ಲಿಂಗ ತಾರತಮ್ಯದಿಂದ ಪ್ರಗತಿ ಕುಂಠಿತ
ಕ.ಪ್ರ.ವಾರ್ತೆ ಮೈಸೂರು ಏ. 13
ಸಮಾಜದಲ್ಲಿನ ಲಿಂಗ ತಾರತಮ್ಯವು ಪ್ರಗತಿಗೆ ಮಾರಕ ಎಂದು ಸಮತಾ ವೇದಿಕೆ ಸಂಚಾಲಕಿ ಮೀರಾ ನಾಯಕ್ ಅಭಿಪ್ರಾಯಪಟ್ಟರು.
ಒಡನಾಡಿ ಸೇವಾ ಸಂಸ್ಥೆಯು ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಭಾನುವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಮಹಿಳಾ ಸಾಧಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರನ್ನು ಎರಡನೇ ದರ್ಜೆ ಪ್ರಜೆಯಾಗಿ ಪರಿಗಣಿಸಲಾಗುತ್ತಿದ್ದು, ಆಕೆ ಎಲ್ಲವನ್ನೂ ಸಹಿಸಿಕೊಂಡು ಹೋಗುತ್ತಾಳೆ ಎಂಬ ಮನೋಭಾವವಿದೆ. ಮನುಷ್ಯ ಎಂದರೇ ಪುರುಷ ವಾಚಕ ಪದವಾಗಿದೆ ಅಲ್ಲಿ ಮಹಿಳೆಯರಿಗೆ ಮಾನ್ಯತೆ ಕಾಣದಾಗಿದೆ. ಇಂತಹ ಅಸಮಾನತೆಯ ವ್ಯವಸ್ಥೆ ಇದ್ದರೆ ಯಾವುದೇ ಪ್ರಗತಿ ಸಾಧಿಸುವುದು ಅಸಾಧ್ಯ ಎಂದರು.
ಇಂದು ಅನೇಕ ಕಟ್ಟುಪಾಡುಗಳು ಹಾಗೂ ಜಾತಿ ಮತ್ತು ಧರ್ಮವು ದೇಶವನ್ನು ಕೆಟ್ಟದಾಗಿ ಆಳುತ್ತಿದೆ. ಭ್ರಷ್ಟಾಚಾರ ಹಾಗೂ ಅನಾಚಾರ ಹೆಚ್ಚಾಗುತ್ತಿದೆ. ಸಮಾಜವನ್ನು ಸರಿ ಮಾಡುವ ಜವಾಬ್ದಾರಿಯನ್ನು ಪ್ರತಿಯೊಬ್ಬರು ವಹಿಸಬೇಕಿದೆ. ಮುಖ್ಯವಾಗಿ ಮಹಿಳೆಯರನ್ನು ಮುಖ್ಯ ವಾಹಿನಿಗೆ ತರುವ ಕೆಲಸ ಆಗಬೇಕಿದೆ ಎಂದು ಅವರು ತಿಳಿಸಿದರು.
ದೌರ್ಜನ್ಯ-ದಬ್ಬಾಳಿಕೆ ನಡುವೆಯೂ ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಮುನ್ನುಗ್ಗುತ್ತಿರುವುದು ಆಶಾದಾಯಕ ಬೆಳವಣಿಗೆ. ಒಡನಾಡಿಯು ಮಹಿಳೆಯರ ಪರ ಹೋರಾಟಗಳನ್ನು ನಡೆಸುತ್ತಾ ಬಂದಿರುವುದು ಶ್ಲಾಘನೀಯ ಎಂದರು.
ಸಾಧಕಿಯರಿಗೆ ಸನ್ಮಾನ: ಮಹಿಳಾ ಪರ ಹೋರಾಟಗಾರ್ತಿ ಮೀರಾ ನಾಯಕ್, ರೈತ ಸಂಘದ ಮುಖಂಡರಾದ ನಂದಿನಿ ಜಯರಾಂ, ಆರ್ಎಲ್ಎಚ್ಪಿ ಸಂಸ್ಥೆಯ ಸರಸ್ವತಿ, ಒಡಿಪಿ ಸಂಸ್ಥೆಯ ಸುನಿತಾ, ಅಡ್ವೆಂಚರ್ ಫೌಂಡೇಷನ್ ನಿರ್ದೇಶಕಿ ರುಕ್ಮಿಣಿ, ಛಾಯಾಗ್ರಾಹಕಿ ವೀಣಾ ಹಾಗೂ ಗಾಯಕಿ ಓಹಿಲೇಶ್ವರಿ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಒಡನಾಡಿಗೆ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತರನ್ನು ಗೌರವಿಸಲಾಯಿತು.
ರೈತ ಸಂಘದ ಮುಖಂಡರಾದ ನಂದಿನಿ ಜಯರಾಂ, ಬೈಕ್ ಸವಾರಿ ಮಹಿಳೆ ಕವಿತಾ, ಒಡನಾಡಿ ಟ್ರಸ್ಟಿ ಡಾ. ಅಶ್ವಥ್ ಮುಖ್ಯ ಅತಿಥಿಗಳಾಗಿದ್ದರು. ನಿರ್ದೇಶಕರಾದ ಸ್ಟ್ಯಾನ್ಲಿ ಪ್ರಾಸ್ತಾವಿಕ ಮಾತುಗಳಾಡಿದರು. ಪರಶು
ಸ್ವಾಗತಿಸಿದರು. ಇದಕ್ಕೂ ಮುನ್ನ ಸಂಸ್ಥೆಯ ಚಟುವಟಿಕೆಗಳನ್ನು ಕುರಿತು ಕಿರುಚಿತ್ರ ಪ್ರದರ್ಶಿಸಲಾಯಿತು.
ನೀರೆಯರ ಬೈಕ್ ಸವಾರಿ: ಟ್ರ್ಯಾಕ್ಟರ್ ಓಡಿಸಿದ ನಂದಿನಿ ಜಯರಾಂ
ಮೈಸೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಒಡನಾಡಿ ಸೇವಾ ಸಂಸ್ಥೆಯು ಮಹಿಳೆಯರ ಮೋಟಾರ್ ಸೈಕಲ್ ರ್ಯಾಲಿಯನ್ನು ಭಾನುವಾರ ಆಯೋಜಿಸಿತ್ತು.
ಮೈಸೂರು- ಬೆಂಗಳೂರು ರಸ್ತೆಯಲ್ಲಿನ ಬನ್ನಿಮಂಟಪದ ಎಲ್ಐಸಿ ಕೇಂದ್ರ ಕಚೇರಿ ಮುಂಭಾಗ ಏರ್ಪಡಿಸಿದ್ದ ಮಹಿಳಾ ಸಾಧಕರ ದಿನದ ಈ ರ್ಯಾಲಿಯನ್ನು ಮೈಸೂರು ವಿವಿ ಕುಲಪತಿ ರಂಗಪ್ಪ ಉದ್ಘಾಟಿಸಿದರು.
ಸಮತಾ ವೇದಿಕೆ ಸಂಚಾಲಕಿ ಮೀರಾ ನಾಯಕ್, ರೈತ ಸಂಘ ಹೋರಾಟಗಾರ್ತಿ ನಂದಿನಿ ಜಯರಾಂ, ರಂಗಾಯಣ ಮಾಜಿ ನಿರ್ದೇಶಕ ಸಿ. ಬಸವಲಿಂಗಯ್ಯ, ಒಡನಾಡಿ ನಿರ್ದೇಶಕರಾದ ಸ್ಟ್ಯಾನ್ಲಿ ಹಾಗೂ ಪರಶುರಾಂ ಮತ್ತಿತರರು ಇದ್ದರು.ನಂತರ ಅಲ್ಲಿಂದ ಹೊರಟ ಮೋಟಾರ್ ಸೈಕಲ್ ರ್ಯಾಲಿಯು, ಹೈವೇ ವೃತ್ತದ ಮೂಲಕ ಹಾದು, ಸಯ್ಯಾಜಿರಾವ್ ರಸ್ತೆಯಲ್ಲಿ ಸಾಗಿ ಕೆ.ಆರ್ ವೃತ್ತ, ಮಹಾರಾಜ ಸಂಸ್ಕೃತ ಪಾಠಶಾಲೆ, ಅಗ್ರಹಾರ ವೃತ್ತ, ವಿದ್ಯಾರಣ್ಯಪುರಂ, ಕೆ.ಜಿ. ಕೊಪ್ಪಲ್ ಮುಖಾಂತರ ತೆರಳಿ, ಸರಸ್ವತಿಪುರಂ ಅಗ್ನಿಶಾಮಕ ಕಚೇರಿ ಮುಂಭಾಗದಿಂದ ಮಹಾರಾಜ ಶತಮಾನೋತ್ಸವ ಭವನ ತಲುಪಿತು.
ದ್ವಿಚಕ್ರ ವಾಹನಗಳ ಜತೆಗೆ ಆಟೋ, ಕಾರು, ಟ್ರ್ಯಾಕ್ಟರ್, ಲಾರಿ ಅಲ್ಲದೆ ಎತ್ತುಗಾಡಿಯನ್ನು ಸಹ ಓಡಿಸುವ ಮೂಲಕ ಮಹಿಳೆಯರ ಹಾಗೂ ಯುವತಿಯರು ಸಾರ್ವಜನಿಕರ ಗಮನ ಸೆಳೆದರು.