ಬಿಜೆಪಿ ರೋಡ್ ಶೋ, ಮತಯಾಚನೆ
ಕ.ಪ್ರ.ವಾರ್ತೆ ಟಿ.ನರಸೀಪುರ ಏ. 14
ಲೋಕಸಭಾ ಚುನಾವಣೆಗೆ ಕ್ಷಣಗಣನೆ ಹತ್ತಿರವಾಗುತ್ತಿರುವ ಹಿನ್ನೆಲೆ ಮತದಾರರ ಮನಮೊಲಿಕೆಯನ್ನು ತೀವ್ರಗೊಳಿಸುತ್ತಿರುವ ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಪಟ್ಟಣದಲ್ಲಿ ಸೋಮವಾರ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ರೋಡ್ ಶೋ ನಡೆಸಿದರು.
ಖಾಸಗಿ ಬಸ್ ನಿಲ್ದಾಣ ವೃತ್ತದಿಂದ ಆರಂಭಗೊಂಡ ರೋಡ್ ಶೋ ಲಿಂಕ್ ರಸ್ತೆ, ಕಡ್ಲೆ ರಂಗಮ್ಮನ ಬೀದಿ ಮೂಲಕ ಆಲಗೂಡು ಗ್ರಾಮಕ್ಕೆ ತೆರಳಿತು.
ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ರಾಷ್ಟ್ರದ ಭದ್ರತೆ ಕಾಪಾಡಿ, ನದಿ ಜೋಡಣೆ ಮಹತ್ವದ ಯೋಜನೆಯನ್ನು ಪೂರ್ಣಗೊಳಿಸಿ, ಭ್ರಷ್ಟಚಾರಮುಕ್ತ ಆಡಳಿತ ನೀಡುವುದು ರಾಷ್ಟ್ರಿಯ ಪಕ್ಷವಾದ ಬಿಜೆಪಿ ಪಕ್ಷದ ಪ್ರಮುಖ ಉದ್ದೇಶವಾಗಿದೆ. ಗುಜರಾತ್ ರಾಜ್ಯದಲ್ಲಿ ನರೇಂದ್ರ ಮೋದಿ ಅವರು ಮೂರು ಬಾರಿ ಮುಖ್ಯಮಂತ್ರಿಯಾಗಿ ಅಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಅವರೇ ಮುಂದಿನ ಪ್ರಧಾನಿಯಾಗಲಿದ್ದಾರೆ. ಕಳೆದ ಚುನಾವಣೆಯಲ್ಲಿ ಪರಾಭವಗೊಂಡು ಜನರಿಂದ ಆಯ್ಕೆಯಾಗುವ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದೇನೆ. ಈ ಬಾರಿಯಾದರೂ ನನ್ನನ್ನು ನರಸೀಪುರದ ಜನತೆ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಮಾಜಿ ಸಚಿವ ಎಂ. ಮಹದೇವ್, ವಿಧಾನಪರಿಷತ್ ಮಾಜಿ ಸದಸ್ಯ ಸಿ. ರಮೇಶ್, ಜಿಪಂ ಮಾಜಿ ಸದಸ್ಯ ಪುಟ್ಟಬಸವಯ್ಯ, ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ, ಯುವ ಮುಖಂಡ ಅರ್ಜುನ್, ಬಿಜೆಪಿ ಕ್ಷೇತ್ರಾಧ್ಯಕ್ಷ ಕೆ.ಎಸ್. ಬಸವರಾಜು, ಜಿಲ್ಲಾ ಉಪಾಧ್ಯಕ್ಷ ತೋಟದಪ್ಪ ಬಸವರಾಜು, ಪ್ರಧಾನ ಕಾರ್ಯದರ್ಶಿ ಎನ್.ಎಂ. ರಾಮಚಂದ್ರ, ಪಪಂ ಉಪಾಧ್ಯಕ್ಷೆ ಶ್ರುತಿಮಣಿಕಂಠ, ಮುಖಂಡ ಎನ್.ವಿ. ಫಣೀಶ್ ಇದ್ದರು.