ದಯವಿಟ್ಟು ಸರ ಅಪಹರಣ ತಪ್ಪಿಸಿ
ಕ.ಪ್ರ.ವಾರ್ತೆ ಮೈಸೂರು ಏ. 20
ಸರ ಅಪಹರಣಕಾರರ ಹಾವಳಿ ತಪ್ಪಿಸಿ ಎಂದು ಭಾನುವಾರ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ನಾಗರಿಕರು ಮನವಿ ಮಾಡಿದರು.
ಒಮ್ಮೆ ಸರ ಅಪಹರಣವಾದರೆ 2-3 ದಿನ ಪೊಲೀಸರ ಗಸ್ತು ಇರುತ್ತದೆ. ಪೊಲೀಸರ ಗಸ್ತು ಇಲ್ಲದ ಸಮಯದಲ್ಲಿ ಸರ ಅಪಹರಣಕಾರರು ತಮ್ಮ ಕೈಚಳಕ ತೋರುತ್ತಿದ್ದಾರೆ. ಮೊದಲು ರಸ್ತೆ ಬದಿ ಹೋಗುವಾಗ ಸರ ಅಪಹರಿಸುತ್ತಿದ್ದರು. ಆದರೆ, ಈಗ ಮನೆ ಬಳಿ ರಂಗೋಲಿ ಹಾಕುವಾಗ, ಹೂವು ಕೀಳುವಾಗ, ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವಾಗ, ಬರುವಾಗ ವಿಳಾಸ ಕೇಳುವ ನೆಪದಲ್ಲಿ ಚಿನ್ನದ ಸರ, ಚಿನ್ನದ ಮಾಂಗಲ್ಯ ಸರ ಎಗರಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸೂಕ್ತ ಕ್ರಮ ವಹಿಸುವಂತೆ ಸಾರ್ವಜನಿಕರು ಕೋರಿದರು.
ಪೊಲೀಸರು ಗಸ್ತು ಇದ್ದರೂ ಹೆಚ್ಚಿನ ಸರ ಅಪಹರಣಗಳು ಇಲ್ಲೆ ನಡೆಯುತ್ತಿವೆ ಎಂದು ಕುವೆಂಪುನಗರ ಠಾಣೆಯಲ್ಲಿ ನಡೆದ ಸಭೆಯಲ್ಲಿ ನಾಗರಿಕರೊಬ್ಬರು ಆತಂಕ ವ್ಯಕ್ತಪಡಿಸಿದರು. ಕುವೆಂಪುನಗರ ಠಾಣೆ ವ್ಯಾಪ್ತಿ ಹೆಚ್ಚಾಗಿದ್ದು, ಹೊಸದೊಂದು ಪೊಲೀಸ್ ಠಾಣೆ ಸ್ಥಾಪಿಸಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಬೇಕು ಎಂದು ಸಲಹೆ ನೀಡಿದರು.
ಮಹಿಳೆಯರು ಸಹ ಚಿನ್ನದ ಸರ, ಮಾಂಗಲ್ಯ ಸರವನ್ನು ಸೆರಗಿನಿಂದ ಮುಚ್ಚಿಕೊಂಡರೆ ಸರ ಅಪಹರಣ ಪ್ರಕರಣಗಳನ್ನು ನಿಯಂತ್ರಿಸಬಹುದು ಎಂದು ನಾಗರಿರೊಬ್ಬರು ತಿಳಿಸಿದರು.
ಇದೇ ರೀತಿ ಕೃಷ್ಣರಾಜ, ಲಕ್ಷ್ಮಿಪುರಂ, ಅಶೋಕಪುರಂ, ವಿದ್ಯಾರಣ್ಯಪುರಂ, ಸರಸ್ವತಿಪುರಂ, ನರಸಿಂಹರಾಜ, ಮಂಡಿ, ವಿವಿ ಪುರಂ, ಮೇಟಗಳ್ಳಿ, ಜಯಲಕ್ಷ್ಮಿಪುರಂ, ವಿಜಯನಗರ, ದೇವರಾಜ, ಲಷ್ಕರ್, ನಜರ್‌ಬಾದ್, ಉದಯಗಿರಿ ಪೊಲೀಸ್ ಠಾಣೆಗಳಲ್ಲೂ ಸಾರ್ವಜನಿಕರ ಸಭೆ ನಡೆಯಿತು.