'ಯೋಗ್ಯ ಅಭ್ಯರ್ಥಿಗೆ ಮತ ಚಲಾಯಿಸಿ'
ಕ.ಪ್ರ.ವಾರ್ತೆ ಮೈಸೂರು ಏ. 13
ಈ ಲೋಕಸಭಾ ಚುನಾವಣೆಯಲ್ಲಿ ಯೋಗ್ಯರು, ನಮ್ಮ ಪ್ರತಿನಿಧಿ ಆಗಬಲ್ಲ ಎಂದೆನಿಸುವ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಲೋಕಾಯುಕ್ತ ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ ಕಿವಿಮಾತು ಹೇಳಿದರು.
ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಮೈಸೂರು ಘಟಕವು ಮೈಸೂರು ರೇಸ್ ಕ್ಲಬ್ ಹೌಸ್ನಲ್ಲಿ ಏರ್ಪಡಿಸಿದ್ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕೋದ್ಯಮವೂ ಇದರಿಂದ ಹೊರತಾಗಿಲ್ಲ. ಭ್ರಷ್ಟಾಚಾರ ಎಲ್ಲೆಡೆ ನಡೆಯುತ್ತಿದ್ದು, ನನ್ನೊಬ್ಬನಿಂದ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಸುಮ್ಮನಿರುವವರೇ ಹೆಚ್ಚಾಗಿದ್ದಾರೆ. ಹೀಗಾದರೆ ಭ್ರಷ್ಟಾಚಾರ ಹತ್ತಿಕ್ಕುವ ಹೊಣೆ ಯಾರದು ಎಂದು ಪ್ರಶ್ನಿಸಿದರು.
ನಿವೃತ್ತನಾದ ಬಳಿಕ ಅಣ್ಣಾ ಹಜಾರೆ ತಂಡದಲ್ಲಿ ಸೇರಿ ಭ್ರಷ್ಟಾಚಾರದ ವಿರುದ್ಧ ಹೋರಾಡಿದೆ. ಆದರೆ, ಆ ತಂಡವು ರಾಜಕೀಯವಾಗಿ ಗುರುತಿಸಿಕೊಳ್ಳಲು ಆರಂಭಿಸಿದಾಗ ತಂಡ ಬಿಟ್ಟೆ. ಯುವಕರು ದೇಶದ ದೊಡ್ಡ ಶಕ್ತಿ. ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸಲು ಯುವಕರಿಂದ ಮಾತ್ರ ಸಾಧ್ಯ ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ಬಿಎಐ ಡೈರೆಕ್ಟರಿ, ನಕಾಶೆ, ಮೈಸೂರು ಶಿಲ್ಪಿ ಮಾಸ ಪತ್ರಿಕೆಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಬಿಎಐ ಮೈಸೂರು ಘಟಕ ನೂತನ ಅಧ್ಯಕ್ಷರಾಗಿ ಎಂ.ಸಿ. ಮಲ್ಲಿಕಾರ್ಜುನ ಅಧಿಕಾರ ಸ್ವೀಕರಿಸಿದರು. ಬಿಎಐ ರಾಜ್ಯಾಧ್ಯಕ್ಷ ಕೆ.ಶ್ರೀಧರ್, ಕಾರ್ಯದರ್ಶಿ ಕೆ. ಸುಬ್ರಹ್ಮಣ್ಯರಾವ್ ಇದ್ದರು.