'ಶಾಸನ ಸಂಪುಟ ಪರಿಷ್ಕರಣೆ ಅಗತ್ಯ'
ಮೈಸೂರು: ಶಾಸನಗಳು ದೊರೆತಂತೆ ಎಪಿಗ್ರಾಫಿಯ ಕರ್ನಾಟಕ ಸಂಪುಟದ ಪರಿಷ್ಕರಣೆ ಅಗತ್ಯ ಎಂದು ಸಂಪುಟ ಸಂಪಾದಕ ಡಾ.ಎಚ್.ಎಸ್. ಗೋಪಾಲರಾವ್ ಅಭಿಪ್ರಾಯಪಟ್ಟರು.
ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಬುಧವಾರ ಆಯೋಜಿಸಿದ್ದ ಎಪಿಗ್ರಾಫಿಯ ಕರ್ನಾಟಿಕ ಸಂಪುಟ 25ರ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಾಸನ ತಜ್ಞರ ಸಂಖ್ಯೆ ಎಲ್ಲಾ ಕಾಲದಲ್ಲಿಯೂ ಕಡಿಮೆಯೆ ಇದೆ. ಆದರೆ ಶಾಸನ ಪ್ರೀತಿಯ ಜನ ಸಿಗುತ್ತಿರುತ್ತಾರೆ. ಶಾಸನ ಸಂಶೋಧನೆ ನಿರಂತರವಾಗಿ ನಡೆಯುತ್ತಿದೆ. ನಮ್ಮ ಕರ್ನಾಟಿಕ ಸಂಪುಟ 25ರಲ್ಲಿ ಹೊಸದಾಗಿ 60 ಶಾಸನಗಳು ಸೇರಿವೆ. ಒಟ್ಟಾರೆ 669 ಶಾಸನಗಳ ಬಗ್ಗೆ ಮಾಹಿತಿ ಇದೆ. ತುಮಕೂರು ಭಾಗದಲ್ಲಿ ದೊರೆತ ಶಾಸನಗಳ ಅಧ್ಯಯನ ಇದರಲ್ಲಿದೆ. ದಿನ ಕಳೆದಂತೆ ಶಾಸನಗಳು ಪತ್ತೆ ಆಗುತ್ತಲಿದೆ. ಆದ್ದರಿಂದ ಕಾಲಾನುಕಾಲಕ್ಕೆ ತಕ್ಕಂತೆ ಈ ಸಂಪುಟದ ಪರಿಷ್ಕರಣೆ ಅಗತ್ಯ ಎಂದರು.
ಶಾಸನ ತಜ್ಞ ಪ್ರೊಆರ್. ಶೇಷಶಾಸ್ತ್ರಿ ಮಾತನಾಡಿ, ಶಾಸನ ಶಾಸ್ತ್ರ ಅಧ್ಯಯನ ಕರ್ನಾಟಕದಲ್ಲಿ ನಡೆದಿರುವಂತೆ ಬೇರೆಲ್ಲಿಯೂ ನಡೆದಿಲ್ಲ ಎಂಬುದು ಹೆಮ್ಮೆಯ ಸಂಗತಿ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಮಾಜಿ ಸಚಿವ ಶಂಕರೇಗೌಡ ಮತ್ತು ವಿಶ್ರಾಂತ ಕುಲಪತಿ ಪ್ರೊ.ದೇಜಗೌ ಅವರ ಪರಿಶ್ರಮದಿಂದ ಎಪಿಗ್ರಾಫಿಯ ಅಧ್ಯಯನ ನಡೆಯುತ್ತಿದೆ. ಈ ಕಾರ್ಯವನ್ನು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮುಂದುವರೆಸಿಕೊಂಡು ಬಂದಿರುವುದು ಶ್ಲಾಘನೀಯ ಎಂದು ಹೇಳಿದರು.
ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮಾತನಾಡಿ, ಶಾಸನ ಅಧ್ಯಯನ ಮತ್ತು ಸಂಪುಟ ಸಂಪಾದನೆಗೆ ಅಗತ್ಯವಿರುವ ಎಲ್ಲಾ ನೆರವನ್ನು ವಿವಿ ನೀಡಲಿದೆ. ಶಾಸನ ಸಂಪುಟಗಳು ದೇಶದ ಆಸ್ತಿ, ಮುಂದಿನ ಪೀಳಿಗೆಗೆ ಇದು ಸಹಾಯವಾಗಲಿದೆ. ಆದ್ದರಿಂದ ಇಂತಹ ಕಾರ್ಯಕ್ಕೆ ನಮ್ಮ ಸಹಕಾರ ಇದೆ ಎಂದರು.
ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎನ್.ಎಂ. ತಳವಾರ್ ಮಾತನಾಡಿ, ಶಾಸನ ತಜ್ಞರ ಸಂಖ್ಯೆ ಕಡಿಮೆ ಇರುವ ಈ ಸಂದರ್ಭದಲ್ಲಿ ಬಹಳ ಪರಿಶ್ರಮದಿಂದ ಈ ಸಂಪುಟ ಹೊರ ತಂದಿರುವ ಪ್ರೊ.ಆರ್. ಶೇಷಶಾಸ್ತ್ರಿ ಮತ್ತು ಡಾ.ಎಚ್.ಎಸ್. ಗೋಪಾಲರಾವ್ ಅವರಿಗೆ ಸಂಸ್ಥೆ ವತಿಯಿಂದ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಅಲ್ಲದೆ ಅಧ್ಯಯನ ಸಂಸ್ಥೆಯಲ್ಲಿನ 62 ಮಂದಿ ಸಂಶೋಧನಾ ವಿದ್ಯಾರ್ಥಿಗಳ ಕಾಯಂಗೆ ಕುಲಪತಿಗಳು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು. ಸಂಪಾದಕ ಮಂಡಳಿಯ ಮಂಜುನಾಥ್ ಇದ್ದರು.