ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹುಣಸೂರಿನಲ್ಲಿ ಶೇ.75.82

Srinivasa Murthy VN
Updated On : 18 Apr 2014, 12:29 pm

ಕ.ಪ್ರ.ವಾರ್ತೆ ಹುಣಸೂರು ಏ. 17
ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತವಾಗಿ ಶೇ.75.82 ರಷ್ಟು ಮತದಾನವಾಗಿದೆ.
ತಾಲೂಕಿನಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು  ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಮತಗಟ್ಟೆ ಕೆಂದ್ರದ ಬಳಿ ನಿಂತು ಮತದಾರರಿಗೆ ಮನವಿ ಮಾಡಿ, ಮತಗಿಟ್ಟಿಸುವ ಯತ್ನ ನಡೆಸಿದರು.
ತಾಲೂಕಿನ ಗಾವಡಗೆರೆ ಹೋಬಳಿಗೆ ಸೇರಿದ ಸಣ್ಣೇನಹಳ್ಳಿ ಗ್ರಾಮವನ್ನು ಪ್ರತ್ಯೇಕ ಗ್ರಾಪಂ ಕ್ಷೇತ್ರ ಮಾಡುವಂತೆ ಒತ್ತಾಯಿಸಿ, ಕೆಲವು ಗಂಟೆಗಳ ಕಾಲ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದರು. ಸಣ್ಣೇನಹಳ್ಳಿ ಗ್ರಾಮ ಮತ್ತು ತಿಪ್ಪಲಾಪುರ ಗ್ರಾಮ ಎರಡು ಸೇರಿ ಒಂದು ಗ್ರಾಪಂ ಕ್ಷೇತ್ರ ಮಾಡಿದ್ದು, ಕಳೆದ 15 ವರ್ಷದಿಂದ ಸತತವಾಗಿ ಪ್ರತ್ಯೇಕ ಗ್ರಾಪಂ ಕ್ಷೇತ್ರ ಮಾಡುವ ಮೂಲಕ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಹೋರಾಟ ನಡೆಸುತ್ತಿದ್ದೇವೆ. ಆದರೆ ಕ್ಷೇತ್ರವೂ ಆಗಿಲ್ಲ, ಅಭಿವೃದ್ಧಿಯೂ ಆಗಿಲ್ಲ. ಈ ಬಗ್ಗೆ ಯಾವುದೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಪ್ರತಿಭಟಿಸಿ, ಮತದಾನ ಬಹಿಷ್ಕಾರ ಮಾಡಿದರು.
ಸ್ಥಳಕ್ಕೆ ತಾಪಂ ಇಒ ಮತ್ತು ಚುನಾವಣಾ ಸಹಾಯಕ ಅಧಿಕಾರಿ ಡಾ.ಪ್ರೇಮಕುಮಾರ್ ಭೇಟಿ ನೀಡಿ, ಗ್ರಾಮಸ್ಥರ ಜೊತೆ ಸಮಾಲೋಚಿಸಿ ಶೀಘ್ರವೇ ಸರ್ಕಾರಕ್ಕೆ ವರದಿ ನೀಡಿ ಪುನರ್ ವಿಂಗಡನೆ ಮಾಡಿಸುವುದಾಗಿ ಭರವಸೆ ನೀಡಿದ ಮೇರೆಗೆ ಮತದಾರರು ಬೆಳಗ್ಗೆ 10.30ಕ್ಕೆ ಮತದಾನ ಆರಂಭವಾಯಿತು. ಶಾಸಕ ಎಚ್.ಪಿ. ಮಂಜುನಾಥ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಬೇಡಿಕೆಯನ್ನು ಖಂಡಿತವಾಗಿ ಈಡೇರಿಸುವುದಾಗಿ ಭರವಸೆ ನೀಡಿದರು.
ಪಟ್ಟಣದ ಹೊರ ವಲಯದಲ್ಲಿರುವ ಚಿಕ್ಕಹುಣಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಪಲಾವ್ ಮಾಡಿಸಿ, ಮತದಾರರಿಗೆ ನೀಡಿದರು. ಹರವೆ ಕಲ್ಲಹಳ್ಳಿ ಮಾರ್ಗವಾಗಿ ಚಲಿಸುತ್ತಿದ್ದ ಸಾರಿಗೆ ಸಂಸ್ಥೆಯ ಚಾಲಕ ಚಂದ್ರಶೇಖರ್ ಅವರು ಹಿರಿಕ್ಯಾತನಹಳ್ಳಿ ಮತ ಕೇಂದ್ರದಲ್ಲಿ ಮತ ಚಲಾಯಿಸಿದರೆ, ಮತ್ತೊಂದು ಇದೇ ಗ್ರಾಮದ ತಮ್ಮಣ್ಣೇಗೌಡರ ಪುತ್ರ ರವಿ ಎಂಬವರ ಮದುವೆ ಬೆಟ್ಟದಪುರದಲ್ಲಿ ನಡೆಯಿತು. ಮದುವೆ ಮುಗಿಸಿ ಗ್ರಾಮಕ್ಕೆ ತೆರಳಿ ಮನೆಗೆ ಹೋಗುವ ಮುನ್ನ ಇಡೀ ಕುಟುಂಬವೇ ಒಟ್ಟಾಗಿ ಆಗಮಿಸಿ ಮತದಾನ ಮಾಡಿತು. ವೃದ್ಧರು, ಅಂಗವಿಕಲರು ಕುಟುಂಬಸ್ಥರ ಸಹಾಯ ಪಡೆದು ಮತಗಟ್ಟೆಗೆ ತೆರಳಿ ಮತದಾನ ಮಾಡಿರುವುದು ವಿಶೇಷವಾಗಿತ್ತು.
ತಡವಾದ ಮತದಾನ: ತಾಲೂಕಿನ ದೊಡ್ಡಬೀಚನಹಳ್ಳಿ ಗ್ರಾಮದಲ್ಲಿ ಮತಯಂತ್ರ ಚಲಾವಣೆ ಮಾಡುವ ಬಗ್ಗೆ ಮತಗಟ್ಟೆ ಅಧಿಕಾರಿಗೆ ತಿಳಿಯದೆ ಕೆಲವು ಗಂಟೆ ಕಾಲ ಗೊಂದಲವಾದರೆ, ಮತಗಟ್ಟೆ ಕೇಂದ್ರ ಸಂಖ್ಯೆ 172 ಉದ್ದೂರು, 257 ಬಸವನಹಳ್ಳಿ, 83 ಸೋಮನಹಳ್ಳಿ, 108ರ ಕರೀಗೌಡರ ಬೀದಿ, 196 ಹೆಗ್ಗಂದೂರು ಮತಗಟ್ಟೆ ಕೇಂದ್ರಗಳಲ್ಲಿ ಮತಯಂತ್ರ ಕೈಕೊಟ್ಟು, ಅಧಿಕಾರಿಗಳಿಗೆ ಗೊಂದಲಕ್ಕಿಡಾಗಿತ್ತು. ಇದರಿಂದ ಮತದಾನ ತಡವಾಯಿತು.
ತಾಲೂಕಿನಲ್ಲಿ ಮಾದರಿ ಮತ ಕೇಂದ್ರವನ್ನು ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾಗ ಸಂಖ್ಯೆ 112 ಮತ್ತು 113ರಲ್ಲಿ ಮಾಡಲಾಗಿತ್ತು. ಈ ಕೇಂದ್ರವನ್ನು ಮಾವಿನ ತೋರಣಗಳಿಂದ ಶೃಂಗರಿಸಲಾಗಿತ್ತು. ಸಹಾಯಕ ಚುನಾವಣಾಧಿಕಾರಿ ಹಾಗೂ ಎ.ಸಿ. ಜಗದೀಶ್, ಕೇಂದ್ರ ಚುನಾವಣೆ ವೀಕ್ಷಕರಾದ ಜೀತೇಂದ್ರ ಯಾದವ್, ಭುವನೇಶ್ವರಿ ಯಾದವ್ ಮತಕೇಂದ್ರಕ್ಕೆ ಭೇಟಿ ನೀಡಿ ಮಾದರಿ ಮತ ಕೇಂದ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಹುಣಸೂರಿನ ಶಾಸಕ ಎಚ್.ಪಿ. ಮಂಜುನಾಥ್, ಪತ್ನಿ ಸುಪ್ರಿಯಾ, ಪುತ್ರ ಹಾಗೂ ತಂದೆ ಪ್ರೇಮಕುಮಾರ್, ತಾಯಿ ರತ್ನಮ್ಮ ಮತ್ತು ಸಹೋದರ ಡಾ.ಶ್ರೀನಾಥ್, ಪತ್ನಿ ಹಾಗೂ ಮತ್ತೊಬ್ಬ ಸಹೋದರ ಉದ್ಯಮಿ ಅಮರನಾಥ್, ಪತ್ನಿ ಜಿಪಂ ಸದಸ್ಯೆ ಡಾ.ಪುಷ್ಪಾ ಅಮರನಾಥ್ ಅವರು ಸದಾಶಿವನಕೊಪ್ಪಲು ಬಡಾವಣೆಯ ಶಾಲೆಯಲ್ಲಿ ಮತದಾನ ಮಾಡಿದರು. ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕ ಜಿ.ಡಿ. ಹರೀಶ್‌ಗೌಡ ಪಟ್ಟಣದ ಕರೀಗೌಡರ ಶಾಲೆಯಲ್ಲಿ ಮತದಾನ ಮಾಡಿದರು. ಶಾಸಕರಾದ ಜಿ.ಟಿ. ದೇವೇಗೌಡ, ಎಸ್. ಚಿಕ್ಕಮಾದು, ಸಿ.ಎಚ್. ವಿಜಯಶಂಕರ್ ಅವರ ಮತದಾನ ಈ ಬಾರಿ ಮೈಸೂರಿಗೆ ವರ್ಗಾವಣೆಯಾಗಿದೆ.
ಪ್ರತಿಭಟನೆ: ತಾಲೂಕಿನ ಹನಗೋಡಿನಲ್ಲಿ ಸಂಜೆ 4ರ ವೇಳೆ ಬಿಜೆಪಿ ಕಾರ್ಯಕರ್ತರು ಮತದಾನ ಮಾಡಲು ಹೋದಾಗ ಮತ ಯಂತ್ರದ ಚಿಹ್ನೆಗಳ ಪೈಕಿ ಬಿಜೆಪಿ ಚಿಹ್ನೆ ಕಾಣದಂತೆ ಯಾರೊ ದುಷ್ಕರ್ಮಿಗಳು ಸ್ಟಿಕ್ಕರ್ ಅಂಟಿಸಿರುವುದು ಬೆಳಕಿಗೆ ಬಂದಿತ್ತು. ತಕ್ಷಣ ಗಮನಿಸಿ ಬೀದಿಗಿಳಿದು ಪ್ರತಿಭಟಿಸಿ, ಒಂದು ಗಂಟೆಗೂ ಹೆಚ್ಚು ಕಾಲ ಮತದಾನ ಸ್ಥಗಿತಗೊಳಿಸಿದರು.
ತಹಸೀಲ್ದಾರ್ ವೆಂಕಟಚಾಲಪ್ಪ, ಎಸಿ ಜಗದೀಶ್ ಅವರು ಧರಣಿ ನಿರತರನ್ನು ಸಮಾಧಾನಪಡಿಸಿ, ಈ ಬಗ್ಗೆ ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕಾನೂನು ರೀತ್ಯ ಕ್ರಮ ಕೈಕೊಳ್ಳುತ್ತೇನೆ, ದಯಮಾಡಿ ಈಗ ಮತದಾನ ಮಾಡಲು ಅವಕಾಶ ನೀಡಿ ಎಂಬ ಮನವಿಗೆ ಸ್ಪಂದಿಸಿದ ಕಾರ್ಯಕರ್ತರು, ತನಿಖೆ ಮಾಡಿ ನ್ಯಾಯ ದೊರಕಿಸಿ ಕೊಡಿ ಎಂದು ಒಪ್ಪಿಕೊಂಡು ಮತದಾನ ನಡೆಯಲು ಅವಕಾಶ ಮಾಡಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement