ನಾಳೆಯಿಂದ ಕರಿಯಮ್ಮ ದೊಡ್ಡಮ್ಮದೇವಿ ಸಿಡಿ ಜಾತ್ರೆ
ಕ.ಪ್ರ.ವಾರ್ತೆ ಭೇರ್ಯ ಏ. 20
ಗ್ರಾಮದ ಪ್ರಸಿದ್ಧ ಗ್ರಾಮದೇವತೆ ಶ್ರೀ ಕರಿಯಮ್ಮ ದೊಡ್ಡಮ್ಮ ದೇವಿಯ ಸಿಡಿ ಮಹೋತ್ಸವವು ಏ.22 ಮತ್ತು 23 ರಂದು ವಿಜೃಂಭಣೆಯಿಂದ ನಡೆಯಲಿದೆ.
ಗ್ರಾಮದೇವತೆ ಶ್ರೀಕರಿಯಮ್ಮ ದೊಡ್ಡಮ್ಮ ಸಿಡಿಯನ್ನು ಹಿರಿಯರ ಮಾರ್ಗದರ್ಶನದಂತೆ ಬಾಳೆಗೊನೆ ಕಟ್ಟಿ ಅಲಂಕೃತಗೊಳಿಸಲಾಗುತ್ತದೆ. ರಾತ್ರಿ ವೇಳೆ ಸಾವಿರಾರು ಭಕ್ತರ ಸಮೂಹದಲ್ಲಿ ಕೊಂಬು, ಕಹಳೆ, ಕೀಲು ಕುದುರೆ ಮತ್ತು ಮಂಗಳವಾದ್ಯದೊಂದಿಗೆ ಸುಮಾರು ಒಂದು ಕೀಲೋಮೀಟರ್ ದೂರ ಎಳೆದುಕೊಂಡು ನಂತರ ಶ್ರೀಕರಿಯಮ್ಮ ದೊಡ್ಡಮ್ಮ ದೇವಸ್ಥಾನದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಪೂಜಿಸಲಾಗುತ್ತದೆ.
ಕೋಣನೇ ಬೇಕು: ಗ್ರಾಮದೇವತೆ ಶ್ರೀಕರಿಯಮ್ಮ ದೊಡ್ಡಮ್ಮ ದೇವಿಗೆ ಕೋಣವನ್ನು ಕಂಡರೆ ಬಹಳ ಪ್ರೀತಿಯಂತೆ. ಆದ್ದರಿಂದ ಕೋಣವನ್ನು ಹರಕೆ ಒಪ್ಪಿಸುತ್ತೇನೆ ಎಂದು ಹರಕೆ ಕಟ್ಟಿಕೊಂಡ ಎಷ್ಟೋ ಭಕ್ತರು ಹೇಳುತ್ತಾರೆ. ಆದರೆ ಕಾಲ ಬದಲಾದಂತೆ ಕೋಣವನ್ನು ಹರಕೆ ಒಪ್ಪಿಸಿ ಕಡಿಯುವುದನ್ನು ನೀಷೇಧಿಸಲಾಗಿದ್ದು, ಹರಕೆಯ ಕೋಣವನ್ನು ದೇವಸ್ಥಾನದ ಟ್ರಸ್ಟ್‌ನವರಿಗೆ ನೀಡುತ್ತಾರೆ, ಜಾತ್ರೆ ಕಳೆದ ಮೇಲೆ ಹರಕೆಯ ಕೋಣಗಳನ್ನು ಹರಾಜು ಮಾಡಲಾಗುತ್ತದೆ ಇಲ್ಲಿನ ದೇವಿಯ ವೈಶಿಷ್ಟ್ಯ.
ಬಾಯಿಗೆ ಬೀಗ: ಮಕ್ಕಳಾಗದವರು, ತಾವು ಅಂದುಕೊಂಡಿದ್ದು ನೆರವೇರದಿದ್ದರೆ, ಚಿಕ್ಕಮಕ್ಕಳಿಗೆ ಆರೋಗ್ಯ ಸರಿಯಿಲ್ಲದಿದ್ದಾಗ ಬಾಯಿಗೆ ಬೀಗ ಹಾಕಿಕೊಂಡು ಸಿಡಿ ಎಳೆಯುವಾಗ ನಡೆಯುತ್ತೇನೆ ಎಂದು ಎಷ್ಟೋ ಭಕ್ತರು ಹರಕೆ ಹೊತ್ತಿಕೊಂಡಿರುತ್ತಾರೆ. ಅಂತಹ ಭಕ್ತರು ತಮ್ಮ ಹರಕೆ ತೀರಿಸಲು ಬೆಳಗ್ಗೆಯಿಂದಲೇ ಉಪವಾಸ ಇದ್ದು ಬಾಯಿಗೆ ಬೀಗ ಹಾಕಿಕೊಂಡು ದೇವಿಯ ಹರಕೆ ತೀರಿಸುತ್ತಾರೆ.
ವಿಶೇಷವಾಗಿ ಹೊಸದಾಗಿ ಮದುವೆಯಾದ ನವದಂಪತಿ ಶ್ರಿಕರಿಯಮ್ಮ ದೊಡ್ಡಮ್ಮ ದೇವಿಗೆ ಕೈಮುಗಿದು ತಮ್ಮ ಇಷ್ಟಾರ್ಥ ನೆರವೇರಿಸು ಎಂದು ಬೇಡಿಕೊಳ್ಳುವುದು ವಾಡಿಕೆ.