ಜೋರು ಮಳೆ
ಮೈಸೂರು: ಮೈಸೂರಿನಲ್ಲಿ ಶನಿವಾರ ರಾತ್ರಿ ಜೋರು ಮಳೆ ಬಿದ್ದಿತು. ಭಾರಿ ಗುಡುಗು, ಮಿಂಚಿನೊಂದಿಗೆ ಮಳೆ ಆರಂಭವಾಯಿತಾದರೂ ಜೋರು ಗಾಳಿ ಬೀಸಿದ್ದರಿಂದ ಕೆಲವೇ ಕ್ಷಣಗಳಲ್ಲಿ ಮಳೆ ಕಡಿಮೆಯಾಯಿತು.
ಅಂಬೇಡ್ಕರ್ ದಿನ
ಮೈಸೂರು ವಿವಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಂಶೋಧನ ವಿದ್ಯಾರ್ಥಿ ವೇದಿಕೆ ವತಿಯಿಂದ ಏ. 21ರ ಬೆಳಗ್ಗೆ 10ಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಅವರ 123ನೇ ಜನ್ಮದಿನಾಚರಣೆ ಹಾಗೂ ಭೀಮಕಥಾ ಕೀರ್ತನ ಸಮಾರಂಭ ನಡೆಯಲಿದೆ. ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಮರಿಸ್ವಾಮಿ ಉದ್ಘಾಟಿಸುವರು. ಪ್ರೊ.ಎನ್.ಎಂ. ತಳವಾರ್ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 2.30ಕ್ಕೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನೂತನ ಸಭಾಂಗಣದಲ್ಲಿ ಜೈ ಬೀಮ್ ಕಾಮ್ರೇಡ್ ಚಿತ್ರ ಪ್ರದರ್ಶನ ಮತ್ತು ಮುಕ್ತ ಸಂವಾದ ನಡೆಯಲಿದೆ. ಪ್ರೊಬಾಲಸುಬ್ರಹ್ಮಣ್ಯಂ ಹಾಗೂ ಡಾ.ಬಿ.ಎನ್ ಯಶೋಧ ಭಾಗವಹಿಸುವರು.
ಆರಾಧನಾ
ಜಯಲಕ್ಷ್ಮೀಪುರಂನ ಹರಿಹರಾನಂದ ಭಾರತೀ ಸ್ವಾಮಿ ಸನ್ಯಾಸಾಶ್ರಮದ ವತಿಯಿಂದ ಏ.21ರಂದು ಹರಿಹರಾನಂದ ಭಾರತಿ ಸ್ವಾಮೀಜಿಗಳ 51ನೇ ವರ್ಷದ ಆರಾಧನಾ ಮಹೋತ್ಸವ ನಡೆಯಲಿದೆ. ಬೆಳಗ್ಗೆ 6ಕ್ಕೆ ಕಳಸ ಸ್ಥಾಪನೆ, ಏಕವಾರ ರುದ್ರಾಭಿಷೇಕ, ಹರಿಹರೇಶ್ವರ ಸ್ವಾಮಿಗೆ ಅಷ್ಟೋತ್ತರ ಬಿಲ್ವಾರ್ಚನೆ ನಡೆಯಲಿದೆ. ಬೆಳಗ್ಗೆ 8ಕ್ಕೆ ಸಾಮೂಹಿಕ ಭಗವದ್ಗೀತಾ ಪಾರಾಯಣ, ತತ್ವ ಚಿಂತನೆ ನಡೆಯಲಿದೆ.
ಉಪನ್ಯಾಸ
ವಿದ್ಯಾರಣ್ಯಪುರಂನ ಡಿವಿಜಿ ಬಳಗದ ವತಿಯಿಂದ ಏ.21 ರಿಂದ 25ರವರೆಗೆ ಸಂಜೆ 6.30ಕ್ಕೆ ಜೆಎಲ್ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ನಗುನಗುತ ಬಾಲ್, ತೆರಳು-ಮಂಕತಿಮ್ಮ ಡಿಜಿಯವರ ಮಂಕುತಿಮ್ಮನ ಕಗ್ಗದ ಬಗ್ಗೆ ವಿದ್ವಾನ್ ಜಿ.ಎಸ್. ನಟೇಶ್ ಅವರು ಉಪನ್ಯಾಸ ನೀಡುವರು.
ಮಹಿಳೆ ಆತ್ಮಹತ್ಯೆ
ದಪ್ಪಗೆ ಇದ್ದಿದ್ದರಿಂದ ಮನನೊಂದ ಮಹಿಳೆಯೊಬ್ಬರು ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಲಲಿತಾದ್ರಿಪುರದಲ್ಲಿ ನಡೆದಿದೆ. ಮೈಸೂರು ತಾಲೂಕು ಲಲಿತಾದ್ರಿಪುರ ನಿವಾಸಿ ಹಾಗೂ ನಿವೃತ್ತ ಮುಖ್ಯಪೇದೆ ಪುರುಷೋತ್ತಮ್ ಸಿಂಗ್ ಎಂಬವರ ಪತ್ನಿ ಮಂಜುಳಾ ಬಾಯಿ (50) ಆತ್ಮಹತ್ಯೆಗೆ ಶರಣಾದವರು. ಇವರು ತುಂಬಾ ದಪ್ಪಗಿದ್ದು, ದೇಹದ ತೂಕ ಇಳಿಸಲು ಮಾಡಿದ ಪ್ರಯತ್ನಗಳು ವಿಫಲವಾದವು. ಇದರಿಂದ ಮನನೊಂದಿದ್ದ ಮಂಜುಳಾ ಅವರು ಶುಕ್ರವಾರ ತಮ್ಮ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ. ಸುಟ್ಟಗಾಯಗಳೊಂದಿಗೆ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ಮಂಜುಳಾ ಅವರು ಶನಿವಾರ ಮೃತಪಟ್ಟಿದ್ದಾರೆ. ಬೆಂಕಿ ನಂದಿಸಲು ಪ್ರಯತ್ನಿಸಿದ ಪತಿ ಪುರುಷೋತ್ತಮ್ ಸಿಂಗ್ ಅವರ ಕೈಗೆ ಸುಟ್ಟ ಗಾಯಗಳಾಗಿವೆ. ಈ ಸಂಬಂಧ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಳೆ ಬಳ್ಳೆಯಲ್ಲಿ ಮಾಸ್ತಮ್ಮ ಜಾತ್ರಾ ಮಹೋತ್ಸವ
ಅಂತರಸಂತೆ: ಮೈಸೂರು- ಮಾನಂದವಾಡಿಯ ಮುಖ್ಯರಸ್ತೆಯಲ್ಲಿ ಬರುವ ಬಳ್ಳೆ ಗ್ರಾಮದಲ್ಲಿ ಏ.21 ರಂದು ಶ್ರೀ ಮಾಸ್ತಮ್ಮ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಜಾತ್ರೆಯನ್ನು ಕಾಡಿನ ಹಾಡಿ ಜನಾಂಗ ಹಾಗೂ ಇತರ ಸಮುದಾಯದವರು ಸೇರಿ ನಡೆಸುತ್ತಿದ್ದು, ಪ್ರಸಿದ್ಧಿಯಾಗಿದೆ. ಈ ಹಿಂದೆ ಡಾ.ರಾಜ್ಕುಮಾರ್ ಗಂಧದಗುಡಿ ಸಿನೆಮಾ ತೆಗೆಯುತ್ತಿದ್ದಾಗ ಮಾಸ್ತಮ್ಮನ ದೇವಸ್ಥಾನಕ್ಕೆ ಗಂಟೆಗಳನ್ನು ಕೊಟ್ಟಿದ್ದು, ಅವುಗಳು ಈಗಲೂ ಇವೆ. ಕಬಿನಿ ಅಣೆಕಟ್ಟು ಕಟ್ಟುವಾಗ ಮೂಲ ಸ್ಥಾನದಿಂದ ಈ ಮೈಸೂರು ಮಾನಂದವಾಡಿ ಮುಖ್ಯರಸ್ತೆಗೆ ಮಾಸ್ತಮ್ಮನ ದೇವಸ್ಥಾನವನ್ನು ಸ್ಥಳಾಂತರಿಸಲಾಗಿದೆ. ಜಾತ್ರೆಯ ಅಂಗವಾಗಿ ಅನ್ನ ಸಂತರ್ಪಣೆ ನಡೆಯಲಿದೆ. ಭಕ್ತರು ಆಗಮಿಸುವಂತೆ ಜಾತ್ರಾ ಮಹೋತ್ಸವ ಸಮಿತಿ ಕೋರಿದೆ.
ವಿದ್ಯಾರ್ಥಿಗಳ ಬೀಳ್ಕೊಡುಗೆ
ಎಚ್.ಡಿ. ಕೋಟೆ: ಎಚ್.ಡಿ. ಕೋಟೆಯ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹನ್ನೊಂದನೆ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವು ಏ.22 ರಂದು ಬೆಳಗ್ಗೆ 10.30ಕ್ಕೆ ಕಾಲೇಜು ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಸೋಮೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಆಡಳಿತಾಧಿಕಾರಿ ಪ್ರೊ.ಕೆ.ಪಿ ಬಸವೇಗೌಡ ಅಧ್ಯಕ್ಷತೆ ವಹಿಸುವರು. ವಾಸ್ತುಶಿಲ್ಪಿ ಪಾರ್ವತಿ ರಾಮಕೃಷ್ಣಪ್ಪ ಶುಭ ನುಡಿಗಳಾಡುವರು. ಪ್ರಾಂಶುಪಾಲರಾದ ಎಸ್.ಪಿ. ಪ್ರಕಾಶ್, ಎ.ಸಿ. ಭೈರಪ್ಪ ಹಾಗೂ ಮುಖ್ಯೋಪಾಧ್ಯಾಯಿನಿ ನಂದಿನಿ ಭಾಗವಹಿಸುವರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.