ಬಿಜೆಪಿ-ಜೆಡಿಎಸ್ ಒಪ್ಪಂದ: ಸಿಎಂ
ಕ.ಪ್ರ.ವಾರ್ತೆ ಮೈಸೂರು ಏ. 15
ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ನಗರದ ಹೆಬ್ಬಾಳಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಪರವಾಗಿ ಸೋಮವಾರ ರಾತ್ರಿ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿ ಅವರು, ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಮಾತ್ರ ತ್ರಿಕೋನ ಸ್ಪರ್ಧೆ ಕಾಣುತ್ತಿದೆ. ಆದರೆ, ವಾಸ್ತವಾಗಿ ಬಿಜೆಪಿ ಮತ್ತು ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ ಎಂದರು.
ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬಿಜೆಪಿ ಮತ್ತು ಯಡಿಯೂರಪ್ಪ ಅವರ ಕೆಜೆಪಿ ಬೆಂಬಲ ನೀಡಿತ್ತು. ಆ ಋಣ ತೀರಿಸುವ ಸಲುವಾಗಿ ಜೆಡಿಎಸ್‌ನವರು ಬಿಜೆಪಿಗೆ ಬೆಂಬಲಿಸುತ್ತಿದ್ದಾರೆ. ಹೀಗಾಗಿ ಮತದಾರರು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಮತ ನೀಡಬಾರದು. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಅವರು ಮನವಿ ಮಾಡಿದರು.
ಬಿಜೆಪಿ ಕೋಮುವಾದಿ ಪಕ್ಷ. ಬಹು ಭಾಷೆ, ಬಹು ಸಂಸ್ಕೃತಿ, ಬಹು ಧರ್ಮದಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ಏಕ ನಾಯಕತ್ವ, ಧರ್ಮದಲ್ಲಿ ಬಿಜೆಪಿ ನಂಬಿಕೆ ಇದೆ. ಆದರೆ, ಕಾಂಗ್ರೆಸ್ ಪಕ್ಷವು ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದೆ. ಕೋಮುವಾದಿ ನರೇಂದ್ರ ಮೋದಿಯನ್ನು ಬಿಜೆಪಿ ತನ್ನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದೆ. ಗುಜರಾತ್‌ನಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿ ಆಗಿದ್ದಾಗಲೇ ಗೋದ್ರಾ ಹತ್ಯಾಕಾಂಡ, ಕೋಮುಗಲಭೆ ನಡೆಯಿತು. ಇದರಲ್ಲಿ 3 ಸಾವಿರ ಮುಸ್ಲಿಂರನ್ನು ಹತ್ಯೆಯಾದರು. ಮೋದಿ ಸರ್ಕಾರವು ಕೋಮು ಗಲಭೆಗೆ ಕುಮ್ಮುಕು ನೀಡಿ, ಒಂದು ಧರ್ಮದವರಿಗೆ ಬೆಂಬಲಿಸಿತ್ತು. ಇದಕ್ಕೆ ಮೋದಿಯೇ ನೇರ ಕಾರಣ ಎಂದು ಅವರು ದೂರಿದರು.
ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್, ಶಾಸಕ ವಾಸು, ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸಂಸದ ಎಚ್. ವಿಶ್ವನಾಥ್, ಮಾಜಿ ಶಾಸಕ ಡಿ. ಮಾದೇಗೌಡ, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ. ಬಸವೇಗೌಡ, ಮುಖಂಡರಾದ ಕೆ.ಆರ್. ಮೋಹನ್‌ಕುಮಾರ್ ಇದ್ದರು.
ಅರ್ಥಮಾಡಿಕೊಂಡು ಮಾತನಾಡಲಿ
ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಜೊತೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪದ ವಿರುದ್ಧ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ತೀವ್ರ ವಾಗ್ದಾಳಿ ನಡೆಸಿದರು. ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಿಂದ ಎರಡು ಬಾರಿ ಲೋಕಸಭಾ ಸದಸ್ಯರಾಗಿದ್ದ, ಈ ಬಾರಿಯೂ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಿ ಎಂದು ಕಣ್ಣೀರು ಹಾಕಿದ ಸಿ.ಎಚ್. ವಿಜಯಶಂಕರ್ ಅವರನ್ನು ಹಾಸನಕ್ಕೆ ದಬ್ಬಿದ್ದು, ಜೆಡಿಎಸ್‌ಗೆ ಹೋಗುವ ಮತಗಳನ್ನು ವಿಭಜಿಸಲು ಅಂಕಣಕಾರ ಪ್ರತಾಪ್‌ಸಿಂಹ ಅವರನ್ನು ಇಲ್ಲಿಗೆ ತಂದು ನಿಲ್ಲಿಸಿದವರು ಯಾರು? ಎಲ್ಲವೂ ನನಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು. ದೇವೇಗೌಡರಿಗೆ ಐದಾರು ಸೀಟುಗಳು ಬಂದಲ್ಲಿ ಯಾವ ಕಡೆ ಬೇಕಾದರೂ ಹೋಗುತ್ತಾರೆ ಎಂದು ಹೇಳಿರುವ ಬಗ್ಗೆಯೂ ಕಿಡಿಕಾರಿದ ಅವರು, ನನ್ನ ಗರಡಿಯಲ್ಲಿಯೇ ಪಳಗಿ ನನ್ನ ವಿರುದ್ಧ ಮಾತನಾಡುವ ಸಿದ್ದರಾಮಯ್ಯ ಅವರೇ, ಈ ದೇವೇಗೌಡ ಏನೆಂದು ಅರ್ಥ ಮಾಡಿಕೊಂಡು ಮಾತನಾಡಿ ಎಂದು ಗುಡುಗಿದರು.