ಬಿರುಸಿನ ಮತದಾನ
ಕ.ಪ್ರ.ವಾರ್ತೆ ಮೈಸೂರು ಏ. 17
ಸುಶಿಕ್ಷಿತರು ಹೆಚ್ಚಾಗಿ ವಾಸಿಸುವ ಚಾಮರಾಜ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗಾಗಿ ಬೆಳಗ್ಗೆಯಿಂದಲೇ ಬಿರುಸಿನ ಮತದಾನ ಪ್ರಕ್ರಿಯೆ ಕಂಡುಬಂತು.
ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನದಲ್ಲಿ ನಾಗರಿಕರು ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಮತಕೇಂದ್ರಗಳ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. 9 ಗಂಟೆ ವೇಳೆಗೆ ಸುಮಾರು ಶೇ.8, 10 ರ ವೇಳೆಗೆ ಶೇ.11, 12 ವೇಳೆಗೆ ಶೇ.20, ಮಧ್ಯಾಹ್ನ 2 ಸುಮಾರಿಗೆ ಶೇ.30 ರಷ್ಟು ಮತ ಚಲಾಯಿಸಿದ್ದರು. ಬೇಸಿಗೆಯ ಬಿಸಿಲು ಮಧ್ಯಾಹ್ನದ ವೇಳೆಗೆ ಹೆಚ್ಚಾಗಿದ್ದರಿಂದ ಮತಕೇಂದ್ರಗಳಿಗೆ ಆ ಸಮಯದಲ್ಲಿ ಕಡಿಮೆ ಸಂಖ್ಯೆಯಲ್ಲಿ ಮತದಾರರು ಭಾಗವಹಿಸಿದರು. ನಂತರ ನಿಧಾನಕ್ಕೆ ಮತದಾನ ಮಾಡುವಲ್ಲಿ ಜನರು ಮತಗಟ್ಟೆಗೆ ಬರಲಾರಂಭಿಸಿದ ಕಾರಣ 5 ರ ವೇಳೆಗೆ ಶೇ.50 ಕ್ಕೂ ಹೆಚ್ಚಿನ ಮತದಾನ ನಡೆದಿತ್ತು.
ಬೇಸಿಗೆಯ ಕಾವು ಅಧಿಕವಾಗಿದ್ದರಿಂದ ಚುನಾವಣಾ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕಾಡದೆ ಬಿಡಲಿಲ್ಲ. ಕೆಲವು ಮತಗಟ್ಟೆಯಲ್ಲಿ ಫ್ಯಾನ್ ಇದ್ದರೂ ಸಹ ಅದನ್ನು ಮುಚ್ಚಲಾಗಿತ್ತು. ಪಕ್ಷೇತರ ಅಭ್ಯರ್ಥಿ ಬನ್ನೂರು ಕುಮಾರ್ ಅವರ ಚಿಹ್ನೆ ಫ್ಯಾನ್ ಆಗಿದ್ದರಿಂದ ಅದನ್ನು ಬಳಸದೆ ಸೆಕೆ ತಲ್ಲಣ ಸಹಿಸಿಕೊಳ್ಳಬೇಕಾಯಿತು.
ನಿರಾಳ ಮತ: ಚಾಮರಾಜ ಕ್ಷೇತ್ರದ 213 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಪುರುಷರು 1,08,617 ಮಂದಿ ಮಹಿಳೆಯರು 1,06,686 ಮಂದಿ ಹಾಗೂ ಇತರರು 27 ಮಂದಿ ಸೇರಿದಂತೆ ಒಟ್ಟು 2,15,330 ಮಂದಿ ಮತದಾರರಿದ್ದಾರೆ. ಹಿಂದಿನಂತೆ ಈ ಬಾರಿ ಮತಪಟ್ಟಿಯಲ್ಲಿ ಅಷ್ಟಾಗಿ ದೋಷ ಹಾಗೂ ಗೊಂದಲ ಇಲ್ಲದ ಕಾರಣ ಮತದಾರರು ನಿರಾಳರಾಗಿ ಮತ ಚಲಾಯಿಸಿದರು.
ಮೈಸೂರು ಲೋಕಸಭಾ ಚುನಾವಣೆಯಲ್ಲಿ 15 ಮಂದಿ ಸ್ಪರ್ಧಿಸಿದ್ದರೂ, ಮತಕೇಂದ್ರಗಳ ಒಳಗೆ ಏಜೆಂಟರಾಗಿ ಕೇವಲ 3-4 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದರು. ಪ್ರಮುಖ ಪಕ್ಷಗಳನ್ನು ಹೊರತುಪಡಿಸಿದರೆ, ಮತಗಟ್ಟೆಯ ಹೊರಗೂ ಇತರೆ ಅಭ್ಯರ್ಥಿಗಳಾಗಲಿ ಇಲ್ಲವೇ ಅವರ ಪರ ಕಾರ್ಯಕರ್ತರಾಗಲಿ ಕಾಣಿಸದಿರುವುದು ಅಚ್ಚರಿಯ ಸಂಗತಿ.
ವಿವಿಧ ಪಕ್ಷಗಳ ನಗರ ಪಾಲಿಕೆ ಸದಸ್ಯರು, ಶಾಸಕರು ಹಾಗೂ ಮುಖಂಡರು ಮತಕೇಂದ್ರಗಳಿಗೆ ಭೇಟಿ ನೀಡಿ ವಿಚಾರಿಸುವುದು ಕಂಡುಬಂತು. ಮತಕೇಂದ್ರಗಳಿಗೆ ನಿಯೋಜಿತ ಚುನಾವಣಾ ಅಧಿಕಾರಿಗಳು ದಿಢೀರನೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸುತ್ತಿದ್ದರು. ಸೂಕ್ತ ಬಂದೋಬಸ್ತ್ ವಹಿಸಲಾಗಿತ್ತು.