ರಸ್ತೆ ಆಕ್ರಮಿಸಿದ ರಾಜಕೀಯ ಪಡೆ
ಅಂಶಿ ಪ್ರಸನ್ನಕುಮಾರ್
ಕ.ಪ್ರ.ವಾರ್ತೆ ಮೈಸೂರು ಏ. 15
ಮೊದಲೆಲ್ಲಾ ಚುನಾವಣೆಗಳು ಎಂದರೆ ಹತ್ತಾರು ಸಾರ್ವಜನಿಕ ಸಭೆಗಳು, ಸಹಸ್ರಾರು ಜನರ ಸೇರ್ಪಡೆ, ನಾಲ್ಕಾರು ರಾಷ್ಟ್ರೀಯ ನಾಯಕರ ಆಗಮನ ಇರುತ್ತಿತ್ತು. ಆದರೆ ಈ ಬಾರಿ ಸಾರ್ವಜನಿಕ ಸಭೆಗಳು ನಡೆದಿದ್ದು ಎರಡೇ. ಬಂದ ರಾಷ್ಟ್ರೀಯ ನಾಯಕರು ಮೂವರು ಮಾತ್ರ. ರೋಡ್ ಶೋಗಳೇ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡವು. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಭಾಗವಹಿಸಿದ್ದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಶಾಂತಿನಗರದಲ್ಲಿ ಏರ್ಪಡಿಸಿದ್ದ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಇದಲ್ಲದೇ ಪಿರಿಯಾಪಟ್ಟಣ, ಹುಣಸೂರು, ಮೈಸೂರಿನಲ್ಲಿ ಎರಡು ಕಡೆ ನಡೆದ ಜೆಡಿಎಸ್ ಸಭೆಗಳು, ಪ್ರಚಾರದ ಅಂತಿಮ ದಿನ ರೋಡ್ ಶೋನಲ್ಲೂ ಗೌಡರು ಭಾಗವಹಿಸಿದ್ದರು.
ಚುನಾವಣೆ ಘೋಷಣೆಗೂ ಮೊದಲೇ ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿ ಮೈಸೂರಿನಲ್ಲಿ ರೋಡ್ ಶೋ ನಡೆಸಿದ್ದರು.
ಕಾಂಗ್ರೆಸ್ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಪ್ರಚಾರ ಮಾಡಿದರು. ಅವಿಭಜಿತ ಮೈಸೂರು ಜಿಲ್ಲೆಯಲ್ಲಂತೂ ಸಿದ್ದರಾಮಯ್ಯ ಮೂರ್ನಾಲ್ಕು ಸುತ್ತು ಪ್ರಚಾರ ನಡೆಸಿದರು. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮೈಸೂರಿನಲ್ಲಿ ರೋಡ್ ಶೋ ನಡೆಸಿದರು. ಎಐಸಿಸಿ ಕಾರ್ಯದರ್ಶಿ ದಿಗ್ವಿಜಯ ಸಿಂಗ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಸಚಿವ ರೋಷನ್ ಬೇಗ್, ಕೇಂದ್ರ ಸಚಿವ ಕೆ. ರೆಹಮಾನ್ಖಾನ್, ಮಾಜಿ ಸಚಿವರಾದ ಸಿ.ಎಂ. ಇಬ್ರಾಹಿಂ, ಎಂ.ವಿ. ರಾಜಶೇಖರನ್, ಬಿ.ಕೆ. ಚಂದ್ರಶೇಖರ್ ಪ್ರಚಾರ ನಡೆಸಿದರು. ಸಚಿವರಾದ ವಿ.ಶ್ರೀನಿವಾಸಪ್ರಸಾದ್, ಡಾ.ಎಚ್.ಸಿ. ಮಹದೇವಪ್ಪ, ಎಚ್.ಎಸ್. ಮಹದೇವಪ್ರಸಾದ್, ರೈತ ಸಂಘದ ವರಿಷ್ಠ ಕೆ..ಎಸ್. ಪುಟ್ಟಣ್ಣಯ್ಯ, ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್, ಛಲವಾದಿ ನಾರಾಯಣಸ್ವಾಮಿ, ಶಾಸಕರು, ಮಾಜಿ ಶಾಸಕರು, ಮುಖಂಡರು ಉಭಯ ಜಿಲ್ಲೆಗಳಲ್ಲಿ ವ್ಯಾಪಕ ಪ್ರಚಾರ ನಡೆಸಿದರು.
ಬಿಜೆಪಿ ಪರ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪ, ಆರ್. ಅಶೋಕ, ಮಾಜಿ ಸಚಿವರಾದ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಸಿ.ಟಿ. ರವಿ, ಎಂ.ಪಿ. ಅಪ್ಪಚ್ಚು ರಂಜನ್, ಎಸ್.ಎ. ರಾಮದಾಸ್, ಎಂ. ಮಹದೇವ್, ಬಿ, ಶ್ರೀರಾಮುಲು, ಬಿ.ಸೋಮಶೇಖರ್, ಮಾಜಿ ಸ್ವೀಕರ್ ಕೆ.ಜಿ. ಬೋಪಯ್ಯ, ಶಾಸಕರಾದ ಸಿದ್ದರಾಜು, ಗೋ. ಮಧುಸೂದನ್, ಮಾಜಿ ಶಾಸಕರಾದ ಸಿ. ಗುರುಸ್ವಾಮಿ, ತೋಂಟದಾರ್ಯ, ಮಾಜಿ ಸಂಸದೆ ತೇಜಸ್ವಿನಿಗೌಡ, ಮಹಿಳಾ ಮೋರ್ಚಾದ ರೀನಾ ಪ್ರಕಾಶ್, ಮೊದಲಾದವರು ಪ್ರಚಾರ ಮಾಡಿದರು,.
ಜೆಡಿಎಸ್ ಪರ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರ ನಡೆಸಿದರು. ಮೈಸೂರಿಗೆ ಬರಲಿಲ್ಲ. ಮಾಜಿ ಸಚಿವ ಎಚ್.ಡಿ. ರೇವಣ್ಣ, ಶಾಸಕ ವೈ.ಎಸ್.ವಿ. ದತ್ತ, ಮಾಜಿ ಶಾಸಕ ಎಚ್.ಸಿ. ನೀರಾವರಿ, ಬಂದು ಹೋದರು. ಜಿಲ್ಲೆಯವರೇ ಆದ ಮಾಜಿ ಸಚಿವ ಜಿ.ಟಿ. ದೇವೇಗೌಡ, ಶಾಸಕರಾದ ಎಸ್. ಚಿಕ್ಕಮಾದು, ಸಾ.ರಾ. ಮಹೇಶ್, ಸಂದೇಶ್ ನಾಗರಾಜ್, ಪ್ರದೇಶ ಜನತಾದಳ ಕಾನೂನು ವಿಭಾಗದ ಅಧ್ಯಕ್ಷ ಸುರೇಶ್ ಬಾಬು, ಮುಖಂಡರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.
ತಾರಾ ಮೆರುಗು
ಕಾಂಗ್ರೆಸ್ ಪರ ಜಯಮಾಲ, ನಟರಾದ ದರ್ಶನ್ ತೂಗುದೀಪ, ಮುಖ್ಯಮಂತ್ರಿ ಚಂದ್ರು, ಮದನ್ ಪಟೇಲ್ ಪ್ರಚಾರ ನಡೆಸಿದರು. ಬಿಜೆಪಿ ಪರ ಜಗ್ಗೇಶ್, ನಟಿಯರಾದ ಮಾಳವಿಕ ಅವಿನಾಶ್, ತಾರಾ, ಕಿರುತೆರೆ ನಟ ಸುನಿಲ್ ಪುರಾಣಿಕ್ ಪ್ರಚಾರ ಮಾಡಿದರು.
ಸಾಹಿತಿಗಳ ಸಾಥ್
ಕಾಂಗ್ರೆಸ್ ಪರ ಸಾಹಿತಿಗಳಾದ ಪ್ರೊ.ಜಿ.ಕೆ. ಗೋವಿಂದರಾವ್, ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಡಾ.ಕೆ. ಮರುಳಸಿದ್ದಪ್ಪ ಮೊದಲಾದವರು ಪ್ರಚಾರ ಮಾಡಿದರು. ಸಾಹಿತಿ ದೇವನೂರ ಮಹಾದೇವ ನೇತೃತ್ವದ ಸರ್ವೋದಯ ಕರ್ನಾಟಕ ರಾಜ್ಯದ 21 ಕಡೆ ಕಾಂಗ್ರೆಸ್ ಹಾಗೂ 7 ಕಡೆ ಎಎಪಿಗೆ ಬೆಂಬಲ ಘೋಷಿಸಿತು.
ಎಸ್ಡಿಪಿಐ
ಜೆಡಿಎಸ್ ಪರ ಎಸ್ಡಿಪಿಐ ಸಂಸ್ಥಾಪಕ ಡಿ. ಅಬೂಬಕ್ಕರ್, ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಪ್ರೊ. ಶಬೀರ್ ಮುಸ್ತಾಪ, ಪ್ರೊ.ವಿ.ಪಿ. ನಂಜರಾಜೇ ಅರಸ್ ಮೊದಲಾದವರು ಪ್ರಚಾರ ಮಾಡಿದರು. ತಾಲೂಕು ಕೇಂದ್ರಗಳಲ್ಲೂ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪ್ರಚಾರ ಸಭೆಗಳು ನಡೆದವು., ಬಹುಜನ ಸಮಾಜಪಕ್ಷ, ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಗಳು ತಮ್ಮದೇ ಇತಿಮಿತಿಯಲ್ಲಿ ಪ್ರಚಾರ ನಡೆಸಿದರು.
ಪ್ರಸ್ತಾಪವಾಗದ ಸಮಸ್ಯೆಗಳು
ಕುಡಿವ ನೀರಿನ ಸಮಸ್ಯೆ, ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಬಂದ್, ಕರಡಿಲಕ್ಕನಕೆರೆ ಏತ ನೀರಾವರಿ ಕಾಮಗಾರಿ ಅಪೂರ್ಣ, ಮಾನವ- ವನ್ಯ ಪ್ರಾಣಿಗಳ ಸಂಘರ್ಷ, ಉತ್ತಮವಾದ ರಸ್ತೆ, ಗಿರಿಜನರ ಹತ್ತಾರು ಸಮಸ್ಯೆಗಳಿಗೆ ಪರಿಹಾರ ಸಿಗದಿರುವುದು, ಆಶ್ರಯ ಮನೆಗಳ ವಿತರಣೆಯಲ್ಲಿ ಲೋಪ, ನರ್ಮ್ ಯೋಜನೆ ಕಾಮಗಾರಿ ವಿಳಂಬ, ನಾಲೆಗಳ ಆಧುನೀಕರಣ ಕಾಮಗಾರಿ ಮುಗಿಯದಿರುವುದು, ಲಕ್ಷ್ಮಣತೀರ್ಥ ನದಿಯ ಅಶುಚಿತ್ವ, ಬಹುಗ್ರಾಮ ಶಾಶ್ವತ ಕುಡಿಯುವ ನೀರಿನ ಯೋಜನೆಗಳು, ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ 2ನೇ ಹಂತದ ಕಾಮಗಾರಿ, ಕಬಿನಿ 2ನೇ ಹಂತದ ಯೋಜನೆ-ಹೀಗೆ ಹತ್ತು ಹಲವು ಸಮಸ್ಯೆಗಳಿದ್ದರೂ ಇವುಗಳ ಪ್ರಸ್ತಾಪ ಕಡಿಮೆ.