಡರು. ನಿರಂತರವಾಗಿ ಸೋತಿರುವ ಅವರಿಗೆ ಈ ಬಾರಿಯಾದರೂ ಅವಕಾಶ ನೀಡುವಂತೆ ಕೋರಿದರು.
ಬಿಜೆಪಿ ಮುಖಂಡ ಎ.ಆರ್. ಬಾಲರಾಜ್, ಡಂಡಿಕೆರೆ ಗ್ರಾಪಂ ಅಧ್ಯಕ್ಷ ಶ್ರೀಧರ, ತಾಯೂರು ಗ್ರಾಪಂ ಮಾಜಿ ಅಧ್ಯಕ್ಷ ಹಾರೋಪುರ ಶಿವಣ್ಣ, ಜಿ.ಡಿ. ಮಹೇಶ್, ಗ್ರಾಪಂ ಸದಸ್ಯರಾದ ಸೋಮಣ್ಣ, ಎಂ. ಮಿಥುನ್, ಮುಖಂಡರಾದ ಸಿ.ಎಂ. ಮಹದೇವಯ್ಯ, ವರಹಳ್ಳಿ ನಾಗೇಂದ್ರ, ಗಣೇಶ್, ಉಮೇಶ್, ನಾರಾಯಣ, ಬಸವಣ್ಣ, ಮಲ್ಲಪ್ಪ, ತಾಂಡವಪುರ ಸಂದೀಪ್, ಶಿವಕುಮಾರ ಇದ್ದರು.
ಗ್ರಾಮೀಣ ಪ್ರತಿಭೆ ಮಹದೇವ ಉತ್ತಮ ಸಾಧನೆ
ಅಂತರಸಂತೆ: ಎಚ್.ಡಿ. ಕೋಟೆ ತಾಲೂಕು ಅಂತರಸಂತೆ ಗ್ರಾಮದ ರಾಮು-ಜಯಮ್ಮ ಪುತ್ರ 9ನೇ ತರಗತಿ ವಿದ್ಯಾರ್ಥಿ ಆರ್. ಮಹದೇವಸ್ವಾಮಿ ಅಂತರಸಂತೆ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಬಾಲ್ ಬ್ಯಾಡ್ಮಿಂಟನ್ನಲ್ಲಿ ದೇಶದ ಉತ್ತಮ ಯುವ ಆಟಗಾರ ಪ್ರಶಸ್ತಿ ಪಡೆದು ಶಾಲೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾನೆ. ಟಿ. ನರಸೀಪುರದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯ ಸೆಮಿ ಫೈನಲ್ನಲ್ಲಿ ಕೆ.ಆರ್. ನಗರ ತಂಡವನ್ನು ಪರಾಭವಗೊಳಿಸಿ ಫೈನಲ್ಗೆ ಆಯ್ಕೆಯಾದ. ಫೈನಲ್ನಲ್ಲಿ ಮೈಸೂರು ತಾಲೂಕಿನ ತಂಡ ಸೋಲಿಸಿ ಮೊದಲಿಗರಾಗಿ ವಿಭಾಗೀಯ ಮಟ್ಟಕ್ಕೆ ಲಗ್ಗೆ ಇಟ್ಟರು. ಉತ್ತಮ ಆಟ ಪ್ರದರ್ಶಿಸಿ ಆಯ್ಕೆಗಾರರ ಗಮನ ಸೆಳೆದು ರಾಜ್ಯದ ನಾಲ್ಕನೇ ಉತ್ತಮ ಆಟಗಾರರಾಗಿ ಹೊರ ಹೊಮ್ಮಿದರು. 2013ರಲ್ಲಿ ಮಹಾರಾಷ್ಟ್ರ ಬಾಲ್ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಬ್ ಜೂನಿಯರ್ ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಸ್ಪರ್ಧಿಸಿ ಭಾರತದ ಉತ್ತಮ ಯುವ ಆಟಗಾರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಮಹದೇವಸ್ವಾಮಿ ತಂದೆ-ತಾಯಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದು, ಶಾಲಾ ಎಸ್ಡಿಎಂಸಿ, ಕಸ್ತೂರಿ ಜನನಿ ಸಂಸ್ಥೆ, ಅಂತರಸಂತೆ ಗ್ರಾಪಂ ಸದಸ್ಯರು ಮತ್ತು ಶಾಸಕ ಎಸ್. ಚಿಕ್ಕಮಾದು ಪ್ರಶಂಸಿಸಿದ್ದಾರೆ.