ಗೂಳಿಹಟ್ಟಿ ಜೆಡಿಎಸ್ ಸೇರ್ಪಡೆ: ದತ್ತ ಸ್ವಾಗತ
ಮೈಸೂರು: ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರು ಸಮಾಜವಾದಿ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಭಾನುವಾರ ಸೇರ್ಪಡೆಯಾದರು.
ಮೈಸೂರಿನಲ್ಲಿ ನಡೆದ ಜೆಡಿಎಸ್ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗೂಳಿಹಟ್ಟಿ ಶೇಖರ್ಗೆ ಪಕ್ಷದ ಬಾವುಟ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವ ಪತ್ರ ನೀಡಿ ಸ್ವಾಗತಿಸಿದರು.
ನಂತರ ಮಾತನಾಡಿದ ಗೂಳಿಹಟ್ಟಿ ಶೇಖರ್, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ರು. 100 ಕೋಟಿ ಕೇಂದ್ರ ಸರ್ಕಾರದಿಂದ ತಂದಿದ್ದರು. ಆ ಹಣದಲ್ಲಿ ರಾಜ್ಯಾದ್ಯಂತ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ್ಯಾಕ್, ಕ್ರೀಡಾ ವಿದ್ಯಾರ್ಥಿ ನಿಲಯ, ಈಜುಕೋಳ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸ ಮಾಡಿರುವುದಾಗಿ ಹೇಳಿದರು.
ಶಾಸಕ ದತ್ತ ಮಾತನಾಡಿ, ಗೂಳಿಹಟ್ಟಿ ನನ್ನ ಶಿಷ್ಯ. ನಿಮಗೂ ಮುಂಚೆ ಮಂತ್ರಿಯಾಗುವುದಾಗಿ ನನ್ನ ಬಳಿ ಹೇಳಿದ್ದ. ಈಗ ಮತ್ತೆ ಜೆಡಿಎಸ್ ಸೇರಿರುವ ಗೂಳಿಹಟ್ಟಿ ಶೇಖರ್ ಪಕ್ಷ ಬಿಟ್ಟು ಎಂದೂ ಹೋಗಬಾರದು ಎಂದು ಕಿವಿಮಾತು ಹೇಳಿದರು.