ಸಂತ ಫಿಲೋಮಿನಾ ಕಾಲೇಜಿನಲ್ಲಿ ಪ್ರರ್ಶನ
ಮೈಸೂರು: ಆಂಗ್ಲಕವಿ ವಿಲಿಯಂ ಶೇಕ್ಸ್ಪಿಯರ್ನ 450ನೇ ಜನ್ಮದಿನಾಚರಣೆಯ ಅಂಗವಾಗಿ ನಗರದ ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ವಿಭಾಗವು ಏ.23 ರಂದು ವಿಶೇಷ ಪ್ರದರ್ಶನ ಏರ್ಪಡಿಸಿದೆ. ವಿಲಿಯಂ ಶೇಕ್ಸ್ಪಿಯರ್ಗೆ ಸಂಬಂಧಿಸಿದ ಹಲವಾರು ಛಾಯಾಚಿತ್ರಗಳು, ಶೇಕ್ಸ್ಪಿಯರ್ ರಚಿಸಿದ ನಾಟಕದ ದೃಶ್ಯಗಳ ಛಾಯಾಚಿತ್ರಗಳು, ಡಿವಿಡಿಗಳಲ್ಲಿ, ಕ್ಯಾಸೆಟ್ಗಳಲ್ಲಿ ಹಾಗೂ ಈಗ ಬಳಕೆಯಲ್ಲಿ ಇಲ್ಲದ ಗ್ರಾಮಾಫೋನ್ ರೆಕಾರ್ಡ್ಗಳಲ್ಲಿ ಮುದ್ರಿತವಾಗಿರುವ ನಾಟಕಗಳು ಪ್ರದರ್ಶಿತವಾಗಲಿದೆ. ಈ ಪ್ರದರ್ಶನದ ಸಾಮಗ್ರಿಗಳನ್ನು ಲಂಡನ್, ನ್ಯೂಯಾರ್ಕ್ ಹಾಗೂ ಸ್ಟ್ರಾಪೋರ್ಡ್ ಸ್ಥಳಗಳಿಂದ ಸಂಗ್ರಹಿಸಿದೆ. ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ರೆವರೆಂಡ್ ಲೆಸ್ಲಿ ಮೋರಸ್ ಉದ್ಘಾಟಿಸುವರು. ಏ.24ರ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಈ ಪ್ರದರ್ಶನ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ. ಇಂಗ್ಲಿಷ್ ಬೋಧಕರಿಗೆ ಅನುಕೂಲವಾಗುವ ಈ ಪ್ರದರ್ಶನದ ಸದುಪಯೋಗ ಪಡಿಸಿಕೊಳ್ಳುವಂತೆ ಪ್ರಾಂಶುಪಾಲರು ಕೋರಿದ್ದಾರೆ.
ಮೇ 3 ರಿಂದ 5 ರವರೆಗೆ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್
ಮೈಸೂರು: 2014-15ನೇ ಸಾಲಿಗೆ ಶ್ರೀ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕಾಗಿ ಜಿಲ್ಲಾ ಮಟ್ಟದ ಕೌನ್ಸೆಲಿಂಗ್ಗೆ ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ತಾಲೂಕಿನ ಎಲ್ಲ ಬಿಇಒ ಕಚೇರಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ ಹಾಗೂ ಎಲ್ಲ ವಸತಿ ಶಾಲೆಗಳಲ್ಲಿ ಪ್ರಕಟಿಸಿದೆ. ಜಿಲ್ಲಾ ಮಟ್ಟದ ಕೌನ್ಸೆಲಿಂಗ್ ಮೇ 3 ರಿಂದ ಮೇ 5ರವರೆಗೆ ಸರ್ಕಾರಿ ಬಾಲಕರ ವಿದ್ಯಾರ್ಥಿನಿಲಯ, ಮರುಗ ದೇವಿ ದೇವಸ್ಥಾನದ ಹತ್ತಿರ, ನಜರ್ಬಾದ್, ಇಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಅರ್ಹ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ನಡೆಯಲಿದೆ. ವಿದ್ಯಾರ್ಥಿಗಳ ಪೋಷಕರುಗಳು ತಮ್ಮ ಮಕ್ಕಳೊಂದಿಗೆ ಕೌನ್ಸೆಲಿಂಗ್ಗೆ ಹಾಜರಾಗುವಂತೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಹಾಗೂ ಜಿಲ್ಲಾ ಪ್ರವೇಶ ಪರೀಕ್ಷಾಧಿಕಾರಿಗಳು ತಿಳಿಸಿದ್ದಾರೆ.
ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ
ಮೈಸೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1,837 ಪ್ರೊಬೇಷನರಿ ಆಫೀಸರ್ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. 2014ರ ಏ.1 ಕ್ಕೆ ಯಾವುದಾದರೂ ಪದವಿಯಲ್ಲಿ ತೇರ್ಗಡೆ ಹೊಂದಿರಬೇಕು. ಪ್ರಸಕ್ತ ಸಾಲಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವವರೂ ಸಹ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿಧಾನ ವೆಬ್ಸೈಟ್- ಢಿಢಿಢಿ.ಡಡಿಛಡಿಜಛಿಛಟ್ಞ್ಟಿಜ್ಝಿಟಿಜ್ಝಛ.್ಛ್ಟಟನಲ್ಲಿ ಆನ್ಲೈನ್ ಮೂಲಕ ಏ.25ರೊಳಗಾಗಿ ಅರ್ಜಿ ಸಲ್ಲಿಸಬೇಕು ಹಾಗೂ ಏ.28ರೊಳಗಾಗಿ ಬ್ಯಾಂಕಿನಲ್ಲಿ ಶುಲ್ಕ ಪಾವತಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್ಸೈಟ್ ನೋಡಿ ಅಥವಾ ಉಪ ಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು ವಿವಿ, ದೂ.2516844, ಮೊ. 9449686641 ಸಂಪರ್ಕಿಸಬಹುದು.
ವಿಜೇತರಿಗೆ ಬಹುಮಾನ..
ಮೈಸೂರಿನ ಕಬೀರ್ ರಸ್ತೆಯಲ್ಲಿರುವ ಶ್ರೀ ಶಾರದಾ ಮಹಿಳಾ ಸೇವಾ ಸಮಾಜ ವತಿಯಿಂದ ಅಕ್ಕಮಹಾದೇವಿ ಜಯಂತಿ ಅಂಗವಾಗಿ ನಡೆದ ವಚನ ಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅನುರಾಧ ನಂದಕುಮಾರ್, ಸುಧಾ ಕೃಷ್ಣಮೂರ್ತಿ, ಪೂರ್ಣಿಮಾ ರಮೇಶ್ ಇದ್ದಾರೆ.
ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಸ್ಪರ್ಧಾ ತರಬೇತಿ
ಮೈಸೂರು: 2015ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದು ವರ್ಷದ ವಿಶೇಷ ತರಬೇತಿಯನ್ನು ನೇಗಿಲಯೋಗಿ ವಿದ್ಯಾವರ್ಧಕ ವೃತ್ತಿ ಮಾರ್ಗದರ್ಶನ ಮತ್ತು ಸ್ಪರ್ಧಾ ಅಕಾಡೆಮಿ ವತಿಯಿಂದ ಆಯೋಜಿಸಿದೆ. ತರಬೇತಿಯಲ್ಲಿ ಶಿಬಿರಾರ್ಥಿಗಳ ಆಯ್ಕೆಯಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ತರಬೇತಿಯು ಮೇ 1 ರಿಂದ ಪ್ರಾರಂಭಿಸಲು ಉದ್ದೇಶಿಸಿದೆ. ತರಬೇತಿಯು ಪ್ರತಿದಿನ ಸಂಜೆ 4.30 ರಿಂದ 6 ರವರೆಗೆ ಮತ್ತು ಸಂಜೆ 6 ರಿಂದ 7.30 ರವರೆಗೆ ಎರಡು ತರಗತಿ ನಡೆಸುವುದು ಮತ್ತು ಭಾನುವಾರ ಮತ್ತು ಸರ್ಕಾರಿ ರಜೆ ದಿನದಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ 3 ತರಗತಿ ನಡೆಸಲಾಗುತ್ತದೆ. ವಿದ್ಯಾವರ್ಧಕ ಕಾನೂನು ಕಾಲೇಜು, ಶೇಷಾದ್ರಿ ಅಯ್ಯರ್ ರಸ್ತೆ, ಆರ್ಎಂಸಿ ಹತ್ತಿರ ಇಲ್ಲಿ ತರಬೇತಿ ಕೇಂದ್ರದಲ್ಲಿ ತಮ್ಮ ಹೆಸರನ್ನು ಬೆಳಗ್ಗೆ 11 ರಿಂದ ಸಂಜೆ 7ರವರೆಗೆ ನೋಂದಾಯಿಸಿಕೊಳ್ಳಬಹುದು. ಮೊ. 9449211994 ಸಂಪರ್ಕಿಸಬಹುದು.
ಹಿರಿಯ ನಾಗರಿಕರಿಗೆ ನೇತ್ರ ಉಚಿತ ತಪಾಸಣೆ 23ರಂದು
ಮೈಸೂರು: ಜೆಎಸ್ಎಸ್ ಆಸ್ಪತ್ರೆಯ ಜೆಎಸ್ಎಸ್ ಹಿರಿಯ ನಾಗರಿಕರ ಸಹಾಯವಾಣಿ ಮತ್ತು ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಸಹಯೋಗದಲ್ಲಿ ಏ.23ರ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಸಹಾಯವಾಣಿಯಲ್ಲಿ ಹಿರಿಯ ನಾಗರಿಕರಿಗೆ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಿದೆ ಎಂದು ಯೋಜನಾ ಸಂಯೋಜನಾಧಿಕಾರಿ ಎಸ್.ಬಸವರಾಜು ಹೇಳಿದ್ದಾರೆ. ಹಿರಿಯ ನಾಗರಿಕರು ಶಿಬಿರದಲ್ಲಿ ಭಾಗವಹಿಸಿ ಸದುಪಯೋಗ ಪಡೆಯಬಹುದಾಗಿದೆ. ಶಸ್ತ್ರಚಿಕಿತ್ಸೆ ಅವಶ್ಯಕವಿದ್ದವರಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗುವುದು. ನೋಂದಣಿ ಮತ್ತು ಹೆಚ್ಚಿನ ವಿವರಗಳಿಗಾಗಿ ಜೆಎಸ್ಎಸ್ ಹಿರಿಯ ನಾಗರಿಕರ ಸಹಾಯವಾಣಿ ಕೊಠಡಿ ಸಂಖ್ಯೆ 15, ಜೆಎಸ್ಎಸ್ ಹಳೇ ಆಸ್ಪತ್ರೆ ಆವರಣ, ಮಹಾತ್ಮಗಾಂಧಿ ರಸ್ತೆ, ಮೈಸೂರು ಅವರನ್ನು ಖುದ್ದಾಗಿ ಅಥವಾ ದೂರವಾಣಿ ಮೂಲಕ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಸಂಪರ್ಕಿಸಬಹುದು. ದೂ.2548253 ಅಥವಾ 2448138 ಹಾಗೂ ಸುಂಕರಹಿತ ಸಂಖ್ಯೆ 1090 ಸಂಪರ್ಕಿಸಬಹುದು.
ಹಲವು ಸಂಸ್ಥೆಗಳಿಂದ ನಾಳೆಯಿಂದ ತರಬೇತಿ, ಶಿಬಿರ
ಮೈಸೂರು: ಕುವೆಂಪುನಗರದ ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ವತಿಯಿಂದ ಏ.21 ರಿಂದ 30 ರವರೆಗೆ ಮಕ್ಕಳ ಸ್ಮರಣಶಕ್ತಿ ಯೋಗ ಶಿಬಿರವು ನಡೆಯಲಿದೆ. ಏ.20ರ ಬೆಳಗ್ಗೆ 10 ರಿಂದ 12 ರವರೆಗೆ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ವಿವರಗಳಿಗಾಗಿ ಎಚ್.ಎಸ್. ರಮೇಶಚಂದ್ರ, ಮೊ. 94484-58050 ಸಂಪರ್ಕಿಸಿ. ಮಹಾರಾಜ ತಾಂತ್ರಿಕ ಮಹಾವಿದ್ಯಾಲಯವು ಕೇಂದ್ರ ಮಾನವ ಸಂಪನ್ಮೂಲ ಹಾಗೂ ಅಭಿವೃದ್ಧಿ ಸಚಿವಾಲಯದ ಎಂಬ ಕಾರ್ಯಕ್ರಮದಡಿಯಲ್ಲಿ ಐಐಟಿ ಖರಗಪುರದ ಸಹಯೋಗದೊಂದಿಗೆ ಮೇ 20 ರಿಂದ 30 ರವರೆಗೆ ದ್ರವ ಚಲನಶಾಸ್ತ್ರ ವಿಷಯ ಕುರಿತು ಕಾರ್ಯಾಗಾರ ಆಯೋಜಿಸಿದೆ. ಆದ್ದರಿಂದ ಸಿವಿಲ್, ಮೆಕಾನಿಕಲ್, ಇಂಡಸ್ಟ್ರಿಯಲ್ ಪ್ರೊಡಕ್ಷನ್, ಕನ್ಸ್ಟ್ರಕ್ಷನ್ ಟೆಕ್ನಾಲಜಿ ವಿಭಾಗಗಳಲ್ಲಿ ಬೋಧನೆ ಮಾಡುತ್ತಿರುವ ಹಿರಿಯ ಕಿರಿಯ ಶಿಕ್ಷಕರು ಏ.21 ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. 9241032032 ಸಂಪರ್ಕಿಸಿ.ಗೋಕುಲಂ 3ನೇ ಹಂತದ ದಿವ್ಯಜ್ಯೋತಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಂಧ ವಿದ್ಯಾರ್ಥಿಗಾಗಿ ಉಚಿತವಾಗಿ ಬ್ರೈಲ್ ಕಲಿಕೆ ವ್ಯಕ್ತಿತ್ವ ವಿಕಸನ ಕಂಪ್ಯೂಟರ್ ಮತ್ತು ಚಲನವಲನ ಹಾಗೂ ಸ್ಪೋಕನ್ ಇಂಗ್ಲಿಷ್ ತರಬೇತಿ ಆಯೋಜಿಸಿದೆ. ಮೊ. 7829885087 ಸಂಪರ್ಕಿಸಿ.
ತರಬೇತಿ ಸಂಸ್ಥೆಯಿಂದ 26- 27 ರಂದು ಅಣಕು ಸಿಇಟಿ ಪರೀಕ್ಷೆ
ಮೈಸೂರು: 2014ನೇ ಸಾಲಿನ ಪಿಯುಸಿ ಸಿಇಟಿ ಪರೀಕ್ಷೆಯನ್ನು ತೆಗೆದುಕೊಂಡಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೇಗಿಲಯೋಗಿ ವಿದ್ಯಾವರ್ಧಕ ವೃತ್ತಿ ಮಾರ್ಗದರ್ಶನ ಮತ್ತು ಪರೀಕ್ಷಾ ಪೂರ್ವ ತರಬೇತಿ ಅಕಾಡೆಮಿ ವತಿಯಿಂದ ಏ.26 ರಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಹಾಗೂ ಏ.27 ರಂದು ಗಣಿತ ಮತ್ತು ಜೀವಶಾಸ್ತ್ರ ಪತ್ರಿಕೆಯ ಅಣಕು ಪಿಯುಸಿ ಸಿಇಟಿ ಪರೀಕ್ಷೆ ನಡೆಸಲಿದೆ. ಪರೀಕ್ಷೆ ನಂತರ ಪತ್ರಿಕೆಯ ಪ್ರಶ್ನಾವಳಿ ಬಗ್ಗೆ ಉಪನ್ಯಾಸಕರು ಮಾಹಿತಿ ನೀಡುವರು. ಮತ್ತು ಪ್ರತಿ ಪತ್ರಿಕೆಯಲ್ಲಿ ಅತಿ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುತ್ತದೆ. ಆಸಕ್ತ ಅರ್ಹ ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ, ಶೇಷಾದ್ರಿ ಅಯ್ಯರ್ ರಸ್ತೆ, ಆರ್ಎಂಸಿ ಹತ್ತಿರ, ಬೆಳಗ್ಗೆ 11 ರಿಂದ ಸಂಜೆ 6ರವರೆಗೆ ಭೇಟಿ ನೀಡಬಹುದು. ಮೊ. 9449211994, 8970306066 ಸಂಪರ್ಕಿಸಿ.
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬೇಸಿಗೆ ವಿಜ್ಞಾನ ಶಿಬಿರ
ಮೈಸೂರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಮೈಸೂರು ವಿಜ್ಞಾನ ಕೇಂದ್ರ ಹಾಗೂ ರೋಟರಿ ಪಶ್ಚಿಮ ವಿದ್ಯಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಏ.28 ರಿಂದ ಮೇ 7 ರವರೆಗೆ ಬೇಸಿಗೆ ವಿಜ್ಞಾನ ಶಿಬಿರವನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದೆ. ಶಿಬಿರವು ಪ್ರತಿದಿನ ಬೆಳಗ್ಗೆ 10 ರಿಂದ ಮಧ್ಯಾಹ್ನ1 ರವರೆಗೆ ಸರಸ್ವತಿಪುರಂನ ರೋಟರಿ ಪಶ್ಚಿಮ ಶಾಲೆಯ ಆವರಣದಲ್ಲಿ ನಡೆಯಲಿದೆ. ಶಿಬಿರದಲ್ಲಿ ಹಿರಿಯ ವಿಜ್ಞಾನಿಗಳು, ಶಿಕ್ಷಣ ತಜ್ಞರು, ವಿಜ್ಞಾನ ಆಸಕ್ತರಿಂದ ಉಪನ್ಯಾಸ ಮಾಲಿಗೆಗಳು, ವಿಜ್ಞಾನ ಪ್ರಯೋಗಗಳು ಮೂಢನಂಬಿಕೆಗಳ ಬಗ್ಗೆ ಆಹಾರ ಕಲಬೆರಕೆಗಳ ಪ್ರಾತ್ಯಕ್ಷತೆ ಹಾಗೂ ರಾಕೆಟ್ ತಯಾರಿಸುವ ಮಾದರಿ ಕಾರ್ಯಾಗಾರ ಹಾಗೂ ಇನ್ನು ಹತ್ತು ಹಲವಾರು ಕ್ಷೇತ್ರಗಳಲ್ಲಿ ಪ್ರಾತ್ಯಕ್ಷತೆ ಹಾಗೂ ಪ್ರಯೋಗಗಳನ್ನು ತೋರಿಸಲಾಗುವುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಆರ್. ಶ್ರೀನಿವಾಸನ್, ದೂ. 2444376 ಹಾಗೂ ಮೊ. 9945657274 ಸಂಪರ್ಕಿಸಬಹುದು.
ಅವಳಿಗಳ ದಿನ...
ಮೈಸೂರಿನ ಜಿಐಎಂಡಿಎಸ್ ಪದವಿ ಕಾಲೇಜಿನಲ್ಲಿ ಮೋಜಿನ ವಾರದ ಅಂಗವಾಗಿ ಅವಳಿಗಳ ದಿನವನ್ನು ಆಚರಿಸಲಾಯಿತು. ಪದವಿ ವಿದ್ಯಾರ್ಥಿನಿಯರು ಅವಳಿ ಮಕ್ಕಳನ್ನು ಹೋಲುವ ಹಾಗ ಉಡುಪುಗಳನ್ನು ಧರಿಸಿದ್ದರು.
ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ 5 ಮಂದಿ ಬಂಧನ
ಮೈಸೂರು: ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ 5 ಮಂದಿ ಆರೋಪಿಗಳನ್ನು ಮೈಸೂರಿನ ನಜರ್ಬಾದ್ ಠಾಣೆ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಸಿದ್ದಾರ್ಥನಗರದ ಸುಬ್ರಹ್ಮಣ್ಯ ಎಂಬವರ ಪುತ್ರ ರಮೇಶ (40), ಕೆ.ಆರ್. ಮಿಲ್ಸ್ ಕಾಲೋನಿಯ ಲೇ. ವೆಂಕಟೇಗೌಡ ಎಂಬವರ ಪುತ್ರ ಮುತ್ತುರಾಜ್ (55), ಬೆಲವತ್ತದ ಸೋಮಾಚಾರ್ ಎಂಬವರ ಪುತ್ರ ಎಸ್. ಯೋಗಾನಂದ (25), ರಾಘವೇಂದ್ರ ನಗರದ ಸುಬ್ಬಯ್ಯ ಎಂಬವರ ಪುತ್ರ ರಮೇಶ್ಕುಮಾರ್ (46) ಹಾಗೂ ಕುರುಬಾರಹಳ್ಳಿಯ ದಾಸಚಾರಿ ಎಂಬವರ ಪುತ್ರ ನಿಂಗರಾಜಚಾರಿ (52) ಬಂಧಿತ ಆರೋಪಿಗಳು. ರಾಜಸ್ಥಾನ ರಾಯಲ್ಸ್ ಮತ್ತು ಹೈದರಾಬಾದ್ ಸನ್ರೈಸರ್ಸ್ ನಡುವೆ ಶುಕ್ರವಾರ ರಾತ್ರಿ ಐಪಿಎಲ್ ಟಿ-20 ಕ್ರಿಕೆಟ್ ಆಟ ನಡೆಯುತ್ತಿತ್ತು. ಈ ಬಗ್ಗೆ ದೂರವಾಣಿ ಮೂಲಕ ಸಾರ್ವಜನಿಕರ ಜೊತೆ ಬೆಟ್ಟಿಂಗ್ ವ್ಯವಹಾರ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪೊಲೀಸರು ಸಿದ್ದಾರ್ಥನಗರ ಮೋಕ್ಷ ಮಾರ್ಗದಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿ, ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ 5 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 32 ಮೊಬೈಲ್ಗಳು, ಎಲ್ಸಿಡಿ ಟಿವಿ, ಲ್ಯಾಪ್ಟಾಪ್, ಪ್ರಿಂಟರ್, ಡಾಟಾ ಕಾರ್ಡ್, ಸೆಟ್ಟಾಪ್ ಬಾಕ್ಸ್ ವಶಪಡಿಸಿಕೊಂಡಿದ್ದಾರೆ.
20 ದಿನದಲ್ಲಿ ಅರಮನೆಗೆ 1.34 ಲಕ್ಷ ಮಂದಿ ಭೇಟಿ
ಮೈಸೂರು: ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ದೇಶ- ವಿದೇಶಗಳ ಸುಮಾರು 1.34 ಲಕ್ಷ ಮಂದಿ ಏಪ್ರಿಲ್ ತಿಂಗಳಲ್ಲಿ ಈವರೆಗೆ ಮೈಸೂರು ಅರಮನೆಗೆ ಭೇಟಿ ನೀಡಿದ್ದಾರೆ. ವಯಸ್ಕರು 1,25,277 ಮಂದಿ, ವಿದ್ಯಾರ್ಥಿಗಳು 4,531 ಮಂದಿ, ಮಕ್ಕಳು 2,420 ಮಂದಿ ಹಾಗೂ ವಿದೇಶಿ ಪ್ರವಾಸಿಗರು 2,468 ಮಂದಿ ಸೇರಿದಂತೆ ಒಟ್ಟು 1,34,696 ಮಂದಿ ಏ.18 ರವರೆಗೆ ಭೇಟಿ ನೀಡಿದ್ದಾರೆ ಎಂದು ಅರಮನೆ ಮಂಡಳಿಯ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ತಿಳಿಸಿದ್ದಾರೆ. ಏ.13 ರಂದು ಭಾನುವಾರ ಒಂದೇ ದಿನ 14,625 ಮಂದಿ ಭೇಟಿ ನೀಡಿದ್ದು, ಇದರಿಂದ ಆ ದಿನದ 6,15,250 ಪ್ರವೇಶ ದರ ಸಂಗ್ರಹವಾಗಿದೆ. ಒಟ್ಟು 18 ದಿನಕ್ಕೆ 56,12,480 ಪ್ರವೇಶ ದರ ಸಂಗ್ರಹವಾಗಿದೆ ಎಂದಿದ್ದಾರೆ.
ಹೊಟೇಲ್ನಲ್ಲಿ ಜೂಜಾಟಆಡುತ್ತಿದ್ದ 12 ಮಂದಿ ಬಂಧನ
ಮೈಸೂರು: ನಗರದ ಸಿದ್ದಾರ್ಥ ಹೊಟೇಲ್ನ ಕೊಠಡಿಯೊಂದರಲ್ಲಿ ಜೂಜಾಡುತ್ತಿದ್ದ 12 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಶುಕ್ರವಾರ ನಡೆದಿದೆ.ಜೂಜಾಟದಲ್ಲಿ ತೊಡಗಿದ್ದ ಯೋಗೇಶ್, ಅಸ್ಲಂ, ಸಾದಿಕ್, ಶ್ರೀನಿವಾಸ, ಶೇಖರ್, ಗಿರೀಶ್, ಸಿದ್ದೇಶ್, ಶ್ರೀನಿವಾಸ್, ನಜೀರ್ ಅ. ಮುಜೀರ್ ಅಹಮ್ಮದ್, ನಿಶಾಂತ್, ಲೋಕೇಶ್ ಹಾಗೂ ಜೂಜಾಟಕ್ಕೆ ಸಹಕರಿಸಿದ ಹೊಟೇಲ್ ಸ್ವಾಗತಗಾರ ಪವನ್ಕುಮಾರ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಸಾದಿಕ್ ಮಾತ್ರ ಶ್ರೀರಂಗಪಟ್ಟಣ ನಿವಾಸಿಯಾಗಿದ್ದು, ಉಳಿದವರು ಮೈಸೂರಿನ ವಿವಿಧ ಬಡಾವಣೆಗಳ ನಿವಾಸಿಯಾಗಿದ್ದಾರೆ. ಸಿಸಿಬಿ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಹೊಟೇಲ್ ಸಿದ್ದಾರ್ಥದ ಕೊಠಡಿ ಸಂಖ್ಯೆ 414ರ ಮೇಲೆ ದಾಳಿ ನಡೆಸಿದ್ದಾರೆ. ಜೂಜಾಡುತ್ತಿದ್ದ 11 ಜನ, ಜೂಜಾಟಕ್ಕೆ ನೆರವು ನೀಡಿದ್ದ ಹೊಟೇಲ್ ಸ್ವಾಗತಗಾರ ಸೇರಿದಂತೆ ಒಟ್ಟು 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಪಣಕ್ಕಿಟ್ಟಿದ್ದ 1,40,160, 3 ದ್ವಿಚಕ್ರವಾಹನಗಳು, 1 ಕಾರು, 12 ಮೊಬೈಲ್ ಹಾಗೂ ಜೂಜಾಟದ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ಬಸ್ ಡಿಕ್ಕಿ: ವೃದ್ಧೆ ಸಾವು, ಅಪರಿಚಿತ ಶವ ಪತ್ತೆ
ಮೈಸೂರು: ಬಸ್ ಡಿಕ್ಕಿಯಾಗಿ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ನಗುವನಹಳ್ಳಿ ನಿವಾಸಿ ರಾಜೇಶ್ವರಿ (60) ಮೃತಪಟ್ಟವರು. ಇವರು ಬಸ್ ಹುಡುಕಾಟದಲ್ಲಿದ್ದಾಗ ಹಿಂದಕ್ಕೆ ಚಲಿಸುತ್ತಿದ್ದ ಸಾರಿಗೆ ಬಸ್ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿದ್ದು, ಕೆ.ಆರ್. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಸಂಬಂಧ ದೇವರಾಜ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿ ಶವ ಪತ್ತೆ: ನಗರದ ಮೈಸೂರು ವಿವಿ ಕ್ರಾಫರ್ಡ್ ಭವನದ ಕಾಂಪೌಂಡ್ ಹತ್ತಿರ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಚಹರೆ- 55 ವರ್ಷ, 5.5 ಅಡಿ ಎತ್ತರು, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಕಪ್ಪು- ಬಿಳಿ ಮಿಶ್ರಿತ ತಲೆಕೂದಲು, ದಾಡಿ- ಮೀಸೆ ಬಿಟ್ಟಿದ್ದಾರೆ. ಬಿಳಿ ಟವಲ್, ಕಪ್ಪು ಪ್ಯಾಂಟ್, ಬಿಳಿ- ಕೆಂಪು ಕೆಂಪು ಮಿಶ್ರಿತ ಚೌಕಳಿ ಇರುವ ಶರ್ಟ್ ಧರಿಸಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ದೂ. 2418320 ಸಂಪರ್ಕಿಸಲು ಲಕ್ಷ್ಮಿಪುರಂ ಠಾಣೆಯ ಎಸ್ಐ ಕುಮಾರ ಕೋರಿದ್ದಾರೆ.
ನರಚನಹಳ್ಳಿ ಗ್ರಾಪಂ ಉಪಾಧ್ಯಕ್ಷರಾಗಿ ನಾಗಮ್ಮ ಆಯ್ಕೆ
ಭೇರ್ಯ: ತಾಲೂಕಿನ ನರಚನಹಳ್ಳಿ ಗ್ರಾಪಂ ಉಪಾಧ್ಯಕ್ಷ ನಾಗಮ್ಮ ರಾಮೇಗೌಡ ಅವಿರೋಧ ಆಯ್ಕೆಯಾದರು. ಉಪಾಧ್ಯಕ್ಷರಾಗಿದ್ದ ರಾಚಪ್ಪಾಜಿ ಒಡಂಬಡಿಕೆಯಂತೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಸ್ಥಾನ ತೆರವಾಗಿತ್ತು. ಶನಿವಾರ ನಡೆದ ಚುನಾವಣೆಯಲ್ಲಿ ನಾಗಮ್ಮ ರಾಮೇಗೌಡ ಒಬ್ಬರೆ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧ ಆಯ್ಕೆಯಾದರು ಎಂದು ಚುನಾವಣಾಧಿಕಾರಿಯಾಗಿದ್ದ ಹಾರಂಗಿ ಇಲಾಖೆ ಎಇಇ ಬಸವರಾಜು ಘೋಷಿಸಿದರು. ನಂತರ ಪಿಡಿಒ ಸಂತೋಷ್, ಗ್ರಾಪಂ ಅಧ್ಯಕ್ಷೆ ಕಲಾವತಿ ನಾಗರಾಜ್, ಮಾಜಿ ಅಧ್ಯಕ್ಷ ಸ್ವಾಮಿ, ಮಹದೇವ್, ದ್ರಾಕ್ಷಾಯಿಣಿ ನಟೇ ಶಚಾರಿ, ನೂತನ ಉಪಾಧ್ಯಕ್ಷೆ ನಾಗಮ್ಮ ಅವರನ್ನು ಅಭಿನಂದಿಸಿದರು.
ಮತಗಟ್ಟೆ ಬಳಿ ಘರ್ಷಣೆ ಹಿನ್ನೆಲೆಯಲ್ಲಿ ಶಾಂತಿ ಸಭೆ
ಮೈಸೂರು: ಲೋಕಸಭಾ ಚುನಾವಣೆ ಮತದಾನ ವೇಳೆ ಅಜೀಜ್ಸೇಠ್ ನಗರದಲ್ಲಿ ನಡೆದ ಘರ್ಷಣೆ ಹಿನ್ನೆಲೆಯಲ್ಲಿ ದೇವರಾಜ ಉಪ ವಿಭಾಗದ ಎಸಿಪಿ ಕಚೇರಿಯಲ್ಲಿ ಶನಿವಾರ ಶಾಂತಿ ಸಭೆ ನಡೆಯಿತು. ಈ ಸಭೆಯಲ್ಲಿ ಕಾಂಗ್ರೆಸ್, ಎಸ್ಡಿಪಿಐ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರೊಂದಿಗೆ ಸಹಕರಿಸುವಂತೆ ದೇವರಾಜ ಉಪ ವಿಭಾಗದ ಎಸಿಪಿ ಬುಳ್ಳಕ್ಕನವರ್ ಮನವಿ ಮಾಡಿದರು. ಅಜೀಜ್ಸೇಠ್ ನಗರ ಫಾರೂಕಿಯಾ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಗೆ ಮತದಾರರನ್ನು ಕರೆತಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಎಸ್ಡಿಪಿಐ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಇದು ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆಗೆ ಕಾರಣವಾಗಿತ್ತು. ಪೊಲೀಸರು ಮಧ್ಯಪ್ರವೇಶಿಸಿ, ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ಹತೋಟಿಗೆ ತಂದರು. ಮಾಜಿ ಮೇಯರ್ಗಳಾದ ಅಯೂಬ್ ಖಾನ್, ಸಂದೇಶ್ ಸ್ವಾಮಿ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು. ಉದಯಗಿರಿ ಠಾಣೆಯ ಇನ್ಸ್ಪೆಕ್ಟರ್ ಆರ್.ಪಿ. ಅಶೋಕ್ ಇದ್ದರು.
22ಕ್ಕೆ ವೈರ್ಲೆಸ್ ತಂತ್ರಜ್ಞಾನ ಕುರಿತ ವಿಚಾರ ಸಂಕಿರಣ
ಮೈಸೂರು: ಎಂಎಂಕೆ ಮತ್ತು ಎಸ್ಡಿಎಂ ಮಹಿಳಾ ಮಹಾವಿದ್ಯಾಲಯದ ವಿದ್ಯುನ್ಮಾನ ವಿಭಾಗವು ಏ.22 ರಂದು ವೈರಲೆಸ್ ತಂತ್ರಜ್ಞಾನದ ಬಗ್ಗೆ ಒಂದು ರಾಜ್ಯಮಟ್ಟದ ವಿಚಾರ ಸಂಕಿರಣ ಆಯೋಜಿಸಿದೆ. ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಕೆ. ಚಿದಾನಂದಗೌಡ ವಿಚಾರಗೋಷ್ಠಿ ಉದ್ಘಾಟಿಸುವರು. ಹಾಸನದ ಇಸ್ರೋ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿಯ ವ್ಯವಸ್ಥಾಪಕ ಜಿ.ಎಸ್. ರಾಜು ಅಧ್ಯಕ್ಷತೆ ವಹಿಸುವರು. ಮಂಗಳೂರು ವಿವಿಯ ವಿದ್ಯುನ್ಮಾನ ವಿಭಾಗದ ಮುಖ್ಯಸ್ಥ ಡಾ.ಎ.ಎಂ. ಖಾನ್ ಮಾತನಾಡುವರು. ಮಧ್ಯಾಹ್ನ 3.30ಕ್ಕೆ ನಡೆಯುವ ಸಮಾರೋಪದಲ್ಲಿ ಆಯಿಷ್ ವಿದ್ಯುನ್ಮಾನ ವಿಭಾಗದ ಮುಖ್ಯಸ್ಥ ಪ್ರೊ.ಅಜಿಶ್ ಕೆ. ಅಬ್ರಹಾಂ ಮಾತನಾಡುವರು. ಎಲ್ಲ ಕಾಲೇಜಿನ ವಿದ್ಯುನ್ಮಾನ, ಭೌತಶಾಸ್ತ್ರ ಮತ್ತು ಗಣಕ ವಿಜ್ಞಾನ ವಿಭಾಗಗಳ ಅಧ್ಯಾಪಕರು ಇತರರು ಪಾಲ್ಗೊಳ್ಳುವರು. ಮಾಹಿತಿಗಾಗಿ ಸಂಯೋಜಕರಾದ ವಿದ್ಯುನ್ಮಾನ ವಿಭಾಗದ ಜಿ.ಆರ್. ಸುಮಿತ್ರ ಸಂಪರ್ಕಿಸಿ. ಮೊ. 9611900984, arish.sumithrazgmail.com
ಇಂದು ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆ
ಮೈಸೂರು: ನಗರದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಏ.20ರ ಬೆಳಗ್ಗೆ 11.30 ರಿಂದ ಮಧ್ಯಾಹ್ನ 1.30 ರವರೆಗೆ ಸಾರ್ವಜನಿಕ ಕುಂದುಕೊರತೆ ಸಭೆ ನಡೆಯಲಿದೆ. ಪೊಲೀಸ್ ಇನ್ಸ್ಪೆಕ್ಟರ್, ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಸಭೆಯಲ್ಲಿ ಹಾಜರಿದ್ದು ಸಾರ್ವಜನಿಕರ ಅವಹಾಲುಗಳನ್ನು ಸ್ವೀಕರಿಸಿ ಪರಿಹರಿಸಲಿದ್ದಾರೆ. ಸಾರ್ವಜನಿಕರಿಗೆ ಪೊಲೀಸರ ಸಹಾಯ, ನೆರವು ಬೇಕಾಗಿದ್ದಲ್ಲಿ ತಮ್ಮ ವಾಸ ವಿಳಾಸದ ವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಗಳಲ್ಲಿ ಅಹವಾಲುಗಳನ್ನು ನೀಡಬಹುದು. ಜೊತೆಗೆ ತಮ್ಮ ಅಭಿಪ್ರಾಯ ಮಾಹಿತಿಗಳನ್ನು ಕಾನೂನಿನ ಅಡಿಯಲ್ಲಿ ಸಹಕಾರಿಯಾಗುವಂತೆ ವಿಷಯಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದು. ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ.
ಇಂಗ್ಲಿಷ್ ಕಲಿಕಾ ತರಬೇತಿ, ಬೇಸಿಗೆ ಶಿಬಿರ ಹಲವೆಡೆ
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗಾಗಿ, ಮಕ್ಕಳಿಗೆ ಇಂಗ್ಲಿಷ್ ಕಲಿಸಬೇಕೆನ್ನುವ ತಾಯಂದಿರಿಗಾಗಿ ಹಾಗೂ ಎಲ್ಲ ವಯೋವಾನದ ಆಸಕ್ತ ಕಲಿಕಾರ್ಥಿಗಳಿಗಾಗಿ 45 ದಿನಗಳ ಕಾಲದ ಇಂಗ್ಲಿಷ್ ಕಲಿಕಾ ತರಬೇತಿ ಶಿಬಿರ ನಡೆಸಲು ನಿರ್ಧರಿಸಿದೆ. ಆಸಕ್ತರು ಏ.25 ರೊಳಗಾಗಿ ಕರ್ನಾಟಕ ರಾಜ್ಯ ಮುಕ್ತ ವಿವಿ ಆವರಣದಲ್ಲಿ ತರಬೇತಿ ಕೇಂದ್ರದ ಕಚೇರಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಪ್ರಭಾರ ಕುಲಸಚಿವ ಪ್ರೊ.ಎಲ್. ರಾಜಶೇಖರಯ್ಯ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 2515944 ಸಂಪರ್ಕಿಸಬಹುದು.
ಬೇಸಿಗೆ ಶಿಬಿರ: ಯಾದವಗಿರಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ 10 ರಿಂದ 15 ವರ್ಷದ ಮಕ್ಕಳಿಗಾಗಿ ಏ.21 ರಿಂದ 23 ರವರೆಗೆ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಮೂರು ದಿನಗಳ ಕಾಲ ವಿಶೇಷ ಬೇಸಿಗೆ ಶಿಬಿರ ಏರ್ಪಡಿಸಿದೆ. ಹೆಚ್ಚಿನ ವಿವರಗಳಿಗಾಗಿ ದೂ.2517214 ಸಂಪರ್ಕಿಸಬಹುದು.