ಜನಾಂಗದ ನೆರವಿಗೆ ಸೇವಾ ಯೋಜನೆ ರೂಪಿಸಿ
ಕ.ಪ್ರ.ವಾರ್ತೆ ಮೈಸೂರು ಏ. 18
ಜನಾಂಗದ ಸೇವೆಗೆ ಅಗತ್ಯವಾದ ಸೇವಾ ಯೋಜನೆ ರೂಪಿಸುವುದು ಅವಶ್ಯಕ ಎಂದು ಸಮಾಜ ಸೇವಕಿ ಸರೋಜಮ್ಮ ತುಳಸಿದಾಸಪ್ಪ ಹೇಳಿದರು. ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯು ಆಯೋಜಿಸಿರುವ ಮೂರು ದಿನಗಳ ಸಮುದಾಯ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಒಕ್ಕಲಿಗ ಸಮುದಾಯವು ಬೃಹತ್ ಸಂಘಟನೆ ಹೊಂದಿರುವ ಜನಾಂಗ. ಅಂತೆಯೇ ಈ ಸಮುದಾಯಕ್ಕೆ ಪ್ರಸ್ತುತ ಏನು ಬೇಕು ಎಂಬುದರ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ವಿವಾಹ ವೇದಿಕೆ ಸ್ಥಾಪಿಸುವ ಮೂಲಕ ವಿವಾಹ ವಿಚ್ಚೇದನ ತಡೆಗೆ ಸಮಾಲೋಚನೆ ನಡೆಸಬೇಕು. ವೃದ್ಧಾಶ್ರಮ ಸ್ಥಾಪಿಸುವ ಮೂಲಕ ಹಿರಿಯರ ಸೇವೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಸಮುದಾಯದ ಅಭಿವೃದ್ಧಿಯಲ್ಲಿ ಕೆ.ಎಚ್. ರಾಮಯ್ಯ ಅಪಾರವಾಗಿ ಶ್ರಮ ವಹಿಸಿದ್ದಾರೆ. ಆದಿಚುಂಚಗಿರಿಯಲ್ಲಿದ್ದ ಮಠವನ್ನು ಸಮಗ್ರವಾಗಿ ಪ್ರಗತಿಗೆ ಕಾರಣವಾದವರು ಹಾಗೂ ಆ ಪೀಠಕ್ಕೆ ಭಕ್ತಿನಾಥ ಸ್ವಾಮೀಜಿ ಅವರನ್ನು ನೇಮಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅವರ ನಂತರ ಬಂದ ಬಾಲಗಂಗಾಧರನಾಥ ಸ್ವಾಮೀಜಿ ಅವರು ಸಹ ರಾಮಯ್ಯ ಅವರ ಆಶಯದಂತೆ ಸೇವೆ ಕಲ್ಪಿಸಿದವರು. ಇಂದಿನ ಕಿರಿಯ ಶ್ರೀಗಳು ಸಹ ಅದೇ ದಿಕ್ಕಿನಲ್ಲಿ ಮುನ್ನಡೆಯುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಒಗ್ಗಟ್ಟಿನ ಕೊರತೆ: ಮುಖ್ಯ ಅತಿಥಿಯಾಗಿ ಮಾತನಾಡಿದ ಹೊಟೇಲ್ ಉದ್ಯಮಿ ಟಿ.ಆರ್. ಚಂದ್ರಶೇಖರ್, ಒಕ್ಕಲಿಗ ಸಮುದಾಯದಲ್ಲಿ ಒಗ್ಗಟಿನ ಕೊರತೆ ಇದ್ದು, ಇಂತಹ ಬೃಹತ್ ಸಮುದಾಯದಲ್ಲಿ ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಮುಂತಾದ ಹುದ್ದೆಗಳನ್ನು ಅಲಂಕರಿಸಿದ್ದರೂ, ಆಡಳಿತಾತ್ಮಕವಾಗಿ ರಾಜ್ಯದ ಮುಖ್ಯ ಕಾರ್ಯದರ್ಶಿ ಹುದ್ದೆ ಹೊಂದಿಲ್ಲದಿರುವುದು ನೋವಿನ ಸಂಗತಿ. ಈ ದಿಕ್ಕಿನಲ್ಲಿ ಜನಾಂಗವು ಸಾಮರ್ಥ್ಯಾಭಿವೃದ್ಧಿಗೆ ಮುಂದಾಗಬೇಕು ಎಂದರು.
ಆಶಯ ಭಾಷಣ ಮಾಡಿದ ಆರೋಗ್ಯ ಯೋಗ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ, ಮನುಷ್ಯರ ನಡುವೆ ಇಂದು ಪ್ರೀತಿ, ಸಾಮರಸ್ಯ ಹಾಗೂ ಸಹಕಾರ ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಯುವ ಪೀಳಿಗೆಗೆ ಉತ್ತಮ ನಾಯಕತ್ವ ರೂಪಿಸುವಲ್ಲಿ ಇಂತಹ ಶಿಬಿರ ಸಹಕಾರಿಯಾಗಿದೆ ಎಂದರು. ಕಾಂಗ್ರೆಸ್ ಮುಖಂಡ ಡಾ.ಬಿ.ಜೆ. ವಿಜಯಕುಮಾರ್, ವಿಎಲ್ಸಿಸಿ ಮುಖ್ಯಸ್ಥೆ ನಂದಿನಿಮೂರ್ತಿ ಮುಖ್ಯ ಅತಿಥಿಗಳಾಗಿದ್ದರು. ಸಂಘದ ಅಧ್ಯಕ್ಷೆ ಎಚ್.ಎಲ್.ಯಮುನಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಲಕ್ಷ್ಮೇಗೌಡ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪನಿರ್ದೇಶಕ ಟಿ.ಎನ್. ದಾಸೇಗೌಡ ನಿರೂಪಿಸಿದರು.
ನಂತರ ನಡೆದ ಕೃಷಿ ಗೋಷ್ಠಿಯಲ್ಲಿ ಡಾ.ಬಿ.ಜೆ ವಿಜಯಕುಮಾರ್ ಉಪನ್ಯಾಸ ನಡೆಸಿಕೊಟ್ಟರು. ಕೃಷಿ ವಿಜ್ಞಾನಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ವಸಂತಕುಮಾರ್ ತಿಮಾಕಪುರ ಮುಖ್ಯ ಅತಿಥಿಯಾಗಿ ಮಾತನಾಡಿದರು.