ಸಚಿವ ಆಂಜನೇಯ ವಿರುದ್ಧ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಏ. 20
ವಾಸ್ತು ನೆಪದಲ್ಲಿ ವಿಧಾನಸೌಧದಲ್ಲಿ ಗೋಡೆ ವಿರೂಪಗೊಳಿಸಿ, ಮಹಾತ್ಮ ಗಾಂಧೀಜಿ ಅವರ ಭಾವಚಿತ್ರವನ್ನು ಕಸದ ಬುಟ್ಟಿಗೆ ಹಾಕಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ವಿರುದ್ಧ ಮೈಸೂರು ಕನ್ನಡ ವೇದಿಕೆಯವರು ನಗರದ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಭಾನುವಾರ ಪ್ರತಿಭಟಿಸಿದರು.
ಒಂದು ಕಡೆ ಸರ್ಕಾರವು ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ತರಲು ಹೊರಟಿದೆ. ಮತ್ತೊಂದೆಡೆ ಸಚಿವ ಆಂಜನೇಯ ಅವರು ವಾಸ್ತು ಹೆಸರಿನಲ್ಲಿ ವಿಧಾನಸೌಧದ ಕೊಠಡಿ ಗೋಡೆ ವಿರೂಪಗೊಳಿಸಿದ್ದಾರೆ. ಗಾಂಧೀಜಿ ಭಾವಚಿತ್ರ ತೆಗೆಸಿ ತಪ್ಪು ಮಾಡಿರುವ ಸಚಿವ ಆಂಜನೇಯ ಅವರು ಕ್ಷಮೆಯಾಚಿಸಬೇಕು. ಅಲ್ಲದೆ, ಗಾಂಧೀಜಿ ಅವರ ಭಾವಚಿತ್ರವನ್ನು ತಮ್ಮ ಕೊಠಡಿಯಲ್ಲಿ ಅಳವಡಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ವೇದಿಕೆಯ ಅಧ್ಯಕ್ಷ ಎಸ್. ಬಾಲಕೃಷ್ಣ, ಮುಖಂಡರಾದ ನಾಲಾಬೀದಿ ರವಿ, ಅರವಿಂದ್, ಕುಮಾರ್, ಭಾನುಮೋಹನ್, ಚಂದ್ರು, ಮನುರಾಜ್, ಗಿರೀಶ್, ನೀಲಕಂಠಸ್ವಾಮಿ, ಶ್ರೀನಿವಾಸ್, ಬಾಬ ಇದ್ದರು.