ಹುಣಸೂರಿನಲ್ಲಿ ರೈತ ಮುಖಂಡರ ಬೈಕ್ ರ್ಯಾಲಿ
ಕ.ಪ್ರ.ವಾರ್ತೆ ಹುಣಸೂರು ಏ. 14
ಮೈಸೂರು ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಜನಪರ ಕೆಲಸ ಕಾರ್ಯ ಮಾಡಿರುವುದರಿಂದ ರೈತಪರ ಸಂಘಟನೆಗಳು ಬೆಂಬಲ ನೀಡುತ್ತಿವೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ರೈತ ಸಂಘ ಸ್ವತಂತ್ರವಾಗಿ ಸ್ಪರ್ಧಿಸಲು ಕಷ್ಟವಾಗುತ್ತಿದೆ. ಹಾಗಾಗಿ ರೈತರಿಗೆ ಸ್ಪಂದಿಸುವವರಿಗೆ ರಾಜ್ಯ ರೈತ ಸಂಘಟನೆಯು ರಾಜ್ಯದ 21 ಕಡೆ ಕಾಂಗ್ರೆಸ್‌ಗೆ 7 ಕಡೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳಿಗೆ ರೈತ ಸಂಘ ಬೆಂಬಲ ನೀಡಿ ಗೆಲುವಿಗೆ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ದೌರ್ಬಲ್ಯದಿಂದ ತಂಬಾಕು ಮಂಡಳಿಯ ನೀತಿ ನಿಯಾಮ ಸರಿಯಾಗಿಲ್ಲ ಮತ್ತು ಯಾವುದೊ ಖಾಸಗಿ ಕಂಪನಿಗಳ ಮಾತಿಗೆ ಒತ್ತು ನೀಡಿ ರೈತರಿಗೆ ಮೋಸವಾಗುತ್ತಿದೆ ಎಂದು ಒಪ್ಪಿಕೊಂಡರು.
ಗೌರವಾಧ್ಯಕ್ಷ ನಾಗಣ್ಣಚಾರ್, ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ ಮತ್ತಿತರರು ಇದ್ದರು.
ಕಾಂಗ್ರೆಸ್ ಅಭ್ಯರ್ಥಿ ಧ್ರುವ ಪರ ಮತಯಾಚನೆ
ಮೂಗೂರು: ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ್ ಪರವಾಗಿ ಪರಿಣಾಮಿಪುರ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ಎಂ. ರಾಜು ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು. ನಂತರ ಅವರು ಮಾತನಾಡಿ, ಕೇಂದ್ರದ ಯುಪಿಎ ಸರ್ಕಾರ ರಾಜ್ಯಕ್ಕೆ ಸಾಕಷ್ಟು ಅನುದಾನ ಒದಗಿಸುವ ಮೂಲಕ ಗ್ರಾಮ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಿದ್ದು, ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು. ಗ್ರಾಪಂ ಮಾಜಿ ಉಪಾಧ್ಯಕ್ಷ ಎಂ.ಬಿ. ಕೃಷ್ಣಸ್ವಾಮಿ, ಕಾಂಗ್ರೆಸ್ ಯುವ ಮುಖಂಡ ಎಂ. ಸುರೇಶ್, ಮಂಜು, ನಾಗರಾಜು ಇದ್ದರು.