ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಆರೋಗ್ಯ, ಶಿಕ್ಷಣ ಮಕ್ಕಳ ಅಭಿವೃದ್ಧಿಗೆ ತಳಹದಿ

Srinivasa Murthy VN
Updated On : 3 Aug 2014, 11:32 am

ಮೈಸೂರು: ಮಕ್ಕಳ ಪೋಷಣೆ, ಆರೋಗ್ಯ ಮತ್ತು ಶಿಕ್ಷಣದ ಮೇಲೆ ಹೂಡುವ ಬಂಡವಾಳವು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ತಳಹದಿ ನಿರ್ಮಿಸಬಲ್ಲದು ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷ ನ್ಯಾ.ಎನ್.ಕೆ. ಪಾಟೀಲ್ ಹೇಳಿದರು.
ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ವಕೀಲರ ಸಂಘ ಸಂಯುಕ್ತವಾಗಿ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಮಕ್ಕಳ ಅಪೌಷ್ಟಿಕತೆ ತಡೆಗಟ್ಟುವುದು, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕುರಿತು ಅರಿವು- ನೆರವು ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ದೇಶದ ಭವಿಷ್ಯದ ಆಸ್ತಿಯಾದ ಮಕ್ಕಳಿಗೆ ಸೂಕ್ತ ಸಮಯದಲ್ಲಿ ಪೌಷ್ಟಿಕ ಆಹಾರ, ವೈದ್ಯಕೀಯ ಸೇವೆ ನೀಡಿ ಅವರ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮಕ್ಕಳ ಪೋಷಕರು, ಸಮಾಜ, ಸರ್ಕಾರ ಸರಿಯಾಗಿ ಸ್ಪಂದಿಸದಿದ್ದರೆ ಮಗುವಿನ ಭವಿಷ್ಯ ಮೊಟಕುಗೊಳಿಸಿದಂತಾಗುತ್ತದೆ ಎಂದು ತಿಳಿಸಿದರು.
ಮಕ್ಕಳು, ಮಹಿಳೆಯರ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೂರಾರು ಕಾನೂನು ಜಾರಿಗೊಳಿಸಿದ್ದರೂ ಅವರ ಜೀವಿಸುವ ಹಕ್ಕು ಕಸಿಯುವ ಪ್ರಯತ್ನ ನಡೆಯುತ್ತಲೇ ಇದೆ. ಮಕ್ಕಳ ಮತ್ತು ಮಹಿಳೆಯರ ಶೋಷಣೆ, ಮಾನಸಿಕ ಮತ್ತು ದೈಹಿಕ ದೌರ್ಜನ್ಯಗಳು ಈಗಲೂ ನಡೆಯುತ್ತಿರುವುದು ದುರಂತ ಎಂದು ವಿಷಾದಿಸಿದರು.
ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಕೆ.ಎಸ್. ಮುದಗಲ್ ಅಧ್ಯಕ್ಷತೆ ವಹಿಸಿದ್ದರು. ನ್ಯಾ.ಅಶೋಕ ಜಿ. ನಿಜಗಣ್ಣನವರ್, ಪ್ರಭಾರ ಜಿಲ್ಲಾಧಿಕಾರಿ ಎಸ್.ಪಾಲಯ್ಯ, ಎಸ್ಪಿ ಅಭಿನವ್ ಅಶೋಕ್ ಖರೆ, ಜಿಪಂ ಸಿಇಒ ಪಿ.ಎ. ಗೋಪಾಲ್, ವಕೀಲರ ಸಂಘದ ಅಧ್ಯಕ್ಷ ಎಚ್.ವಿ.ಎಸ್. ಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement