ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕೆಲಸಕ್ಕಿದ್ದ ಯುವತಿ ನಾಪತ್ತೆ

Srinivasa Murthy VN
Updated On : 20 Apr 2014, 10:27 am

ಮೈಸೂರು: ಎಚ್.ಡಿ. ಕೋಟೆ ತಾಲೂಕು ಕಟ್ಟೆಮನುಗನಹಳ್ಳಿ ನಿವಾಸಿ ಸಿದ್ದಯ್ಯ ಎಂಬವರ ಪುತ್ರಿ ಜ್ಯೋತಿ (19) ಶುಕ್ರವಾರದಿಂದ ನಾಪತ್ತೆಯಾಗಿದ್ದಾರೆ. ಮಾತೃಶ್ರೀ ಹೋಂ ನರ್ಸಿಂಗ್ ಕೇರ್ ಎಂಬ ಸಂಸ್ಥೆಯಲ್ಲಿ ಜ್ಯೋತಿ ಕೆಲಸ ಮಾಡಿಕೊಂಡಿದ್ದರು. ಕುವೆಂಪುನಗರ ಕೆ ಬ್ಲಾಕ್‌ನಲ್ಲಿರುವ ಹರಿಹರ ದೀಕ್ಷಿತ್ ಅವರ ತಾಯಿ ಜಯಲಕ್ಷ್ಮಿ ಅವರನ್ನು ನೋಡಿಕೊಳ್ಳಲು ಜ್ಯೋತಿಯನ್ನು ನೇಮಿಸಲಾಗಿತ್ತು. ಆದರೆ, ಅನ್ಯರೊಂದಿಗೆ ಮೊಬೈಲ್‌ನಲ್ಲಿ ಹೆಚ್ಚಾಗಿ ಮಾತನಾಡುತ್ತಿದ್ದ ಜ್ಯೋತಿ ಶುಕ್ರವಾರ ನಾಪತ್ತೆಯಾಗಿದ್ದಾರೆ. ಆಕೆಯನ್ನು ಪತ್ತೆ ಮಾಡಿಕೊಡುವಂತೆ ಮಾತೃಶ್ರೀ ಹೋಂ ನರ್ಸಿಂಗ್ ಕೇರ್‌ನ ಗೀತಾ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಚಹರೆ- 5.3 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಕನ್ನಡ ಮತ್ತು ಇಂಗ್ಲಿಷ್ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ.0821- 2418321, 521 ಸಂಪರ್ಕಿಸಲು ಅಶೋಕಪುರಂ ಠಾಣೆ ಪೊಲೀಸರು ಕೋರಿದ್ದಾರೆ.

ಅಂಬೇಡ್ಕರ್ ದಿನ
ಮೈಸೂರು: ಯುವರಾಜ ಕಾಲೇಜಿನಲ್ಲಿ ಏ.22ರ ಬೆಳಗ್ಗೆ 10.30ಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ ಏರ್ಪಡಿಸಿದ್ದು, ಪ್ರೊ.ಕಾಳೇಗೌಡ ನಾಗವಾರ, ಪ್ರೊ.ಎಂ.ಎಸ್. ಶೇಖರ್, ಪ್ರೊ.ಎಚ್. ನಂಜೇಗೌಡ ಭಾಗವಹಿಸುವರು.

ರಸಪ್ರಶ್ನೆ ಕಾರ್ಯಕ್ರಮ
ಶಿವರಾತ್ರೀಶ್ವರ ಅಕ್ಕನ ಬಳಗ ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ಏ.22ರ ಸಂಜೆ 4ಕ್ಕೆ ವಿಜಯನಗರ 2ನೇ ಹಂತದಲ್ಲಿರುವ ಇಂದಿರಮ್ಮ ನಟರಾಜಪ್ಪ ನಿವಾಸದಲ್ಲಿ ವಿಶೇಷ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಿದ್ದು, ಎಂ.ಎ. ನೀಲಾಂಬಿಕಾ, ಶುಭ ಮಣಿ ಭಾಗವಹಿಸುವರು.

ಕಾರ್ಯಾಗಾರ
ಎನ್‌ಐಇ ಸಿವಿಲ್ ಎಂಜಿನಿಯರಿಂಗ್ ವಿಭಾಗವು ಸಂಸ್ಥೆಯ ಸಭಾಂಗಣದಲ್ಲಿ ಏ.22 ರಂದು ದಿ ಗ್ರೀನ್ ಬಿಲ್ಡಿಂಗ್ ಜರ್ನಿ- ದಿ ಲೆಸೆನ್ ಲರ್ನ್ಟ್ ಕುರಿತ ಕಾರ್ಯಾಗಾರ ಏರ್ಪಡಿಸಿದ್ದು, ಗ್ರೀನ್ ಬಿಲ್ಡಿಂಗ್ ಪ್ರಾಧ್ಯಾಪಕ ಎಂ. ಆನಂದ ಉಪನ್ಯಾಸ ನೀಡುವರು.

ವಿಚಾರ ಸಂಕಿರಣ
ಕುವೆಂಪುನಗರದಲ್ಲಿರುವ ಪಪಿಲ್ ಕನ್ಸೆಲ್ಟಿಂಗ್ ಸರ್ವಿಸಸ್ ಸಂಸ್ಥೆಯಲ್ಲಿ ಏ.22ರ ಮಧ್ಯಾಹ್ನ 3ಕ್ಕೆ ಫ್ಯಾಷನ್ ಡಿಸೈನಿಂಗ್ ಕುರಿತ ವಿಚಾರ ಸಂಕಿರಣ ಏರ್ಪಡಿಸಿದ್ದು, ಮೊ. 89045 40506 ಸಂಪರ್ಕಿಸಬಹುದು.

ತಿರುನಕ್ಷತ್ರಂ
ಬ್ರಹ್ಮತಂತ್ರ ಸ್ವತಂತ್ರ ಪರಕಾಲಸ್ವಾಮಿ ಮಠದಲ್ಲಿ ಏ.23 ರಿಂದ ಮೇ 4 ರವರೆಗೆ ತಿರುನಕ್ಷತ್ರ ಸಮಾರಂಭ ಏರ್ಪಡಿಸಿದ್ದು, ದೇವರಿಗೆ ತಿರುಮಂಜನಂ ಶಾತ್ತುಮುರೈ, ಪವಮಾನ ಹೋಮ, ಕೂಷ್ಮಾಂಡ ಹೋಮ, ಹಯಗ್ರೀವ ಹೋಮ ಇತ್ಯಾದಿ ಕಾರ್ಯಕ್ರಮ ನಡೆಯಲಿವೆ.

ಉಪನಯನ
ಸರಸ್ವತಿಪುರಂನಲ್ಲಿರುವ ಬಬ್ಬೂರು ಕಮ್ಮೆ ಸಂಘದಲ್ಲಿ ಮೇ 2ರ ಬೆಳಗ್ಗೆ 7.30ಕ್ಕೆ ತ್ರಿಮತಸ್ಥ ಬ್ರಾಹ್ಮಣ ವಟುಗಳಿಗೆ ಸಾಮೂಹಿಕ ಉಪನಯನ ಕಾರ್ಯಕ್ರಮ ಏರ್ಪಡಿಸಿದ್ದು, ಆಸಕ್ತರು ಏ.26 ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಮೊ. 97421 64998 ಸಂಪರ್ಕಿಸಬಹುದು.

ಆಸಿಫ್ ನೇಮಕ
ನಗರ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ರಾಜೀವ್‌ನಗರದ ಆಸಿಫ್ ಅಹಮ್ಮದ್ ನೇಮಕವಾಗಿದ್ದಾರೆ.

ಇಂದು ಬಳ್ಳೆ ಜಾತ್ರೆ
ಸರಗೂರು: ಎಚ್.ಡಿ.ಕೋಟೆ ತಾಲೂಕು ಅಂತರಸಂತೆಯ ಬಳ್ಳೆ ಗ್ರಾಮದಲ್ಲಿ ಏ.21 ರಂದು ಶ್ರೀ ಮಾಸ್ತಮ್ಮ ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರೆಯಲ್ಲಿ ಕಾಡಿನ ಹಾಡಿ ಜನಾಂಗ ಹಾಗೂ ಇತರ ಸಮುದಾಯದವರು ಸೇರಿ ಆಚರಿಸಲಾಗುತ್ತದೆ. ಕಬಿನಿ ಅಣೆಕಟ್ಟು ಕಟ್ಟುವಾಗ ಮೂಲಸ್ಥಾನದಿಂದ ಮೈಸೂರು ಮಾನಂದವಾಡಿ ಮುಖ್ಯ ರಸ್ತೆಗೆ ಮಾಸ್ತಮ್ಮನ ದೇವಸ್ಥಾನ ಸ್ಥಳಾಂತರಿಸಲಾಗಿದೆ.

ಆಟೋ ಪಲ್ಟಿ
ಎಚ್.ಡಿ. ಕೋಟೆ: ತಾಲೂಕಿನ ಯರಹಳ್ಳಿ- ಹ್ಯಾಂಡ್ ಪೋಸ್ಟ್‌ನಿಂದ ಪಟ್ಟಣಕ್ಕೆ ಬರುತ್ತಿದ್ದ ಆಟೋ ಪಲ್ಟಿ ಹೊಡೆದ ಪರಿಣಾಮ 8 ಮಂದಿ ತೀವ್ರ ಗಾಯಗೊಂಡಿದ್ದು, ಉಳಿದ 8 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಭಾನುವಾರ ಬೆಳಗ್ಗೆ ಪಟ್ಟಣದಲ್ಲಿ ನಡೆದಿದೆ. ಕಳಸೂರು ಗ್ರಾಮದ ಶ್ರೀನಿವಾಸೇಗೌಡ, ತಾಯಮ್ಮ ಮತ್ತು ರಮೇಶ್, ಕೆಂಚನಹಳ್ಳಿ ಗ್ರಾಮದ ಗಿರೀಶ್, ರಾಜು ಗಾಯಗೊಂಡಿದ್ದು, ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಮೂವರನ್ನು ಕೂಡಲೇ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದ್ದು ಹೆಸರು ತಿಳಿದು ಬಂದಿಲ್ಲ. ಇತರರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ದಾರಿಯಲ್ಲಿ ಅಡ್ಡ ಬಂದ ಹಸುವನ್ನು ತಪ್ಪಿಸಲು ಹೋಗಿ ಆಟೋ ಪಲ್ಟಿ ಹೊಡೆಯಿತು ಎಂದು ಪ್ರತ್ಯಕ್ಷದರ್ಶಿ ಪ್ರಕಾಶ್ ತಿಳಿಸಿದ್ದಾರೆ. ಚಾಲಕ ಈಶ ತಲೆ ಮರೆಸಿಕೊಂಡಿದ್ದಾರೆ. ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.

ಮತಯಂತ್ರವೇ ಮೈಲಿಗೆ!
ಮೈಸೂರು: ಮತಗಟ್ಟೆಗಳಲ್ಲಿ ವಾಸ್ತು, ವಾಮಾಚಾರ, ರಾಹು- ಗುಳಿಗೆಕಾಲದ ಪೂಜೆಗಳು ನಡೆದ ಬಗ್ಗೆ ನೋಡಿದ್ದೇವೆ. ಆದರೆ, ಪೂಜೆಗೂ ಮುನ್ನ ಮತಯಂತ್ರದ ಮೈಲಿಗೆಯನ್ನು ಯಾರೂ ತೊಳೆಯಲೇ ಇಲ್ಲವಲ್ಲ ಎಂದು ಲೇಖಕ ಅಶೋಕಪುರಂ ಸಿದ್ದಸ್ವಾಮಿ ಪ್ರಶ್ನಿಸಿದ್ದಾರೆ. ಮತಯಂತ್ರಗಳು ಗೋಡಾನುಗಳಿಂದ ಮತಗಟ್ಟೆಗೆ ಬರುವವರೆಗೆ ಕೊಳಕರು, ಮಡಿವಂತರು, ಆ ಜಾತಿ, ಈ ಜಾತಿಗೆ ಸೇರಿದ ಅಧಿಕಾರಿಗಳು, ನೌಕರರು ಮುಟ್ಟಿರುತ್ತಾರೆ. ಆದ್ದರಿಂದ ಮತಯಂತ್ರಕ್ಕೆ ಪೂಜೆ ಸಲ್ಲಿಸುವ ಮುನ್ನ ತೊಳೆಯಬೇಕಿತ್ತು. ಹಾಲು- ಹಣ್ಣಿನ ನೈವೇದ್ಯವನ್ನು ಅರ್ಪಿಸಬೇಕಿತ್ತು ಹೀಗೆ ಸಲ್ಲದ ಕೃತ್ಯಗಳನ್ನು ಮಾಡಿ ಪ್ರಚಾರ ಪಡೆಯುವುದು ಅಥವಾ ಮಾಡಿಸಿ ಅದನ್ನು ಸಮರ್ಥಿಸುವ ದೊಡ್ಡ ಬಾಯಿಯನ್ನು ತೆರೆದು ಕೂರುವುದು ಧಾರ್ಮಿಕತೆಯ ವಿಕೃತಿ. ಈ ಪರಿಯ ಕೊಳಕು ಧಾರ್ಮಿಕತೆಯ ಮುಂದೆ ಯಾವೊಂದು ವೈಜ್ಞಾನಿಕ ಆವಿಷ್ಕಾರಗಳು ತಲೆ ಎತ್ತಬಾರದೆಂದು ತಾನೆ ಎಂದು ಜರಿದಿದ್ದಾರೆ.
ಜಿಲ್ಲಾಡಳಿತಕ್ಕೆ ಅಭಿನಂದನೆ: ಜಿಲ್ಲಾದ್ಯಂತ ನಡೆದ ಚುನಾವಣೆಯಲ್ಲಿ ಅಲ್ಲಲ್ಲಿ ಸಣ್ಣ- ಪುಟ್ಟ- ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಶಾಂತಿಯುತ ಮತದಾನ ನಡೆದಿದೆ. ಇದಕ್ಕೆ ಅನುವು ಮಾಡಿಕೊಟ್ಟ ಸಾಂಸ್ಕೃತಿಕ ನಗರಿಯ ಧೀರ ಜಿಲ್ಲಾಧಿಕಾರಿ ಸಿ.ಶಿಖಾ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಅಭಿನಂದಿಸುವುದಾಗಿ ಅಶೋಕಪುರಂ ನಿವಾಸಿ ಸಿ. ಶಿವಣ್ಣ ತಿಳಿಸಿದ್ದಾರೆ.

ದ್ವಿತೀಯ ಪಿಯು ಅರ್ಜಿ ಆಹ್ವಾನ
ಮೈಸೂರು: ಜಗನ್ಮೋಹನ ಅರಮನೆ ಬಳಿ ಇರುವ ಜಿಆರ್‌ಎಸ್ ಅಕಾಡೆಮಿಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸುವ ಖಾಸಗಿ ಅಭ್ಯರ್ಥಿಗಳ ಪರೀಕ್ಷೆಗೆ ಜಿಇಬಿಎ, ಎಚ್‌ಇಜಿಪಿ ಹಾಗೂ ಕನ್ನಡ- ಇಂಗ್ಲಿಷ್ ಭಾಷೆ ವಿಷಯಗಳಿಗೆ ತರಬೇತಿ ನೀಡಲಾಗುತ್ತದೆ. ಪ್ರಥಮ ಪಿಯುಸಿ ಫೇಲ್ ಅಥವಾ ಗೈರು ಹಾಜರಿ, ಐಟಿಐ, ಡಿಪ್ಲೊಮಾದಲ್ಲಿ ಫೇಲ್ ಹಾಗೂ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಬಹುದು. ಆಸಕ್ತರು ಮೊ. 95351 61811 ಸಂಪರ್ಕಿಸಬಹುದು.

ಪ್ರೊ.ಎ.ಎಸ್. ದಾಸನ್ ಮರಳಿ ಗಂಗೋತ್ರಿಗೆ
ಮೈಸೂರು: ನೇಮಕಗೊಂಡ ಕೇಂದ್ರದಲ್ಲಿಯೇ ಕೆಲಸ ನಿರ್ವಹಿಸಬೇಕೆಂಬ ಮೈಸೂರು ವಿವಿ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದ್ದು, ಈ ಆಧಾರದ ಮೇಲೆ ವರ್ಗಾವಣೆಗೊಂಡಿದ್ದ ಸಿಪಿಡಿಪಿಎಸ್ ನಿರ್ದೇಶಕ ಪ್ರೊ.ಎ.ಎಸ್. ದಾಸನ್ ಮಾನಸಗಂಗೋತ್ರಿಗೆ ಮರಳಿದ್ದಾರೆ. ಮಾಸಗಂಗೋತ್ರಿ ಇಂಗ್ಲಿಷ್ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿದ್ದ ಪ್ರೊ.ಎ.ಎಸ್. ದಾಸನ್ ಸಿಪಿಡಿಪಿಎಸ್ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಮೂಲತಃ ಮಂಡ್ಯ ಕೇಂದ್ರದಲ್ಲಿ ನೇಮಕವಾಗಿ ದಾಸನ್ ಅವರನ್ನು ಕುಲಪತಿಯಾಗಿ ಬಂದ ಪ್ರೊ.ಕೆ.ಎಸ್. ರಂಗಪ್ಪ ಮಂಡ್ಯದ ತೂಬಿನಕೆರೆ ಸ್ನಾತಕೋತ್ತರ ಕೇಂದ್ರಕ್ಕೆ ವರ್ಗಾವಣೆ ಮಾಡಿ ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ದಾಸನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣ ವಿಚಾರಣೆ ನಡೆಸಿದ ಹೈಕೋರ್ಟ್ ಮೈಸೂರು ವಿವಿ ಆದೇಶವನ್ನು ರದ್ದುಪಡಿಸಿ ತೀರ್ಪು ನೀಡಿದೆ. ಮೈಸೂರು ವಿವಿಯು ದಾಸನ್ ಅವರನ್ನು 2009ರಲ್ಲಿಯೇ ಮೈಸೂರು ಕೇಂದ್ರಕ್ಕೆ ವರ್ಗಾವಣೆ ಮಾಡಿದೆ. ನೇಮಕಗೊಂಡ ಕೇಂದ್ರದಲ್ಲಿಯೇ ಕೆಲಸ ನಿರ್ವಹಿಸಬೇಕು ಎಂಬ ಮೈಸೂರು ವಿವಿ ವಾದ ತಪ್ಪು ಎಂದು ಅಭಿಪ್ರಾಯಪಟ್ಟಿದೆ.

ಇಂಟೆಲಿಜೆಂಟ್ ಲ್ಯಾಬ್ ಉದ್ಘಾಟನೆ
ಕ.ಪ್ರ.ವಾರ್ತೆ ಮೈಸೂರು ಏ. 20
ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇಂಟೆಲ್ ಇಂಟೆಲಿಜೆಂಟ್ ಲ್ಯಾಬ್ ಉದ್ಘಾಟಿಸಲಾಯಿತು.
ಪ್ರಾಂಶುಪಾಲ ಡಾ.ಬಿ. ಸದಾಶಿವೇಗೌಡ ಮಾತನಾಡಿ, ಮಾಹಿತಿ ವಿಜ್ಞಾನ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪಠ್ಯ ವಿಷಯದಲ್ಲಿ ಇಂಟೆಲ್ ಇಂಟೆಲಿಜೆಂಟ್ ಲ್ಯಾಬ್‌ನ ಅವಶ್ಯಕತೆ ಇತ್ತು. ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಲು ಈ ಪ್ರಯೋಗಾಲಯ ತೆರೆಯಲಾಗಿದೆ ಎಂದರು. ಇಂಟೆಲ್ ವ್ಯವಸ್ಥಾಪಕ ಅತುಲ್ ಬೆಂಗೇರಿ, ಎಫ್‌ಐಸಿಇ ಸಹಾಯಕ ಉಪಾಧ್ಯಕ್ಷ ಕೆವಿಎಸ್ ನಾರಾಯಣ್, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಕಾರ್ಯದರ್ಶಿ ಪಿ.ವಿಶ್ವನಾಥ್, ವಿಭಾಗದ ಮುಖ್ಯಸ್ಥ ಪ್ರೊ.ವಿ. ರವಿಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement