ವಿಶ್ವನಾಥ್ ಪರ ಕೃಷ್ಣ ರೋಡ್ ಶೋ
ಕ.ಪ್ರ.ವಾರ್ತೆ ಮೈಸೂರು ಏ. 14
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಮೈಸೂರು- ಕೊಡಗು ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಪರ ಸೋಮವಾರ ರೋಡ್ ಶೋ ಮೂಲಕ ಮತಯಾಚಿಸಿದರು.
ಕೆ.ಜಿ. ಕೊಪ್ಪಲಿನ ಚಾಮುಂಡೇಶ್ವರಿ ದೇವಸ್ಥಾನ ಬಳಿಯಿಂದ ಪ್ರಚಾರ ಆರಂಭಿಸಿದ ಅವರು, ಇಲ್ಲಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ಬಳಿಕ ಪಡುವಾರಹಳ್ಳಿ, ಒಂಟಿಕೊಪ್ಪಲು, ಕುಂಬಾರಕೊಪ್ಪಲು, ಮಂಚೇಗೌಡನ ಕೊಪ್ಪಲು, ಹೆಬ್ಬಾಳು ಪ್ರದೇಶದಲ್ಲಿ ಪ್ರಚಾರ ನಡೆಸಿದರು. ಬಳಿಕ ಹೆಲಿಕಾಪ್ಟರ್ ಮೂಲಕ ಹಾಸನದ ಅರಕಲಗೂಡಿಗೆ ತೆರಳಿದರು.
ಶಾಸಕ ವಾಸು, ಮಾಜಿ ಶಾಸಕ ಡಿ. ಮಾದೇಗೌಡ, ಪಾಲಿಕೆ ಸದಸ್ಯರಾದ ಶಿವಮಾದು, ಡಿ. ನಾಗಭೂಷಣ್, ರಮೇಶ್, ಸುಹೇಲ್ ಬೇಗ್, ಕಾಂಗ್ರೆಸ್ ನಗರಾಧ್ಯಕ್ಷ ಸಿ. ದಾಸೇಗೌಡ, ವಿಕ್ರಾಂತ್ ದೇವೇಗೌಡ ಇದ್ದರು.
ವಿಶ್ವನಾಥ್ ಪ್ರಚಾರ: ಮೈಸೂರು- ಕೊಡಗು ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಸೋಮವಾರ ಕುರುಬಾರಹಳ್ಳಿ, ವಿದ್ಯಾನಗರದಲ್ಲಿ ಪ್ರಚಾರ ನಡೆಸಿದರು. ಬಳಿಕ ಅಶೋಕಪುರಂನಲ್ಲಿರುವ ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿದರು. ನಂತರ ಎಸ್.ಎಂ. ಕೃಷ್ಣ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ವಿರಾಜಪೇಟೆಗೆ ತೆರಳಿದರು.