ನರ್ಮ್ ಮನೆಗಳ ನಿರ್ಮಾಣಕ್ಕೆ ಆಗ್ರಹ
ಮೈಸೂರು: ಕೊಳಚೆ ಪ್ರದೇಶದಲ್ಲಿ ನಿರ್ಮಾಣ ಮಾಡುವ ನರ್ಮ್ ಯೋಜನೆಯ ಮನೆಗಳನ್ನು ಕೂಡಲೇ ನಿರ್ಮಿಸುವಂತೆ ನಿವಾಸಿಗಳು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಕೊಳಗೇರಿ ನಿವಾಸಿಗಳ ಅಭಿವೃದ್ಧಿ ಸಂಘದ ಮುಖಂಡರು ಮೈಸೂರಿಗೆ ಆಗಮಿಸಿದ್ದ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ಯಾದವಗಿರಿಯ ಕೊಳಚೆ ಪ್ರದೇಶದ ಜಾಗವು ನರ್ಮ್ ಯೋಜನೆಯ ಮನೆಗಳನ್ನು ಕಟ್ಟಲು ಹಸ್ತಾಂತರಿಸಲಾಗಿದ್ದು, ಈವರೆಗೂ ಕಾಮಗಾರಿ ಆರಂಭಿಸಿಲ್ಲ. ಆದ್ದರಿಂದ ಕೂಡಲೇ ಕಾಮಗಾರಿ ಪ್ರಾರಂಭಿಬೇಕು ಎಂದು ಒತ್ತಾಯಿಸಿದರು. ಸ್ಲಂ ನಿವಾಸಿಗಳ ಜೀವನ ನಿರ್ವಹಣೆಗೆ ಅನುಕೂಲವಾಗುವಂತೆ ಸಣ್ಣಪುಟ್ಟ ವ್ಯಾಪಾರ ಮಾಡಲು ನೆರವು ಹಾಗೂ ಅವರ ಮಕ್ಕಳಿಗೆ ಹತ್ತಿರದಲ್ಲಿ ಇರುವ ಶಾಲೆಗಳಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಬೇಕು ಎಂದರು. ಸಂಸದ ಎಚ್. ವಿಶ್ವನಾಥ್, ಶಾಸಕ ವಾಸು, ಸಂಘದ ಅಧ್ಯಕ್ಷ ಜೆ. ರಾಬರ್ಟ್ ಹಾಗೂ ಮುಖಂಡರು ಮತ್ತು ನಿವಾಸಿಗಳು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕ್ರೀಡಾಂಗಣದಲ್ಲಿ ಗ್ರಂಥಾಲಯ: ಆಕ್ಷೇಪ
ಮೈಸೂರು: ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಇರುವ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಂಗಣವನ್ನು ಗ್ರಂಥಾಲಯವಾಗಿ ಪರಿವರ್ತಿಸುತ್ತಿರುವುದಕ್ಕೆ ಕ್ರೀಡಾ ಪಟುಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 10 - 12 ವರ್ಷಗಳಿಂದ 30 ಮಂದಿ ನೋಂದಾಯಿತ ಸದಸ್ಯರು ಬ್ಯಾಡ್ಮಿಂಟನ್ ಆಡುತ್ತಿದ್ದೇವೆ. ಆದರೆ ಫೆ. 7 ರಂದು ಬೆಳಗ್ಗೆ ಆಡವಾಡಲು ಹೋದ ನಮಗೆ ಅವಕಾಶ ನೀಡಲಿಲ್ಲ ಎಂದಿದ್ದಾರೆ. ಗ್ರಂಥಾಲಯವಾಗಿ ಪರಿವರ್ತಿಸುತ್ತಿರುವ ಕಾರಣ ಇನ್ನು ವಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ದೂರಿದರು.