ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿಶ್ವನಾಥ್ ಸಾಧನೆ ಶೂನ್ಯ: ಶಿವಶಂಕರ್

Srinivasa Murthy VN
Updated On : 16 Apr 2014, 1:15 am

ಮೈಸೂರು: ದೇವೇಗೌಡರನ್ನು ಟೀಕಿಸುವ ಒಂದಂಶದ ಕಾರ್ಯಕ್ರಮ ಹಮ್ಮಿಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಅವರ ಐದು ವರ್ಷಗಳ ಸಾಧನೆ ಶೂನ್ಯ ಎಂದು ಜಿಲ್ಲಾ ಕನ್ನಡ ಚಳವಳಿಗಾರರ ಸಂಘದ ಅಧ್ಯಕ್ಷ ಬಿ.ಎ. ಶಿವಶಂಕರ್ ದೂರಿದರು. ವಾರಕ್ಕೊಂದು ಪತ್ರಿಕಾಗೋಷ್ಠಿ ನಡೆಸಿ ದೇವೇಗೌಡರನ್ನು ಟೀಕಿಸುವುದನ್ನೇ ಒಂದಂಶದ ಕಾರ್ಯಕ್ರಮವನ್ನಾಗಿ ಮಾಡಿಕೊಂಡಿರುವ ವಿಶ್ವನಾಥ್‌ಗೆ ಮೈಸೂರಿನ 'ಮಾಧ್ಯಮ ವೀರ' ಪ್ರಶಸ್ತಿ ನೀಡಬೇಕು. ಕಾವೇರಿ ನೀರು, ಹಾರಂಗಿ ಮತ್ತು ಕಬಿನಿ ಜಲಾಶಯ ನಿರ್ಮಾಣ ಸಂಬಂಧ 1964 ರಲ್ಲಿಯೇ ಎಚ್.ಡಿ. ದೇವೇಗೌಡರು ವಿಧಾನಸಭೆಯಲ್ಲಿ ಮಸೂದೆ ಮಂಡಿಸಿದ್ದರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕೇಂದ್ರ ಸರ್ಕಾರದಿಂದ ಮೈಸೂರಿಗೆ ರೈಲ್ವೆ ವೈದ್ಯಕೀಯ ಕಾಲೇಜು, ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಕ್ರಮಗಳನ್ನು ತರಲಾಗದ ವಿಶ್ವನಾಥ್ ಅವರು, ಕೊಡಗು ಭಾಗದ ಕಾಫಿ ಬೆಳೆಗಾರರ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಎಚ್.ಎಸ್. ಪ್ರಭು, ವೆಂಕಟೇಶ್, ಎಚ್. ಬಸವರಾಜ್, ಸುಗಂಧರಾಜ್ ಇದ್ದರು.

ಬೆಂಬಲ
ಮೈಸೂರು: ಮೈಸೂರು-ಕೊಡಗು ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್‌ಗೆ  ಮೈಸೂರು ನಗರ ಮತ್ತು ಜಿಲ್ಲಾ ಆಟೋ ಚಾಲಕರ ಸಂಘಗಳ ಒಕ್ಕೂಟ ಬೆಂಬಲ ಸೂಚಿಸಿದೆ. ಮೂರು ತಿಂಗಳ ಹಿಂದೆ ನಡೆದ ಆಟೋಚಾಲಕರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿ ಆಟೋ ಚಾಲಕರ ಬೇಡಿಕೆಗಳನ್ನು ಈಡೇರಿಸುವುದಾಗಿ ವಾಗ್ದಾನ ನೀಡಿದ್ದಾರೆ. ಅಲ್ಲದೇ ಸಂಸದ ಎಚ್.ವಿಶ್ವನಾಥ್ ಈಗಾಗಲೇ ಆಟೋ ಚಾಲಕರಿಗೆ ಪ್ರತ್ಯೇಕ ಸಮುದಾಯ ಭವನ ನಿರ್ಮಿಸಲು ಅನುದಾನ ನೀಡಿದ್ದಾರೆ. ಆಟೋ ಚಾಲಕರಿಗೆ 800 ನಿವೇಶನ ಕೊಡಿಸಲು ನಗರಪಾಲಿಕೆಯಿಂದ ಅನುಮತಿ ಕೊಡಿಸಿದ್ದಾರೆ. ಅವರನ್ನು ಗೆಲ್ಲಿಸಿದರೆ ಮುಂದಿನ ದಿನಗಳಲ್ಲಿ ನಮ್ಮೆಲ್ಲ ಬೇಡಿಕೆ ಈಡೇರಲಿವೆ ಎಂದು ಸಂಘದ ಅಧ್ಯಕ್ಷ ಎಡ್ವಿನ್ ವಿಲ್ಸನ್ ವೆಸ್ಲಿ ತಿಳಿಸಿದ್ದಾರೆ.
ತಾಯೂರು ಬೆಂಬಲ: ಮೈಸೂರು- ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಅವರಿಗೆ ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರ ಕೇಂದ್ರ ಸಮಿತಿ ಅಧ್ಯಕ್ಷ ತಾಯೂರು ವಿಠಲಮೂರ್ತಿ ಬೆಂಬಲ ಸೂಚಿಸಿದ್ದಾರೆ.
ವಿವಿಧ ಸಂಘ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್‌ಗೆ ಆರ್ಯವೈಶ್ಯ, ಯಾದವ, ವಿಶ್ವಕರ್ಮ ಹಾಗೂ ಗಾಣಿಗ ಜನಾಂಗದವರು ಬೆಂಬಲ ಸೂಚಿಸಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಸಮ್ಮುಖದಲ್ಲಿ ಬೆಂಬಲ ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ವಿಶ್ವನಾಥ್ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವಂತೆ ಕಾಂಗ್ರೆಸ್ ಸೇವಾದಳ ಸಂಘಟನಾ ಕಾರ್ಯದರ್ಶಿ ವಿ.ಶ್ರೀನಿವಾಸ ತಿಳಿಸಿದ್ದಾರೆ.

ಮನವಿ
ಮೈಸೂರು: ಬಿಜೆಪಿ ಸಾಮಾಜಿಕ ನ್ಯಾಯದ ವಿರೋಧಿಯಾದ್ದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿಂದುಳಿದವರು ಕಾಂಗ್ರೆಸ್ ಬೆಂಬಲಿಸಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟ ಅಧ್ಯಕ್ಷ ಜೆ. ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮನವಿ ಮಾಡಿದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಿಂದುಳಿದವರ ರಕ್ಷಣೆ ಆಗಿದೆ. ಮಾಧ್ಯಮಗಳು ಏನೇ ಹೇಳಿದರೂ ಜನರ ಮನಸ್ಸಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ಆಸೆ ಇದೆ. ಈ ಬಾರಿ ಖಂಡಿತವಾಗಿಯೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ತಿರುಚುವುದು ನಿಶ್ಚಿತ. ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡುವುದಾದರೆ ಅದು ದೇವೇಗೌಡರಿಂದ ಮಾತ್ರ ಸಾಧ್ಯ ಎಂದು ದೂರಿದರು. ಡಾ. ವಸಂತಮ್ಮ ಮಾತನಾಡಿದರು. ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್.ಎ. ವೆಂಕಟೇಶ್,  ಕೆ.ಎಸ್. ಶಿವರಾಮ್ ಇದ್ದರು.

ಅಪರಾಧ
ಮೈಸೂರು: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತ ಮಾರುವುದು ಮತ್ತು ಖರೀದಿಸುವುದು ಅಕ್ಷಮ್ಯ ಅಪರಾಧ ಎಂದು ಜೆಡಿಎಸ್ ಕೆ.ಆರ್. ಬ್ಲಾಕ್ ಅಧ್ಯಕ್ಷ ಎಂ. ಬಸವರಾಜು ತಿಳಿಸಿದ್ದಾರೆ. ನಗರದಲ್ಲಿ ನಡೆದ ಚುನಾವಣೆಯಲ್ಲಿ ಯುವಜನತೆ ಪಾತ್ರ ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಜಾತಿ ಮತ್ತು ಧರ್ಮದ ವಿಷ ಬೀಜವನ್ನು ಯುವಜನತೆ ಮನಸ್ಸಿನ ಮೇಲೆ ಬಿತ್ತಲಾಗುತ್ತಿದೆ. ಇದು ಆತಂಕಕಾರಿ ವಿಷಯವಾಗಿದೆ. ಇಂತಹ ಕೃತ್ಯಗಳಿಗೆ ಯುವಜನತೆ ಬಲಿಯಾಗಬಾರದು ಎಂದು ಕೋರಿದರು. ವಿಚಾರ ಸಂಕಿರಣದಲ್ಲಿ ಮಹಿಳಾ ಸಂಘಟನೆಯ ಸುಶೀಲ, ಪ್ರೊ. ರಾಮಚಂದ್ರು, ಸಿರಿಯಾ ಜೋಸೆಫ್, ಹನೀಫ್ ಇದ್ದರು.                         

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement