ಗೆಲವಿಗಿಂತ ಮತ ಲೆಕ್ಕ ಜೋರು!
ಕುಪ್ಪೆ ಮಹದೇವಸ್ವಾಮಿ
ಕ.ಪ್ರ.ವಾರ್ತೆ ಕೆ.ಆರ್. ನಗರ ಏ. 18
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ಈಗ ಸೋಲು-ಗೆಲವಿನ ಲೆಕ್ಕಾಚಾರ ಆರಂಭವಾಗಿದ್ದು, ತಾಲೂಕಿನಲ್ಲಿ ಯಾವ ಪಕ್ಷದವರು ಹೆಚ್ಚು ಮತ ಪಡೆಯುತ್ತಾರೆ ಮತ್ತು ಯಾರು ಜಯಶೀಲರಾಗುತ್ತಾರೆ ಎಂಬ ವಿಷಯ ಚರ್ಚೆಯಾಗುತ್ತಿದೆ.
2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್ ಅಭ್ಯರ್ಥಿ ಅಂಬರೀಶ್ 6 ಸಾವಿರಕ್ಕೂ ಅಧಿಕ ಮತಗಳನ್ನು ಹೆಚ್ಚಾಗಿ ಪಡೆದಿದ್ದರು. ನಂತರ 2013ರಲ್ಲಿ ನಡೆದ ಉಪಚುನಾವಣೆಯಲ್ಲಿಯೂ ಸಂಸದೆ ರಮ್ಯಾ 337 ಮತಗಳನ್ನು ಜೆಡಿಎಸ್ ಪಕ್ಷಕ್ಕಿಂತ ಹೆಚ್ಚು ಪಡೆದು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬಲ ತುಂಬಿದ್ದರು.
2008 ಮತ್ತು 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಸಾ.ರಾ. ಮಹೇಶ್ ಅವರೇ ಅತ್ಯಧಿಕ ಬಹುಮತಗಳಿಂದ ಜಯಭೇರಿ ಬಾರಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್ ಹೆಚ್ಚು ಮತಗಳನ್ನು ಪಡೆಯುತ್ತಿರುವುದು ಮತದಾರರ ಬುದ್ಧಿವಂತಿಕೆಯನ್ನು ತೋರಿಸುತ್ತಿದ್ದು, ಈ ಬಾರಿ ತಾಲೂಕಿನ ಮತದಾರರು ಯಾರಿಗೆ ಹೆಚ್ಚು ಒಲಿಯುತ್ತಾರೆ ಎಂಬುದೇ ಚರ್ಚಾ ವಿಷಯವಾಗಿದೆ.
2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಲ್.ಆರ್. ಶಿವರಾಮೇಗೌಡ 17,500 ಮತ ಪಡೆದಿದ್ದರು. ನಂತರ ನಡೆದ ಉಪಚುನಾವಣೆಯಲ್ಲಿ ಪಕ್ಷ ತನ್ನ ಅಭ್ಯರ್ಥಿ ಕಣಕ್ಕೆ ನಿಲ್ಲಿಸದೆ ಜೆಡಿಎಸ್ಗೆ ಬೆಂಬಲ ನೀಡಿತ್ತು. ಆದರೆ ಈ ಬಾರಿ ಪಕ್ಷ ಪ್ರಬಲ ಪೈಪೋಟಿ ನೀಡಿದ್ದು, ನಮಗೆ 25 ಸಾವಿರ ಮತಗಳು ಬರಲಿವೆ ಎಂಬುದು ಆ ಪಕ್ಷದ ಮುಖಂಡರ ಅಭಿಪ್ರಾಯ.
ಕಾಂಗ್ರೆಸ್ ಜನಪ್ರಿಯತೆ ವರದಾನವೇ?: ಉಳಿದಂತೆ ಕಾಂಗ್ರೆಸ್ ಪಕ್ಷದಲ್ಲೂ ಈ ಬಾರಿ ಹೆಚ್ಚು ಮತ ಪಡೆಯುವ ಹುಮ್ಮಸ್ಸಿದ್ದು, ಕನಿಷ್ಠ 5 ಸಾವಿರಕ್ಕಿಂತ ಹೆಚ್ಚು ಮತಗಳು ತಾಲೂಕಿನಲ್ಲಿ ಬರಲಿವೆ ಎಂಬುದು ಆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭರವಸೆ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಜನಪರ ಕಾರ್ಯಕ್ರಮಗಳು ಹಾಗೂ ಅಲ್ಪ ಅವಧಿಯ ಸಂಸದೆ ರಮ್ಯಾ ಅವರು ಗಳಿಸಿರುವ ಜನಪ್ರಿಯತೆ ಪಕ್ಷಕ್ಕೆ ವರದಾನವಾಗಲಿವೆ ಎಂದು ಹೇಳುತ್ತಿದ್ದಾರೆ. ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಈ ಬಾರಿ ನಮ್ಮ ಪಕ್ಷ ತಾಲೂಕಿನಲ್ಲಿ ಇತರೆ ಪಕ್ಷಗಳನ್ನು ಹಿಂದಿಕ್ಕಿ ಅತಿ ಹೆಚ್ಚು ಮತ ಪಡೆಯುವುದರೊಂದಿಗೆ ಸಿ.ಎಸ್. ಪುಟ್ಟರಾಜು ಗೆಲವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂಬ ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದು, ಇವರ ಎಲ್ಲ ಭರವಸೆಗಳು, ನಿರೀಕ್ಷೆಗಳು ನಿಜವಾಗಬೇಕಾದರೆ ಮೇ 16ರ ಫಲಿತಾಂಶದವರೆಗೆ ಕಾಯುವುದು ಅನಿವಾರ್ಯ.
ಜೆಡಿಎಸ್ ಈ ಬಾರಿ ತಾಲೂಕಿನಲ್ಲಿ 10 ಸಾವಿರಕ್ಕಿಂತ ಹೆಚ್ಚು ಬಹುಮತಗಳನ್ನು ಪಡೆಯಲಿದ್ದು, ಶಾಸಕ ಸಾ.ರಾ. ಮಹೇಶ್ ಅವರ ಅಭಿವೃದ್ಧಿ ಕಾರ್ಯಗಳು ಮತ್ತು ಮುಖಂಡರು, ಕಾರ್ಯಕರ್ತರ ಸಂಘಟಿತ ಹೋರಾಟದ ಫಲವಾಗಿ ಉತ್ತಮ ಫಲಿತಾಂಶ ಬರಲಿದ್ದು, ನಮ್ಮ ಪಕ್ಷದ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು ಅವರ ಗೆಲವು ನಿಶ್ಚಿತ.
ಸಿ.ಜೆ. ದ್ವಾರಕೀಶ್, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ.
ಕಾಂಗ್ರೆಸ್ ಸರ್ಕಾರದ ಉತ್ತಮ ಕೆಲಸಗಳು ಮತ್ತು ಸಿಕ್ಕ ಅಲ್ಪ ಅವಧಿಯಲ್ಲಿ ಸಂಸದೆ ರಮ್ಯಾ ಅವರು ಕ್ಷೇತ್ರದ ಜನರ ಮನ ಗೆದ್ದಿದ್ದು, ಇದರ ಜತೆಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿರುವುದರಿಂದ ನಮಗೆ 5 ಸಾವಿರಕ್ಕಿಂತ ಅಧಿಕ ಬಹುಮತ ಬರಲಿವೆಯಲ್ಲದೆ ರಮ್ಯಾ ಪುನರಾಯ್ಕೆಯಾಗುವರು.
ಡಿ. ರವಿಶಂಕರ್, ಜಿಪಂ ಮಾಜಿ ಸದಸ್ಯ.
ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಗೆ 25 ಸಾವಿರಕ್ಕಿಂತಲೂ ಅಧಿಕ ಮತಗಳು ಬರಲಿದ್ದು, ನಮ್ಮ ಪಕ್ಷದ ಅಭ್ಯರ್ಥಿ ಬಿ.ಶಿವಲಿಂಗಯ್ಯ ತೀವ್ರ ಪೈಪೋಟಿ ನೀಡಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಬರಲಿದ್ದು ಗೆಲವು ನಮ್ಮದೆ.
ಮಿರ್ಲೆ ಶ್ರೀನಿವಾಸಗೌಡ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ.