ತೋಟಗಾರಿಕೆ ಆರೋಗ್ಯಕರ ಹವ್ಯಾಸ
ಕ.ಪ್ರ.ವಾರ್ತೆ ಮೈಸೂರು ಏ. 18
ತೋಟಗಾರಿಕೆ ಚಟುವಟಿಕೆಗಳು ಆರೋಗ್ಯಕರ ಹವ್ಯಾಸ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಂ.ಎಸ್. ರಾಜು ಹೇಳಿದರು.
ಕೌಟಿಲ್ಯ ವಿದ್ಯಾಲಯದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ತಾರಸಿ ತೋಟ ಹಾಗೂ ತೋಟಗಳ ಅಭಿವೃದ್ಧಿಗೆ ಉತ್ತೇಜನ ನೀಡುವ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನೆಯಲ್ಲಿ ತೋಟಗಾರಿಕೆ ಆರಂಭಿಸುವುದು ಉತ್ತಮ ಹವ್ಯಾಸ. ಅದರ ಚಟುವಟಿಕೆಗಳಿಗಾಗಿ ಸಮಯ ಕಳೆಯುವುದರಿಂದ ಸಸ್ಯಗಳ ಸಂರಕ್ಷಣೆಯ ಜತೆಗೆ ನಾವು ಒತ್ತಡಗಳಿಂದ ಮುಕ್ತರಾಗಿ ಆರೋಗ್ಯ ಹೊಂದಬಹುದಾಗಿದೆ ಎಂದು ಹೇಳಿ ಪ್ರಾತ್ಯಕ್ಷಿಕೆಯ ಮೂಲಕ ಕೈತೋಟ ಹಾಗೂ ತಾರಸಿ ತೋಟಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಸಾರ್ವಜನಿಕರ ಜವಾಬ್ದಾರಿ ತಿಳಿಸಿಕೊಟ್ಟರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ತೋಟಗಾರಿಕೆ ಸಂಘದ ಉಪಾಧ್ಯಕ್ಷ ಡಾ.ಡಿ. ಪ್ರಭಾಮಂಡಲ್, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನಗರ ಮತ್ತು ಪಟ್ಟಣ ಪ್ರದೇಶದ ನಾಗರಿಕರಿಗೆ ಸಮತೋಲನ ಆಹಾರ ಒದಗಿಸುವಲ್ಲಿ ಹಣ್ಣು ಮತ್ತು ತರಕಾರಿಗಳ ಪಾತ್ರ, ಹಾಗೂ ಸ್ವತಃ ತರಕಾರಿ ಬೆಳೆಗಳನ್ನು ಬೆಳೆಯಲು ಸಾರ್ವಜನಿಕರಿಗೆ ಪ್ರಾಯೋಗಿಕವಾಗಿ ಅರಿವು ಮೂಡಿಸಲು ಹಮ್ಮಿಕೊಳ್ಳಲಾಗಿದೆ ಎಂದರು.
ವಿದ್ಯಾಲಯದ ಪ್ರಾಂಶುಪಾಲೆ ಹಾಗೂ ಕಾರ್ಯದರ್ಶಿ ಡಾ.ಎಲ್.ಸವಿತಾ ಮಾತನಾಡಿ, ಪ್ರಸ್ತುತ ಒತ್ತಡದಾಯಕ ನಗರ ಜೀವನದಲ್ಲಿ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಉಲ್ಲಾಸ ಹೊಂದಲು ನಮ್ಮನ್ನು ನಾವು ತೊಡಗಿಸಿಕೊಳ್ಳಲು ಕೈತೋಟ ನಿರ್ವಹಣೆ, ತರಕಾರಿ ಹಾಗೂ ಇನ್ನಿತರ ಹಣ್ಣು ಹಂಪಲುಗಳನ್ನು ಸ್ವತಃ ಬೆಳೆಯಲು ತರಬೇತಿ ಹೊಂದಬೇಕಿರುವುದು ಅತ್ಯವಶ್ಯಕ ಎಂದು ದರು.
ಬಾನುಲಿ ಕೃಷಿ ಬೆಳೆಗಾರರ ಸಂಘದ ಚಂದ್ರಶೇಖರ್, ಎನ್ಐಇ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಪಾದರಾವ್, ಜಿಲ್ಲಾ ತೋಟಗಾರಿಕೆ ಸಂಘದ ಜಂಟಿ ಕಾರ್ಯದರ್ಶಿ ಎಚ್. ಹನುಮಯ್ಯ, ನಿವೇದಿತ ನಾಗೇಶ್ ಮುಖ್ಯ ಅತಿಥಿಗಳಾಗಿದ್ದರು. ಶಿಕ್ಷಕರಾದ ಶ್ರೀಧರ್ ಸ್ವಾಗತಿಸಿದರು. ತನುಜ ನಿರೂಪಿಸಿದರು.