'ಮೋದಿ ಮೀಸಲಾತಿ ವಿರೋಧಿ'
ಕ.ಪ್ರ.ವಾರ್ತೆ ಮೈಸೂರು ಏ. 13
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮೀಸಲಾತಿ ವಿರೋಧಿ ಎಂದು ಮೈಸೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಟೀಕಿಸಿದರು.
ಚಾಮುಂಡೇಶ್ವರಿ ವ್ಯಾಪ್ತಿಯ ಶ್ರೀರಾಂಪುರ, ಉದ್ಬೂರು, ಕೋಟೆಹುಂಡಿ ಗ್ರಾಮಗಳಲ್ಲಿ ಭಾನುವಾರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಬಡವರು ಹಾಗೂ ದಲಿತರ ಬಗ್ಗೆ ಗೌರವವಿಲ್ಲದ ಬಿಜೆಪಿಗೆ ಮತ ಹಾಕಬೇಡಿ ಎಂದು ಮನವಿ ಮಾಡಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯದಡಿ ಕೆಲಸ ಮಾಡುತ್ತಿದ್ದು, ವಿಶೇಷ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ರು.15 ಸಾವಿರ ಕೋಟಿ ಮೀಸಲಿಟ್ಟಿದೆ. ಅಲ್ಲದೆ ಪರಿವಾರ ಹಾಗೂ ತಳವಾರ ಜನಾಂಗವನ್ನು ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಿದೆ ಎಂದು ತಿಳಿಸಿದರು.
ನಾಯಕ ಜನಾಂಗಕ್ಕೆ ರಾಜಕೀಯ ಮೀಸಲಾತಿ ಕಲ್ಪಿಸಿದ್ದು ಕಾಂಗ್ರೆಸ್. ಆದ್ದರಿಂದಲೇ 15 ಮಂದಿ ಶಾಸಕು ಹಾಗೂ ಇಬ್ಬರು ಸಂಸದರು ಆಯ್ಕೆಯಾಗಲು ಸಾಧ್ಯವಾಯಿತು. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದ ಅವರು, ಸಿದ್ದರಾಮಯ್ಯ, ಪರಮೇಶ್ವರ್, ಶ್ರೀನಿವಾಸ ಪ್ರಸಾದ್ ಹಾಗೂ ಜಾರಕಿಹೋಳಿ ಅವರಿಗೆ ಶಕ್ತಿ ತುಂಬಬೇಕಾದರೆ ಇನ್ನೊಂದು ಬಾರಿ ನನಗೆ ಅವಕಾಶ ಮಾಡಿಕೊಡಬೇಕೆಂದು ಅವರು ಮನವಿ ಮಾಡಿದರು.
ಮಾಜಿ ಶಾಸಕ ಎಂ. ಸತ್ಯನಾರಾಯಣ, ಮುಖಂಡರಾದ ಕೆ.ಮರೀಗೌಡ, ನರಸೇಗೌಡ, ಸಿ.ಎನ್. ಮಂಜೇಗೌಡ, ಜವರಪ್ಪ, ಕೆಂಚಪ್ಪ, ಕೃಷ್ಣಕುಮಾರ್ ಸಾಗರ್, ಕೆ. ಪ್ರಭುಸ್ವಾಮಿ, ಕೋಟೆಹುಂಡಿ ಮಹಾದೇವ್, ರಮೇಶ್, ಲಕ್ಷ್ಮಣ್‌ಪ್ರಭು, ಉದ್ಬೂರು ಕೃಷ್ಣ, ಜಿ.ಕೆ ಬಸವಣ್ಣ, ಜಿ.ಮೂರ್ತಿ, ಪಿತಾಂಬರ, ಗೋವಿಂದನಾಯ್ಕ, ಸೋಮಣ್ಣ, ಕಿರಣ್. ಉತ್ತನಹಳ್ಳಿ ಶಿವಣ್ಣ, ಗ್ರಾ.ಪಂ.ಅಧ್ಯಕ್ಷ ಸೋಮಣ್ಣ, ಎಪಿಎಂಸಿ ಅಧ್ಯಕ್ಷ ರಘು, ಉಪಾಧ್ಯಕ್ಷ ಸಿದ್ದಯ್ಯ ಇದ್ದರು.