'ನಂಜನಗೂಡು ಮಾದರಿ ತಾಲೂಕಿಗೆ ಪಣ'
ನಂಜನಗೂಡು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಾವು ಪ್ರತಿನಿಧಿಸುತ್ತಿರುವ ಈ ತಾಲೂಕನ್ನು ರಾಜ್ಯದಲ್ಲಿಯೇ ಮಾದರಿ ತಾಲೂಕಾಗಿ ರೂಪಿಸಿ ತೋರಿಸುತ್ತೇವೆ ಎಂದು ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ರು. 7.46 ಕೋಟಿ ವೆಚ್ಚದ ಹೆರಿಗೆ ಆಸ್ಪತ್ರೆಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಶಾಸಕರಾಗಿದ್ದ ಅವಧಿಯಲ್ಲಿ ತಾಲೂಕನ್ನು ನಿರೀಕ್ಷಿತ ಅಭಿವೃದ್ಧಿ ಮಾಡಲು ಆಗಲಿಲ್ಲ. ಈಗ ಅದನ್ನು ಸೇರಿಸಿ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದರು.
ಶ್ರಮಿಕ ವರ್ಗದ ಶ್ರಮವನ್ನು ಅರ್ಥ ಮಾಡಿಕೊಳ್ಳುವ ಜನಪರ ಸರ್ಕಾರ ತಮ್ಮದು. ಸಾರ್ವಜನಿಕರ ಅರೋಗ್ಯಕ್ಕಾಗಿ ಶ್ರಮಿಸುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತರು ಹಾಗೂ ಗ್ರಾಮ ಸೇವಕರು ಮುಂತಾದ ಶ್ರಮಿಕ ವರ್ಗದವರ ಭತ್ಯೆಯನ್ನು ಹೆಚ್ಚಿಸಬೇಕೆಂಬ ಅರಿವು ಸರ್ಕಾರಕ್ಕೆ ಇದೆ ಎಂದರು.
ಹುಲ್ಲಹಳ್ಳಿ ನಂಜನಗೂಡು ರಸ್ತೆ, ಮೈಸೂರು-ನಂಜನಗೂಡು ಮಧ್ಯದ ಚತುಷ್ಪಥ ರಸ್ತೆ ಎಲ್ಲವೂ ಸಂಸದ ಆರ್. ಧ್ರುವನಾರಾಯಣ ಕೊಡುಗೆ, ರಾಜ್ಯದ 28 ಲೋಕಸಭಾ ಸದಸ್ಯರಲ್ಲಿ ಅತ್ಯಂತ ಹೆಚ್ಚು ಕ್ರಿಯಾಶೀಲರಾಗಿ ಸಮಾಜಮುಖಿಯಾಗಿ ಕೆಲಸ ಮಾಡುವುದರಲ್ಲಿ ಧ್ರುವ ಅವರು ಪ್ರಥಮರಾಗಿದ್ದಾರೆ ಎಂದು ಶ್ಲಾಘಿಸಿದರು. 18 ಕೋಟಿ ರು. ವೆಚ್ಚದಲ್ಲಿ ಪಟ್ಟಣದಲ್ಲಿ ಅಪರೂಪದ ವಿನ್ಯಾಸದ ಮಿನಿವಿಧಾನಸೌಧ ತಾಲೂಕಿನ 124 ಹಳ್ಳಿಗಳಿಗೆ 92 ಕೋಟಿ ರು. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಸೇರಿದಂತೆ 300 ಕೋಟಿ ರು.ಗಳ ಕಾಮಗಾರಿಗೆ ಮಾ. 1 ರಂದು ಮುಖ್ಯಮಂತ್ರಿಗಳು ಚಾಲನೆ ನೀಡುವರು ಎಂದು ತಿಳಿಸಿದರು.
ತಾಯಿ ಹಾಗೂ ಮಗುವಿನ ಅಕಾಲಿಕ ಮರಣ ತಪ್ಪಿಸಲು ಪ್ರಧಾನ ಮಂತ್ರಿ ಮನಮೋಹನ್‌ಸಿಂಗ್ ಚಾಲನೆಗೆ ತಂದಿರುವ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ 30 ಹಾಸಿಗೆಗಳ ಅತ್ಯಾಧುನಿಕ ಈ ಹೆರಿಗೆ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ ಎಂದು ಸಂಸದ ಆರ್. ಧ್ರುವನಾರಾಯಣ್ ಹೇಳಿದರು.
ಹೆರಿಗೆ ಆಸ್ಪತ್ರೆಯ ಸಮಾರಂಭಕ್ಕೆ ಎಲ್ಲರನ್ನು ಸ್ವಾಗತಿಸಿದ ಆರೋಗ್ಯ ಇಲಾಖೆಯ ಅಧಿಕಾರಿ ಡಾ. ಪ್ರಸಾದ್ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಸ್ವಾಗತಿಸದೇ ಇರುವುದನ್ನು ಪ್ರತಿಭಟಿಸಿ ಸಭೆಯಿಂದ ಹೊರಹೋಗಲು ಪ್ರಾರಂಭಿಸಿದರು.ಸಂಸದ ಆರ್. ಧ್ರುವನಾರಾಯಣ್ ಇದನ್ನು ಗಮನಿಸಿ ನಿಮಗಾಗಿಯೇ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಸ್ವಾಗತ ಮಾಡುವವರು ನಿಮ್ಮನ್ನು ಮರೆತು ತಪ್ಪು ಮಾಡಿದ್ದಾರೆ. ದಯವಿಟ್ಟು ನಾನು ಸ್ವಾಗತಿಸುತ್ತೇನೆ ನೀವು ಬನ್ನಿ ಎಂದು ಮನವಿ ಮಾಡಿದಾಗ ಒಳ ಬಂದರು. ಜಿಪಂ ಅಧ್ಯಕ್ಷ ಎಂ. ಮಹದೇವು, ಸದಸ್ಯರಾದ ಡಾ. ಶಿವರಾಂ, ಮಾರುತಿ, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಉಪಾಧ್ಯಕ್ಷ ಚಿಕ್ಕೀರಮ್ಮ ಇದ್ದರು.