ಕನ್ನಡಕ್ಕೆ ಅನುವಾದವಾಗಲಿ
ಮೈಸೂರು: ಡಾ.ಬಿ.ಆರ್. ಅಂಬೇಡ್ಕರ್ ವಿಚಾರಧಾರೆ ಮರಾಠಿ ಭಾಷೆಯಲ್ಲಿ ಹೇರಳವಾಗಿದ್ದು, ಅದನ್ನು ಕನ್ನಡಕ್ಕೆ ಅನುವಾದಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕಿದೆ ಎಂದು ಜಾನಪದ ವಿದ್ವಾಂಸ ಪ್ರೊ. ಕಾಳೇಗೌಡ ನಾಗವಾರ ಹೇಳಿದರು. ಅಖಿಲ ಭಾರತ ಅಂಚೆ ಮತ್ತು ತಂತಿ ಇಲಾಖಾ ನೌಕರರ ಕ್ಷೇಮಾಭಿವೃದ್ಧಿ ಸಂಘವು ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಅಂಬೇಡ್ಕರ್ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಬರಹಗಳು ಇಂಗ್ಲಿಷ್ನಲ್ಲಿ ಬೇಕಾದಷ್ಟು ದೊರಕುತ್ತಿವೆ. ಅದೇ ರೀತಿ ಕನ್ನಡಿಗರಿಗೂ ದೊರಕಬೇಕೆಂದರೆ ಕನ್ನಡ ಅನುವಾದ ಆಗಬೇಕು. ರಾಜ್ಯದ ವಿವಿಧೆಡೆ ಸ್ಥಾಪಿಸಿರುವ ಅಂಬೇಡ್ಕರ್ ಸಂಶೋಧನಾ ಕೇಂದ್ರಕ್ಕೆ ಹೆಚ್ಚಿನ ಅನುದಾನ ನೀಡಿದರೆ ಈ ಕಾರ್ಯ ಸಾಕಾರಗೊಳ್ಳಲಿದೆ ಎಂದರು. ದಲಿತ ಕುಟುಂಬದಲ್ಲಿ ಹುಟ್ಟಿ ಬಂದ ಅಂಬೇಡ್ಕರ್ ಸಮಾಜದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದರು ಎಂದರು.
'ಶೋಷಣೆ ಮುಕ್ತ ಭಾರತ ಮರೀಚಿಕೆ'
ಮೈಸೂರು: ಇಂದಿಗೂ ಶೋಷಣೆ ಮುಕ್ತ ಭಾರತ ಮರೀಚಿಕೆಯಾಗಿ ಉಳಿದಿದೆ ಎಂದು ಗುರ್ಲ್ಬಗ ಕೇಂದ್ರೀಯ ವಿವಿಯ ವಿಶ್ರಾಂತ ಸಮಕುಲಾಧಿಪತಿ ಡಾ. ಎಸ್. ಚಂದ್ರಶೇಖರ್ ವಿಷಾದಿಸಿದರು. ಮೈಸೂರು ವಿವಿಯ ಡಾ.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ವಿವಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ವಿಶೇಷ ಘಟಕದ ಸಂಯುಕಾಶ್ರಯದಲ್ಲಿ ಸೋಮವಾರ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿದರು.ಸ್ವಾತಂತ್ರ್ಯ ಹಾಗೂ ಸಮಾನತೆ ಅಂಬೇಡ್ಕರ್ ಅವರ ಕನಸಾಗಿತ್ತು. ಶೋಷಣೆ ಮುಕ್ತ ಭಾರತ ಅವರ ಆಶಯವಾಗಿತ್ತು. ಆದರೆ ಇಂದಿಗೂ ಆ ಕನಸು ನನಸಾಗಿಲ್ಲ ಎಂದರು. ಅಂಬೇಡ್ಕರ್ ಕನಸಿನ ಭಾರತ ಎಂಬ ವಿಷಯ ಕುರಿತು ಸಾಹಿತಿ ಡಾ. ಮೊಗಳ್ಳಿ ಗಣೇಶ್ ಮಾತನಾಡಿದರು.