ವಿದ್ಯಾರ್ಥಿನಿಯರಿಂದ ಮತ ಜಾಗೃತಿ
ಮೈಸೂರು: ಕುವೆಂಪುನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯ ಹಾಸ್ಟೆಲ್ ವಿದ್ಯಾರ್ಥಿನಿಯರು ಶನಿವಾರ ಮತದಾನ ಜಾಗೃತಿ ಜಾಥಾ ನಡೆಸಿದರು. ಕುವೆಂಪು ಪ್ರತಿಮೆ ಬಳಿ ಆರಂಭವಾದ ಜಾಥಾಗೆ ಜಿಪಂ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಚಾಲನೆ ನೀಡಿದರು. ಒಬಿಸಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ವಿವಿಧ ಇಲಾಖೆ ಅಧಿಕಾರಿಗಳಾದ ಎ.ಆರ್. ಪ್ರಕಾಶ್, ಎನ್.ಆರ್. ವಿಜಯ್, ಡಾ.ಕೆ. ಶಂಕರೇಗೌಡ, ರಾಜಶೇಖರ್ ಜವಳಗಿ ಇದ್ದರು.
ನೋಟಾ ಮತದಾನ ಮಾಡಿ
ಮೈಸೂರು: ರಾಜಕೀಯ ಪಕ್ಷಗಳನ್ನು ತಿರಸ್ಕರಿಸಿ ಸ್ವಾಭಿಮಾನಿ ರೈತರು ನೋಟಾ ಮತದಾನ ಮಾಡುವಂತೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಕರೆ ನೀಡಿದ್ದಾರೆ. ಸ್ವಾತಂತ್ರ್ಯ ಬಂದು 65 ವರ್ಷಗಳಾದರೂ ದೇಶದ ರೈತರನ್ನು ಕಗ್ಗತ್ತಲಿನಲ್ಲಿಟ್ಟು ರಾಜ್ಯ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸಿರುವ ರಾಜಕೀಯ ಪಕ್ಷಗಳನ್ನು ತಿರಸ್ಕರಿಸಿ ರೈತರು ನೋಟಾ ಮತದಾನ ಮಾಡುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಬೇಕು ಎಂದಿದ್ದಾರೆ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ 18 ಅಂಶಗಳ ರೈತರ ಪ್ರಣಾಳಿಕೆಯನ್ನು ಒಪ್ಪುವಂತಹ ಬದ್ದತೆ ತೋರುವ ರಾಜಕೀಯ ಪಕ್ಷಗಳಿಗೆ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸುವುದಾಗಿ ಘೋಷಿಸಿ 15 ದಿನಗಳಾಗಿದ್ದರೂ, ಈ ಬಗ್ಗೆ ರಾಜಕೀಯ ಪಕ್ಷಗಳು ಮುಂದಾಗಿಲ್ಲ. ಆದ್ದರಿಂದ ರೈತರು ತಪ್ಪದೆ ಮತದಾನದಲ್ಲಿ ಭಾಗವಹಿಸಬೇಕು. ಹಾಗೂ ಎಲ್ಲಾ ಅಭ್ಯರ್ಥಿಗಳನ್ನು ಧಿಕ್ಕರಿಸಿ ನೋಟಾ ಚಲಾಯಿಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಯಾಣಿಕರಿಗೆ ಅರಿವು
ಮೈಸೂರು: ಸ್ಪಿರಿಟ್ ಇವೆಂಟ್ಸ್ ಸಂಸ್ಥೆಯ ವತಿಯಿಂದ ಭಾನುವಾರ ನಗರದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅರಿವು ಮೂಡಿಸಲಾಯಿತು. ನಾವು ತಲೆ ಬಾಚಿಕೊಂಡು, ಪೌಡರ್ ಹಾಕಿಕೊಂಡು ಲಕ್ಷಣವಾಗಿ ಕಾಣುತ್ತೇವೆ. ಅದೇ ರೀತಿ ದೇಶವು ಲಕ್ಷಣವಾಗಿ ಕಾಣಲು ಯೋಗ್ಯ ಅಭ್ಯರ್ಥಿಗಳಿಗೆ ಮತ ಚಲಾಯಿಸಬೇಕು ಎಂದು ತಿಳಿಸಲಾಯಿತು. ವಿಕ್ರಂ, ಜೋಗಿ ಮಂಜು ಇದ್ದರು.
ಕ್ರೈಸ್ತ ಸಮಾಜ ಮತದಾನದಲ್ಲಿ ಪಾಲ್ಗೊಳ್ಳಲಿ: ಥಾಮಸ್ ವಾಳಪಿಳೈ
ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಕ್ರೈಸ್ತ ಸಮುದಾಯದವರು ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಥಾಮಸ್ ವಾಳಪಿಳೈ ಕರೆ ನೀಡಿದ್ದಾರೆ. ಕ್ರೈಸ್ತ ಸಮುದಾಯದ ಪರವಾಗಿ ಮಾತನಾಡಲು ಯಾರಿಗೂ ಅಧಿಕಾರ ಇಲ್ಲ. ಇಡೀ ಕ್ರೈಸ್ತರ ಸಮುದಾಯದ ಬಗ್ಗೆ ಚರ್ಚಿಸುವುದಕ್ಕಾಗಲಿ ಅಥವಾ ಸಮುದಾಯದ ಪರವಾಗಿ ಯಾವುದೇ ನಿರ್ಧಾರ ಕೈಗೊಳ್ಳುವುದಕ್ಕಾಗಲಿ ಯಾರಿಗೂ ಅಧಿಕಾರ ನೀಡಿಲ್ಲ. ಕ್ರೈಸ್ತ ಸಮುದಾಯದವರು ಇಂಥವರ ಮಾತುಗಳಿಗೆ ಕಿವಿಕೊಡಬಾದು ಎಂದು ಹೇಳಿದ್ದಾರೆ.ಪ್ರತಿಯೊಬ್ಬರೂ ಕಡ್ಡಾಯವಾಗಿ ಮತಚಲಾಯಿಸಬೇಕೆಂದು ಚರ್ಚ್‌ಗಳಲ್ಲಿ ಪ್ರತಿಬಾರಿಯೂ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಯಾರು ಯಾವ ಪಕ್ಷಕ್ಕೆ ಮತನೀಡಬೇಕೆನ್ನುವುದನ್ನು ಯಾರನ್ನೂ ಒತ್ತಾಯಿಸಿಲ್ಲ. ನಮ್ಮ ಸಮುದಾಯದವರು ಈ ಬಾರಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮತದಾನ ಮಾಡಲಿದ್ದಾರೆ ಎಂದಷ್ಟೆ ತಿಳಿಸಿದ್ದಾರೆ.
ಈವನ್ ತೇಜಾ ಟೀಕೆ: ಕ್ರೈಸ್ತ ಪ್ರಗತಿ ಪರ ಸಂಸ್ಥೆ ಇಡೀ ಸಮುದಾಯದ ಪರ ಹೇಳಿಕೆ ನೀಡಿರುವುದು ಸರಿಯಲ್ಲ. ಇವರಿಗೆ ಯಾರೂ ಅಧಿಕಾರ ಕೊಟ್ಟಿಲ್ಲ. ಕಿವಿಗೊಡದೆ ಕಡ್ಡಾಯವಾಗಿ ಮತ ಚಲಾಯಿಸುವಂತೆ ಕ್ರೈಸ್ಟ್ ಫೋರಂ ಫಾರ್ ಡಿಸ್ಟ್ರೆಸ್‌ಡ್ ಸಂಸ್ಥೆ ಕಾರ್ಯದರ್ಶಿ ಈವನ್ ತೇಜಾ ತಿಳಿಸಿದ್ದಾರೆ.