ವಿಮಾನ ನಿಲ್ದಾಣಕ್ಕೆ ಹಳಿ, ಹೆದ್ದಾರಿ ಅಡ್ಡಿ
ಮೈಸೂರು: ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಕಾರ್ಯಕ್ಕೆ ಒಂದು ಬದಿಯಲ್ಲಿ ರೈಲ್ವೆ ಹಳಿ ಮತ್ತೊಂದು ಬದಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತೊಡಕಾಗಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಹೇಳಿದರು.
ನಗರದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಎರಡೂ ಮಾರ್ಗಗಳಲ್ಲಿ ಯಾವುದೇ ಒಂದು ಮಾರ್ಗದ ಬದಲಾವಣೆಗೂ ಭೂ ಸ್ವಾಧೀನ ಪ್ರಕ್ರಿಯೆ ಮತ್ತು ಹಣಕಾಸಿನ ನೆರವು ಅಗತ್ಯ. ಅಲ್ಲದೆ ವಿಮಾನ ವಿಸ್ತರಣೆಗೆ ಅಗತ್ಯವಿರುವ ಜಮೀನನ್ನೂ ಸ್ವಾಧೀನಪಡಿಸಿಕೊಳ್ಳಬೇಕು. ಇದಕ್ಕೆ ರಾಜ್ಯ ಸರ್ಕಾರ ಹೆಚ್ಚು ಗಮನ ನೀಡಬೇಕು. ಇನ್ನು ವಿದೇಶದಲ್ಲಿರುವಂತೆ ರಾಷ್ಟ್ರೀಯ ಹೆದ್ದಾರಿಗೆ ಕೆಳ ಸೇತುವೆ ಮಾದರಿ ನಿರ್ಮಿಸುವುದು ವಿಮಾನ ನಿಲ್ದಾಣದ ರಕ್ಷಣೆ ದೃಷ್ಟಿಯಿಂದ ಸರಿಯಲ್ಲ ಎಂದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲ ವರ್ಷಗಳ ಹಿಂದೆ ವಿಮಾನ ಹಾರಾಟ ಕಡಿಮೆ ಆಗಿತ್ತು. ಆದರೆ ಕಳೆದ ಒಂದು ವರ್ಷದಿಂದೀಚೆಗೆ ಸಾಕಷ್ಟು ವಿಮಾನಗಳು ಹಾರಾಟ ನಡೆಸುತ್ತಿವೆ. ಅಲ್ಲಿನ ಸ್ಥಳೀಯ ಸರ್ಕಾರ ಉತ್ತಮ ಸಹಕಾರ ನೀಡುತ್ತಿದೆ. ಈಗ ಅಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಆಗಿದೆ ಎಂದರು.