ಚಿರತೆ ದಾಳಿಯಿಂದ ಸ್ನೇಹಿತರ ರಕ್ಷಿಸಿದ ಹನ್ನೆರೆಡರ ಪೋರ
ಗುಂಡ್ಲುಪೇಟೆ: ಹನ್ನೆರಡು ವರ್ಷದ ಪೋರ ಚಿರತೆ ಓಡಿಸಿ ತನ್ನ ಸ್ನೇಹಿತರನ್ನು ರಕ್ಷಿಸಿದ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುಂದಕೆರೆ ಅರಣ್ಯದ ಹೊರ ವಲಯದಲ್ಲಿ ಮಂಗಳವಾರ ನಡೆದಿದೆ. ಕಂದಕೆರೆಯ ಮೂವರು ಹುಡುಗರು ಜೇನು ಹಿಡಿಯಲು ಹೋದಾಗ ಚಿರತೆ ದಾಳಿ ನಡೆಸಿತ್ತು. ಬೆಳ್ಳಯ್ಯ (12) ಮತ್ತು ದೊರೆಸ್ವಾಮಿ (14) ಅವರು ತೀವ್ರವಾಗಿ ಗಾಯಗೊಂಡರು. ಇನ್ನೊಬ್ಬ ಬಾಲಕ ಅಪ್ಪು (12) ಧೈರ್ಯ ಮಾಡಿ ಚಿರತೆಯತ್ತ ಕಲ್ಲು ಹೊಡೆದಿದ್ದಾನೆ. ಆಗ ಚಿರತೆ ಇಬ್ಬರನ್ನೂ ಬಿಟ್ಟು ಓಡಿ ಹೋಗಿದೆ. ಗಾಯಾಳು ಬಾಲಕರನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಳ್ಳಯ್ಯನ ಕುತ್ತಿಗೆ ಮತ್ತು ಬೆನ್ನು, ದೊರೆಸ್ವಾಮಿಯ ತೊಡೆ, ಸೊಂಟದ ಭಾಗಕ್ಕೆ ಚಿರತೆ ಕಚ್ಚಿದೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ: 'ಬೆಳ್ಳಯ್ಯ ಹಾಗೂ ದೊರೆಸ್ವಾಮಿ ಜೇನು ಕಟ್ಟಿರುವ ಪೊದೆಯ ಬಳಿಗೆ ಹೋಗಿದ್ದರು. ಪೊದೆಯ ಬಳಿ ಗುರ್ ಎಂದು ಸದ್ದು ಬಂದಿದೆ. ಮೊದಲಿಗೆ ಬೆಳ್ಳಯ್ಯನ ಮೇಲೆ ಚಿರೆತೆ ನೆಗೆದು ಕಚ್ಚಿದೆ. ಅದನ್ನು ಕಂಡು ನಾನು ಕಲ್ಲು ಹೊಡೆದಾಗ ಪಕ್ಕದಲ್ಲಿದ್ದ ದೊರೆಸ್ವಾಮಿ ಮೇಲೆ ಎರಗಿತು. ಜೋರಾಗಿ ಕೂಗುತ್ತ ಮತ್ತೆ ಕಲ್ಲು ಹೊಡೆದಾಗ ಓಡಿತು' ಎಂದು ಅಪ್ಪು ವಿವರಿಸಿದ.