ಬಿಜೆಪಿ ಬೆಂಬಲಿಸಲು ಪುರಾಣಿಕ್ ಮನವಿ
ಕ.ಪ್ರ.ವಾರ್ತೆ ರಾವಂದೂರು ಏ. 14
ದೇಶದಲ್ಲಿ ಕಲೆ ಮತ್ತು ಸಂಸ್ಕೃತಿ ಉಳಿಯಬೇಕಾದರೆ ಮೋದಿ ನೇತೃತ್ವದ ಬಿಜೆಪಿ ಬೆಂಬಲಿಸಬೇಕು ಎಂದು ಕಿರುತರೆ ಕಲಾವಿದ ಸುನಿಲ್ ಪುರಾಣಿಕ್ ಹೇಳಿದರು.
ಪಿರಿಯಾಪಟ್ಟಣದ ತಾಲೂಕಿನ ರಾವಂದೂರು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಈ ಹಿಂದೆ 10 ವರ್ಷಗಳ ಆಳ್ವಿಕೆ ಮಾಡಿದ ಯುಪಿಎ ಸರ್ಕಾರ ಹಲವಾರು ಹಗರಣ ಮಾಡುವ ಮೂಲಕ ಅಖಂಡ ಭ್ರಷ್ಟಾಚಾರದಲ್ಲಿ ನಡೆಸಿದೆ.
ಈ ನಿಟ್ಟಿನಲ್ಲಿ ರಾಜ್ಯದ ಮತದಾರರು ನರೇಂದ್ರ ಮೋದಿ ನೇತೃತ್ವತ ಬಿಜೆಪಿ ಬೆಂಬಲಿಸಿ, ಮೋದಿ ಅವರನ್ನು ಪ್ರಧಾನಿ ಮಾಡುವುದಕ್ಕಾಗಿ ಪ್ರತಾಪ್‌ಸಿಂಹ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ತಾಲೂಕು ಬಿಜೆಪಿ ಮುಖಂಡ ಆರ್.ಟಿ. ಸತೀಶ್, ಪ್ರಧಾನ ಕಾರ್ಯದರ್ಶಿ ಪ್ರಸನ್ನಕೇಶವ ಮಾತನಾಡಿದರು. ಕಾರ್ಯದರ್ಶಿ ಎಸ್.ಟಿ. ಕೃಷ್ಣಪ್ರಸಾದ್, ಮಹಿಳಾ ಅಧ್ಯಕ್ಷೆ ಲಿಲಾವತಿ, ಕಿರುತೆರೆ ಕಲಾವಿದೆ ಸ್ನೇಹಸ್ವಾಮಿವಾಣಿ, ಸಂತೋಷ್ ಉಪ್ಪಿನ್, ಗಿರೀಶ್ ಜತ್ತಿ, ಸಾಗರ್, ಶಿವಾರಂ ಇದ್ದರು.
152 ಕಡೆ ಅಬಕಾರಿ ದಾಳಿ
ಪಿರಿಯಾಪಟ್ಟಣ: ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾದಾಗಿನಿಂದ ಈವರೆಗೆ ಒಟ್ಟು 152 ಅಬಕಾರಿ ದಾಳಿಗಳನ್ನು ನಡೆಸಲಾಗಿದೆ ಎಂದು ಅಬಕಾರಿ ನಿರೀಕ್ಷಕ ಎ.ವಿ. ಗಿರೀಶ್ ತಿಳಿಸಿದ್ದಾರೆ. ತಾಲೂಕಿನಾದ್ಯಂತೆ ಅಬಕಾರಿ ಇಲಾಖೆ ವತಿಯಿಂದ ಅನುಮಾನದ ಮೇರೆಗೆ 152 ಕಡೆಗಳಲ್ಲಿ ದಾಳಿ ನಡೆಸಲಾಗಿದ್ದು, 16 ಪ್ರಕರಣಗಳನ್ನು ದಾಖಲಿಸಿ 15 ಮಂದಿಯನ್ನು ಬಂಧಿಸಲಾಗಿದೆ. ಮದ್ಯ ಮಾರಾಟದ ಅಂಗಡಿಗಳಲ್ಲಿ ಅಬಕಾರಿ ಮಾರಾಟ ಪರವಾನಗಿ ಷರತ್ತು ಉಲ್ಲಂಘಿನೆ ಸಂಬಂಧ 8 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಈವರೆಗೆ ಒಟ್ಟು 20.490 ಲೀ ಮದ್ಯ ವಶಪಡಿಸಿಕೊಳ್ಳಲಾಗಿದೆ. ಈ ಹಿಂದೆ ಚುನಾವಣಾ ಸಂದರ್ಭಗಳಲ್ಲಿ ಅಬಕಾರಿ ಪ್ರಕರಣಗಳಲ್ಲಿ ಭಾಗಿಯಾಗಿದ್ದ 10 ಮಂದಿ ಆರೋಪಿಗಳಿಂದ ತಹಸೀಲ್ದಾರರ ಮುಂದೆ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಅಕ್ರಮ ಮದ್ಯ; ಮಹಿಳೆ ಬಂಧನ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ತಾಲೂಕಿನ ಮುತ್ತಿನ ಮುಳುಸೋಗೆ ಭಾಗ್ಯಮ್ಮ ಎಂಬವರನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, 5.85 ಲೀ. ಮದ್ಯ ವಶಪಡಿಸಿಕೊಂಡಿದ್ದಾರೆ. ಭಾಗ್ಯಮ್ಮ ವಿರುದ್ಧ ಈಗಾಗಲೇ ಎರಡು ಪ್ರಕರಣಗಳಿವೆ ಎಂದು ಅಬಕಾರಿ ನಿರೀಕ್ಷಕ ಗಿರೀಶ್ ತಿಳಿಸಿದ್ದಾರೆ.