ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸರ್ಕಾರದ ವಿರುದ್ಧ ಪ್ರಮೋದಾ ದೇವಿ ಅಸಮಾಧಾನ: ದಸರೆಗೆ ಕರಿನೆರಳು

ದಿ. ಶ್ರೀಕಂಠದತ್ತ ನರಸಿಂಹರಾಜ...

Srinivasa Murthy VN
Updated On : 3 Aug 2014, 6:30 am

ಕನ್ನಡಪ್ರಭ ವಾರ್ತೆ ಮೈಸೂರು ಆ.2
ವಿಶ್ವವಿಖ್ಯಾತ ಮೈಸೂರು ದಸರೆ ಸಮೀಪಿಸುತ್ತಿರುವಂತೆ ರಾಜವಂಶಸ್ಥ ದಿ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪತ್ನಿ ಪ್ರಮೋದಾದೇವಿ ಒಡೆಯರ್ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವುದು ದಸರೆಯ ಮೇಲೆ ಕರಿನೆರಳು ಬೀರಿದೆ.
ರಾಜ್ಯ ಸರ್ಕಾರ ಆಸ್ತಿ ವಿವಾದ ಬಗೆಹರಿಸದೇ ಉತ್ತರಾಧಿಕಾರಿ ನೇಮಕ ಮಾಡುವುದು ಕಷ್ಟ ಎನ್ನುವ ಮೂಲಕ ಈ ಬಾರಿಯ ದಸರೆಯಲ್ಲಿ ಎಲ್ಲವೂ ಸುಸೂತ್ರವಾಗಿರುವುದಿಲ್ಲ ಎಂಬ ಎಚ್ಚರಿಕೆ ರವಾನಿಸಿದ್ದಾರೆ. ಮೈಸೂರು ಅರಮನೆ ಸ್ವಾಧೀನ ಕಾಯ್ದೆ 1998 ವಿಶೇಷ ಕಾನೂನನ್ನು ರದ್ದುಗೊಳಿಸಿ, ಅರಮನೆಯನ್ನು ರಾಜವಂಶಸ್ಥರ ಸ್ವಾಧೀನಕ್ಕೆ ಒಪ್ಪಿಸಬೇಕು ಎನ್ನುವುದು ಅವರ ಬೇಡಿಕೆ.
ಅಂಬಾವಿಲಾಸ ಅರಮನೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 38 ವರ್ಷಗಳಿಂದ ಮೈಸೂರು ಅರಮನೆ ಆಸ್ತಿ ವಿವಾದವು ಇತ್ಯರ್ಥವಾಗಿಲ್ಲ. ಅರಮನೆ ಆಸ್ತಿ ವಿವಾದ ಹಿನ್ನೆಲೆಯಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಹಲವಾರು ರೀತಿಯಲ್ಲಿ ಕಿರುಕುಳ ಅನುಭವಿಸಿದರು. ಈಗಲಾದರೂ ಸರ್ಕಾರ ಅರಮನೆ ಆಸ್ತಿ ಹಿಂದಿರುಗಿಸಬೇಕು ಎಂದು ಮನವಿ ಮಾಡಿದರು.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನ ನಂತರ ಉತ್ತರಾಧಿಕಾರಿ ನೇಮಕ ಕಷ್ಟವಾಗಿದೆ. ಇದಕ್ಕೆ ಅರಮನೆ ಆಸ್ತಿ ವಿವಾದವೇ ಮುಖ್ಯ ಕಾರಣ. ಒಡೆಯರ್ ಅನುಭವಿಸಿದ ನೋವನ್ನೇ ಉತ್ತರಾಧಿಕಾರಿ ಹೆಗಲಿಗೂ ಹೊರಿಸಬಾರದು ಎಂಬುದು ನಮ್ಮ ಬಯಕೆ ಎಂದು ತಿಳಿಸಿದರು.
ಒಂದು ಹಂತದಲ್ಲಿ ಪತಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರನ್ನು ನೆನೆದು ಪ್ರಮೋದಾದೇವಿ ಕಣ್ಣೀರು ಹಾಕಿದರು.

ಸರ್ಕಾರದ ಹಸ್ತಕ್ಷೇಪ ಇಲ್ಲ
ಬೆಂಗಳೂರು:
ಒಡೆಯರ್ ಆಸ್ತಿ ಪ್ರಕರಣ ನ್ಯಾಯಾಲಯದಲ್ಲಿದ್ದು, ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಒಡೆಯರ್ ವಂಶದ ರಾಣಿ ಪ್ರಮೋದಾದೇವಿ ಅವರಿಗೆ ಸೇರಿರುವ ಆಸ್ತಿ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಹೀಗಾಗಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ರಾಣಿ ಪ್ರಮೋದಾದೇವಿ ಅವರೊಂದಿಗೆ ಮಾತುಕತೆ ನಡೆಸುತ್ತೇನೆ. ಈ ಬಾರಿಯ ದಸರಾ ಮಹೋತ್ಸವ ಪ್ರತಿ ವರ್ಷದ ಸಂಪ್ರದಾಯದಂತೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳಲಿದ್ದು, ಎಲ್ಲರಿಗೂ ಆಹ್ವಾನ ನೀಡಲಿದ್ದಾರೆ ಎಂದರು.
ಗೃಹ ಸಚಿವ ಕೆ.ಜೆ.ಜಾರ್ಜ್ ಅವರ ಆಪ್ತ ಸಲಹೆಗಾರ ಕೆಂಪಯ್ಯ ನೇಮಕಕ್ಕೆ ಕಾಂಗ್ರೆಸ್ ಶಾಸಕರ ವಿರೋಧವಿಲ್ಲ ಎಂದ ಅವರು, ಹಿಂದಿನ ಸರ್ಕಾರದಲ್ಲೂ ಸಚಿವರು ಇಷ್ಟವಾದವರನ್ನು ಸಲಹೆಗಾರರನ್ನಾಗಿ ಆರಿಸಿಕೊಂಡಿದ್ದರು. ಗೃಹ ಸಚಿವರು ತಮ್ಮ ಇಚ್ಛೆಗೆ ಅನುಸಾರವಾಗಿಯೇ ಸಲಹೆಗಾರರನ್ನು ಆರಿಸಿಕೊಂಡಿದ್ದಾರೆ. ಪಕ್ಷದ ಶಾಸಕರಿಗೆ ಅಸಮಾಧಾನವಿದೆ ಎನ್ನುವುದು ಸತ್ಯಕ್ಕೆ ದೂರವಾದುದು ಎಂದರು.

ಯಾರನ್ನು ಉತ್ತರಾಧಿಕಾರಿಯಾಗಿ ನೇಮಿಸಬೇಕು ಎಂಬುದು ನಮ್ಮ ಮನಸ್ಸಿನಲ್ಲಿದೆ. ಈ ವಿಚಾರವನ್ನು ಈಗಲೇ ಬಹಿರಂಗಪಡಿಸುವುದಿಲ್ಲ. ಅರಮನೆ ಆಸ್ತಿ ವಿವಾದ ಇತ್ಯರ್ಥವಾದ ಬಳಿಕ ಉತ್ತರಾಧಿಕಾರಿ ನೇಮಕ ಸೂಕ್ತ ಎಂಬುದು ನಮ್ಮ ಭಾವನೆ. 400 ವರ್ಷಗಳಿಂದ ನಡೆದು ಬಂದಿರುವ ದಸರಾ ಆಚರಣೆ ಧಾರ್ಮಿಕ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗಲಾಗುವುದು.
-ಪ್ರಮೋದಾದೇವಿ ಒಡೆಯರ್

ಸಾಂಪ್ರದಾಯಿಕ ಆಚರಣೆ ನಿಲ್ಲದು

ದಸರಾ ಹಬ್ಬವನ್ನು ರಾಜಮನೆತನದ ಖಾಸಗಿ ಹಬ್ಬ ಎಂದು ಯಾವತ್ತೂ ಅಂದುಕೊಂಡಿಲ್ಲ. ಜನರಿಗೋಸ್ಕರ ದಸರಾ ನಡೆಯುತ್ತದೆ. ಪತಿ ಒಡೆಯರ್ ಅನುಸರಿಸುತ್ತಿದ್ದ ಧಾರ್ಮಿಕ ವಿಧಿ ವಿಧಾನಗಳನ್ನು ಯಾರಿಂದ ಮಾಡಿಸಬೇಕು ಎಂಬುದು ಗೊತ್ತಾಗುತ್ತಿಲ್ಲ. ಈ ವಿಚಾರವನ್ನು ಕುಟುಂಬದವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಿದೆ. ಹೀಗೆಂದ ಮಾತ್ರಕ್ಕೆ ದಸರಾ ಧಾರ್ಮಿಕ ಆಚರಣೆಯನ್ನು ಯಾವ ಕಾರಣಕ್ಕೂ ಕೈಬಿಡುವುದಿಲ್ಲ ಎಂದು ಪ್ರಮೋದಾದೇವಿ ಸ್ಪಷ್ಟಪಡಿಸಿದರು.

ರಾಜಮನೆತನದ ಸಹಕಾರದಲ್ಲಿ ದಸರಾ

ಅರಮನೆ ಆಸ್ತಿ ವಿಚಾರವಾಗಿ ದಿ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಮ್ಮ ಬಳಿ ಯಾವುದೇ ವಿಷಯ ಪ್ರಸ್ತಾಪಿಸಿರಲಿಲ್ಲ.ಈಗ ಉದ್ಭವಿಸಿರುವ ಆಸ್ತಿ ವಿಚಾರ ನಮ್ಮ ಕಿವಿಗೆ ಬಿದ್ದಿಲ್ಲ. ದಸರಾ ಮಹೋತ್ಸವಕ್ಕೆ ಪ್ರಮೋದಾದೇವಿ ಅವರನ್ನು ಆಹ್ವಾನಿಸಲು ಹೋದಾಗ ವಿಷಯ ಪ್ರಸ್ತಾಪಿಸಿದರೆ ಸರ್ಕಾರ ಪರಿಶೀಲಿಸಲಿದೆ. ಈ ಬಾರಿಯೂ ರಾಜಮನೆತನದ ಸಹಕಾರದೊಂದಿಗೇ ದಸರಾ ಆಚರಿಸಲಾಗುವುದು.
-ವಿ.ಶ್ರೀನಿವಾಸ ಪ್ರಸಾದ್‌ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement