ಗಡಿಬಿಡಿ ಬಿಡಿ, ಮತ ನೀಡಿ...
ಮತದಾರನ ಸುರಕ್ಷೆಗೆ ನಾವಿದ್ದೇವೆ: ಪೊಲೀಸ್ ಪಡೆ ಅಭಯ ್ಣ ನಗರ-ಜಿಲ್ಲೆಯಲ್ಲಿ ಬಿಗಿ ಭದ್ರತೆ
ಕ.ಪ್ರ.ವಾರ್ತೆ ಮೈಸೂರು ಏ. 16
ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಪೊಲೀಸರು ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಿದ್ದಾರೆ.
ಮೈಸೂರು ನಗರ ವ್ಯಾಪ್ತಿಗೆ ಒಟ್ಟು 806 ಮತಗಟ್ಟೆಗಳು ಒಳಪಟ್ಟಿದ್ದು ಅದರಲ್ಲಿ ಚಾಮರಾಜ, ಕೃಷ್ಣರಾಜ, ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳು ಸಂಪೂರ್ಣವಾಗಿ ಹಾಗೂ ಚಾಮುಂಡೇಶ್ವರಿ ಮತ್ತು ವರುಣ ಕ್ಷೇತ್ರದ ಭಾಗಶ- ಮತಗಟ್ಟೆಗಳು ಒಳಪಟ್ಟಿವೆ.
ನಗರ ವ್ಯಾಪ್ತಿಯ ಒಟ್ಟು 806 ಮತಗಟ್ಟೆಗಳ ಪೈಕಿ 222 ಮತಗಟ್ಟೆಗಳನ್ನು ಅತಿಸೂಕ್ಷ್ಮ ಮತಗಟ್ಟೆಗಳು ಎಂದು ಪರಿಗಣಿಸಿದ್ದು, ಈ ಪೈಕಿ 64 ಮತಗಟ್ಟೆಗಳನ್ನು ಸೂಕ್ಷ್ಮಾತಿ ಸೂಕ್ಷ್ಮ ಮತಗಟ್ಟೆಗಳೆಂದು ಮರುವಿಂಗಡಿಸಲಾಗಿದೆ. 312 ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳು ಹಾಗೂ 272 ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಲಾಗಿದೆ.
ಎಲ್ಲ ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನ ಪ್ರಕ್ರಿಯೆಯು ನಡೆಯಲು ಹಾಗೂ ಸಾರ್ವಜನಿಕರು ನಿರ್ಭೀತಿಯಿಂದ ಬಂದು ಮತದಾನ ಮಾಡಲು ಎಲ್ಲ ರೀತಿಯ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಂಡು ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಿಲಾಗಿದೆ. ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಭದ್ರತೆ ಒದಗಿಸಿದ್ದು, ಈ ಪೈಕಿ ಸೂಕ್ಷ್ಮಾತಿಸೂಕ್ಷ್ಮ ಮತಗಟ್ಟೆಗಳಿಗೆ ಸ್ಥಳೀಯ ಪೊಲೀಸರಲ್ಲದೆ ಹೆಚ್ಚುವರಿಯಾಗಿ ಅರೆಸೇನಾ ಸಿಬ್ಬಂದಿ ಸಹ ನಿಯೋಜಿಸಿಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ.
ಮತದಾನ ನಡೆಯುವ ವೇಳೆಯಲ್ಲಿ ಮತಗಟ್ಟೆಗಳ ಸುತ್ತಲೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ಚುನಾವಣಾ ನೀತಿ ಸಂಹಿತೆಯು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಹೆಚ್ಚಿನ ಆಧ್ಯತೆ ನೀಡಲಾಗಿದೆ. ನಗರ ವ್ಯಾಪ್ತಿಯನ್ನು 68 ಸೆಕ್ಟರ್ಗಳಾಗಿ ವಿಂಗಡಿಸಿ, ಪ್ರತಿ ಸೆಕ್ಟರ್ಗೆ 10-12 ಮತಗಟ್ಟೆಗಳು ಒಳಪಡಲಿದೆ. ಈ ಎಲ್ಲ 68 ಸೆಕ್ಟರ್ಗಳಿಗೂ ತಲಾ ಒಂದು ಮೊಬೈಲ್ ಸಂಚಾರಿ ದಳವನ್ನು ನಿಯೋಜಿಸಲಾಗಿದೆ. ಈ ಮೊಬೈಲ್ಸಿಬ್ಬಂದಿ ಮತದಾನದ ದಿನದಂದು ನಿರಂತರವಾಗಿ ಸಂಚರಿಸುತ್ತಾ ಚುನಾವಣಾ ನೀತಿ ಸಂಹಿತೆಗೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಉಂಟಾದಂತೆ ನಿಗಾವಹಿಸಲಿದೆ ಎಂದು ಆಯುಕ್ತ ಡಾ.ಎಂ.ಎ. ಸಲೀಂ ಹೇಳಿದ್ದಾರೆ.
ಅಲ್ಲದೆ, ವೀಡಿಯೋ ಗ್ರಾಫರ್ಸ್ಗಳನ್ನು ಒಳಗೊಂಡ 25 ಉಸ್ತುವಾರಿ ಮೊಬೈಲ್ ತಂಡಗಳನ್ನು ನಿಯೋಜಿಸಿದ್ದು, ಈ ತಂಡಗಳು ಗಸ್ತಿನ ವೇಳೆಯಲ್ಲಿ ಯಾವುದೇ ರೀತಿಯ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಅಕ್ರಮ ಗುಂಪು ಹಾಗೂ ಅಕ್ರಮ ಚಟುವಟಿಕೆ ವಿಡಿಯೋ ಚಿತ್ರೀಕರಿಸಿಕೊಳ್ಳುತ್ತದೆ. ಜೊತೆಗೆ ತಕ್ಷಣ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಸೆಕ್ಟರ್ ಮೊಬೈಲ್ ಮತ್ತು ಉಸ್ತುವಾರಿ ಮೊಬೈಲ್ ತಂಡ ಅಲ್ಲದೆ ಹಿರಿಯ ಅಧಿಕಾರಿಗಳನ್ನು ಒಳಗೊಂಡ 14 ಮೇಲುಸ್ತುವಾರಿ ಮೊಬೈಲ್ ತಂಡಗಳನ್ನು ಸಹ ಬಂದೋಬಸ್ತ್ ಕರ್ತವ್ಯಕ್ಕಾಗಿ ನಿಯೋಜಿಸಿಲಾಗಿದೆ ಎಂದು ಅವರು ವಿವರಿಸಿದ್ದಾರೆ.
1514 ಭದ್ರತಾ ಸಿಬ್ಬಂದಿ: ಚುನಾವಣಾ ಬಂದೋಬಸ್ತ್ಗೆ ಒಟ್ಟಾರೆಯಾಗಿ ಮೈಸೂರು ನಗರ ಪೊಲೀಸ್ ಘಟಕದ 1514 ಸಿಬ್ಬಂದಿ, ಅರಸೇನಾ ಪಡೆಯ 3 ತಂಡಗಳು, ಕೆಎಸ್ಆರ್ಪಿ 2 ತಂಡಗಳು ಹಾಗೂ ಮೈಸೂರು ನಗರ ಸಶಸ್ತ್ರ ಮೀಸಲು ಪಡೆಯ 20 ತುಕಡಿಗಳು, ಮೈಸೂರು ನಗರ ಪೊಲೀಸ್ ಘಟಕದ 3 ಕಮಾಂಡೋ ಪಡೆಗಳನ್ನು ನಿಯೋಜಿಸಲಾಗಿದೆ.
ಅಲ್ಲದೆ, ನಗರ ವ್ಯಾಪ್ತಿಯ ಎಲ್ಲ ರೌಡಿ ಆಸಾಮಿಗಳು, ಗೂಂಡಾಗಳು, ಪೂರ್ವ ಸಜಾ ಆಸಾಮಿಗಳು, ಗಲಭೆಕೋರರು, ಕೋಮು ಪ್ರಚೋದನೆ ಮಾಡುವವರು, ಈ ಹಿಂದೆ ಚುನಾವಣಾ ಸಮಯದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಅಗತ್ಯ ಭದ್ರತಾ ಕ್ರಮ ಕೈಗೊಳ್ಳುವ ಮೂಲಕ ಚುನಾವಣೆಗೆ ಸರ್ವ ರೀತಿಯಲ್ಲಿಯೂ ಸನ್ನದ್ಧರಾಗಿರುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
2585 ಪೊಲೀಸರ ನಿಯೋಜನೆ
ಲೋಕಸಭಾ ಚುನಾವಣೆ ಸಂಬಂಘ ಮೈಸೂರು ಜಿಲ್ಲೆಯಲ್ಲಿ ಒಟ್ಟು 1869 ಮತಗಟ್ಟೆಗಳು ಬರಲಿದ್ದು, ಎಲ್ಲ ಮತಗಟ್ಟೆಗಳಿಗೆ ಸಿಬ್ಬಂದಿ ನಿಯೋಜಿಸಲಾಗಿದೆ. ಚುನಾವಣಾ ಕಾರ್ಯಕ್ಕಾಗಿ 16 ಡಿವೈಎಸ್ಪಿ, 25 ಇನ್ಸ್ಪೆಕ್ಟರ್, 44 ಎಸ್ಐಗಳು ಹಾಗೂ 2500 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಎಸ್ಪಿ ಅಭಿನವ್ ಅಶೋಕ್ ಖರೆ ತಿಳಿಸಿದ್ದಾರೆ. ಅಲ್ಲದೆ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ. 400 ಸಿಬ್ಬಂದಿ ಇರುವ 121 ಸೆಕ್ಟರ್ ಮೊಬೈಲ್ ತಂಡಗಳನ್ನು ಚುನಾವಣಾ ಗಸ್ತು ಕಾರ್ಯ ನಿರ್ವಹಿಸಲಿವೆ. ಹಣ ಹಂಚುವ ಇತ್ಯಾದಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಪ್ರತ್ಯೇಕ ತಂಡಗಳನ್ನು ನಿಯೋಜಿಸಲಾಗಿದೆ. ಚುನಾವಣಾ ಸುಗಮ ಕಾರ್ಯಕ್ಕಾಗಿ ಸಾಕಷ್ಟು ಸಂಖ್ಯೆಯಲ್ಲಿ ಸೆಂಟ್ರಲ್ ಪ್ಯಾರಾ ಮಿಲಿಟರಿ ಪಡೆ ಹಾಗೂ ಕೆಎಸ್ಆರ್ಪಿ ತುಕಡಿಗಳು ಆಗಮಿಸಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಜಿಲ್ಲೆಯಲ್ಲಿ ಉತ್ತಮ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಪೊಲೀಸರ ಸೂಚನೆಗಳು...
- ಏ.17 ರಂದು ಮತ ಕೇಂದ್ರಗಳಿಗೆ ಮತದಾನಕ್ಕಾಗಿ ಬರುವ ಸಾರ್ವಜನಿಕರು ನಿರ್ಭಯವಾಗಿ ಬಂದು ಮತದಾನ ಮಾಡುವ ನಿಟ್ಟಿನಲ್ಲಿ ಎಲ್ಲ ಮತ ಕೇಂದ್ರಗಳಿಗೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.
- ಮತದಾನ ಬಗ್ಗೆ ನಿಗದಿಪಡಿಸಿದ ವೇಳೆಯಲ್ಲಿ ಸಾರ್ವಜನಿಕರು ಮತಕೇಂದ್ರಗಳಿಗೆ ಹಾಜರಾಗಿ ಸರತಿ ಸಾಲಿನಲ್ಲಿ ನಿಂತು ಶಾಂತಿಯುತವಾಗಿ ಮತದಾನ ಮಾಡುವುದು.
- ಮತದಾನ ಮಾಡುವ ಬಗ್ಗೆ ಚುನಾವಣಾ ಇಲಾಖೆಯಿಂದ ನೀಡಲಾದ ಗುರುತಿನ ಚೀಟಿ ಅಥವಾ ಚುನಾವಣಾ ಆಯೋಗವು ಸೂಚಿಸಿದಂತಹ ಇನ್ನಿತರ ಅಗತ್ಯ ದಾಖಲಾತಿಗಳನ್ನು ಜೊತೆಯಲ್ಲಿ ಹೊಂದಿರತಕ್ಕದ್ದು.
- ಮತಕೇಂದ್ರಗಳ ಬಳಿ ಸಾರ್ವಜನಿಕರು ಶಾಂತ ರೀತಿಯಲ್ಲಿ ವರ್ತಿಸಿ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯುವ ನಿಟ್ಟಿನಲ್ಲಿ ಮತಕೇಂದ್ರಗಳ ಬಳಿ ಪೊಲೀಸರು ನೀಡುವ ಸೂಚನೆಗಳನ್ನು ತಪ್ಪದೇ ಪಾಲಿಸುವುದು.
- ಮತದಾನ ಮಾಡಲು ಬರುವಾಗ ಯಾವುದೇ ಪಕ್ಷ, ಉಮೇದುವಾರರ ಪರವಾಗಿ ಪ್ರಚಾರ ಮಾಡಬಾರದು, ಯಾವುದೇ ಪಕ್ಷದ ಚಿಹ್ನೆ, ಕರಪತ್ರ ಹೊಂದಿರಕೂಡದು.
- ಮತಕೇಂದ್ರದ ಒಳಗೆ ಪ್ರವೇಶಿಸಿದ ನಂತರ ಮತಗಟ್ಟೆ ಅಧಿಕಾರಿಗಳು ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವುದು. ತಾವು ಚಲಾಯಿಸಿದ ಮತದ ಬಗ್ಗೆ ಗೌಪ್ಯತೆ ಕಾಪಾಡುವುದು.
- ಮತಕೇಂದ್ರಗಳಿಗೆ ಬರಲು ಯಾವುದೇ ಪಕ್ಷದ ಉಮೇದುವಾರರ ಏಜೆಂಟರ ಸಹಾಯ ಪಡೆಯಬೇಡಿ ಇದು ಕಾನೂನು ಬಾಹಿರ.
- ಮತ ಚಲಾಯಿಸುವ ಸಂಬಂಧವಾಗಿ ಯಾವುದೇ ಪಕ್ಷ ಉಮೇದುವಾರ ಏಜೆಂಟರುಗಳು ನೀಡುವ ಆಮಿಷಗಳಿಗೆ ಒಳಗಾಗಬೇಡಿ. ಮತ ಚಲಾವಣೆ ಬಗ್ಗೆ ಆಮಿಷ ಒಡ್ಡಿದ ಪಕ್ಷದಲ್ಲಿ ಚುನಾವಣಾ ಅಧಿಕಾರಿ, ಪೊಲೀಸರಿಗೆ ಮಾಹಿತಿ ನೀಡಿ.
- ಮತ ಚಲಾಯಿಸುವ ಬಗ್ಗೆ ಯಾವುದೇ ವ್ಯಕ್ತಿ, ಪಕ್ಷದ ಕಾರ್ಯಕರ್ತರು ಬೆದರಿಕೆಯೊಡ್ಡಿದಲ್ಲಿ ತಕ್ಷಣ ಚುನಾವಣಾ ಅಧಿಕಾರಿಗಳಿಗೆ, ಪೊಲೀಸರಿಗೆ ಮಾಹಿತಿ ನೀಡಿ. ಭಯದಿಂದ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಡಿ.
- ಮತಕೇಂದ್ರಗಳ ಬಳಿ ಯಾವುದೇ ವಿವಾದಗಳನ್ನು ಸೃಷ್ಟಿಸದೇ ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಹಾನಿಮಾಡದೆ ನೀವೊಬ್ಬ ಜವಾಬ್ದಾರಿಯುತ ನಾಗರೀಕರೆಂಬಂತೆ ವರ್ತಿಸಿ ಮತದಾನವು ಶಾಂತಿಯುತವಾಗಿ ನಡೆಯುವ ನಿಟ್ಟಿನಲ್ಲಿ ಪೊಲೀಸರೊಂದಿಗೆ ಸಹಕರಿಸಿ.