ನವೋದಯ ಪರೀಕ್ಷೆ; ಸಿಆರ್‌ಪಿ ನಯ ವಂಚನೆ
ಧರ್ಮಾಪುರ ನಾರಾಯಣ್
ಕ.ಪ್ರ.ವಾರ್ತೆ ಹುಣಸೂರು ಫೆ. 9
ಹಗಲಿರುಳು ಓದಿ ನೂರಾರು ಕನಸುಗಳನ್ನೊತ್ತು ನವೋದಯ ಪರೀಕ್ಷೆ ಬರೆಯಲು ಪೂರ್ವ ಸಿದ್ದರಾಗಿದ್ದ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಸಿಆರ್‌ಪಿ ಕೆ.ಆರ್. ಮುರುಳಿ ಅವರ ಬೇಜವಾಬ್ದಾರಿಯಿಂದಾಗಿ, ಪರೀಕ್ಷೆ ಬರೆಯುವ ಅವಕಾಶ ವಂಚಿತವಾಗಿ ಆಸೆಗೆ ತಣ್ಣೀರು ಎರಚಿರುವ ಘಟನೆ ತಾಲೂಕಿನ ಕಟ್ಟೆಮಳಲವಾಡಿ ಸರ್ಕಾರಿ ಶಾಲೆಯಲ್ಲಿ ಬೆಳಕಿಗೆ ಬಂದಿದೆ.
ಅಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 17 ವಿದ್ಯಾರ್ಥಿಗಳು ಫೆ. 8 ರಂದು ನಡೆದ ನವೋದಯ ಶಾಲೆಯ ಪ್ರವೇಶ ಪರೀಕ್ಷೆಗೆ ಕುಳಿತುಕೊಳ್ಳಲು ತಮ್ಮ ಶಾಲೆಯ ಮುಖ್ಯೋಪಾಧ್ಯಾಯರಿಗೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಪ. ಜಾತಿ-10, ಪ.ಪಂ-2, ಮುಸ್ಲಿಂ 2 ಹಾಗೂ ಇತರೆ ಮೂವರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು.
ಕಳೆದ ಅ. 2 ರಂದು ಮುಖ್ಯ ಶಿಕ್ಷಕಿ ಶೈಲಾ ಅವರು ಬಂದು 17 ಅರ್ಜಿಗಳನ್ನೂ ಸಿಆರ್‌ಪಿ ಮುರಳಿ ಅವರ ಬಳಿ ನೀಡಿ, ಅರ್ಜಿ ಸ್ವೀಕರಿಸಿರುವುದಕ್ಕೆ ಸಹಿ ಪಡೆದಿದ್ದಾರೆ. ಅ. 30 ರೊಳಗೆ ಸಂಬಂಧಪಟ್ಟ ಸಿಆರ್‌ಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಅಥವಾ ನವೋದಯ ಶಾಲೆಗೆ ಅರ್ಜಿಗಳನ್ನು ನೀಡಬೇಕಿತ್ತು. ಆದರೆ ಒಂದು ತಿಂಗಳ ಅವಕಾಶವಿದ್ದರೂ ಸಿಆರ್‌ಪಿ ಕೆ.ಆರ್. ಮುರುಳಿ ಅವರ ಕರ್ತವ್ಯ ಲೋಪದಿಂದಾಗಿ ಅರ್ಜಿಗಳನ್ನು ನೀಡದೆ 17 ವಿದ್ಯಾರ್ಥಿಗಳು ನವೋದಯ ಶಾಲೆಯ ಪ್ರವೇಶ ಪರೀಕ್ಷೆಯನ್ನೇ ಬರೆಯದಂತಾಗಿದೆ. ಶಾಲೆಯ ಮಕ್ಕಳನ್ನು ಪರೀಕ್ಷೆ ಬರೆಯಲು ಅವಕಾಶ ನೀಡದ ಶಿಕ್ಷಕರಿಗೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.
ಹುಣಸೂರಿನ ಸಂತ ಜೋಸೆಫ್ ಹಿರಿಯ ಪ್ರಥಾಮಿಕ ಶಾಲೆಯಲ್ಲಿ ಶನಿವಾರ ನಡೆದ ನವೋದಯ ಶಾಲೆಯ ಪರೀಕ್ಷೆಗೆ ತಾಲೂಕು ವ್ಯಾಪ್ತಿಯ ಸುಮಾರು 70 ರಿಂದ 80 ಶಾಲೆಗಳಿಂದ 663 ಮಕ್ಕಳು ಭಾಗವಹಿಸಿದ್ದು, ಇದರಲ್ಲಿ ಎಸ್ಸಿ 97, ಎಸ್ಟಿ 106, ಹಿಂದುಳಿದ ವರ್ಗದ ಮಕ್ಕಳು 435, ಸಾಮಾನ್ಯ ವರ್ಗದ ಮಕ್ಕಳು 63, ಪರೀಕ್ಷೆಗೆ ಗೈರುಹಾಜರಾದ ಮಕ್ಕಳು 28. ಕಳೆದ ವಾರ ಬಿಇಒ ಕಚೇರಿಯಲ್ಲಿ ಪ್ರವೇಶ ಪರೀಕ್ಷೆಗಾಗಿ ನಡೆದ ತಾಲೂಕಿನ ಎಲ್ಲ ಸಿಆರ್‌ಪಿಗಳ ಪೂರ್ವಭಾವಿ ಸಭೆಯಲ್ಲಿ ಪರಿಶೀಲನೆ ನಡೆಸುವಾಗ ಕಟ್ಟೆಮಳಲವಾಡಿಯ ಅರ್ಜಿಗಳು ಬಂದಿಲ್ಲದಿರುವುದು ಗಮನಕ್ಕೆ ಬಂತು. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿ ಹೋಗಿತ್ತು. ಸಿಆರ್‌ಪಿಯೊಬ್ಬರ ಕರ್ತವ್ಯ ಲೋಪದಿಂದಾಗಿ ಮಕ್ಕಳು ಪರೀಕ್ಷೆ ಬರೆಯಲಾಗದೇ ಉಳಿಯಬೇಕಾಯಿತು. ವಿಚಿತ್ರವೆಂದರೆ ಸಿಆರ್‌ಪಿ ಬಳಿ ಅರ್ಜಿಗಳು ಇದ್ದಾವೋ ಅಥವಾ ಹಾಳಾಗಿದೆಯೋ ಎನ್ನುವುದೇ ಇನ್ನು ತಿಳಿದು ಬಂದಿಲ್ಲ.
ತಮ್ಮ ಮಗನೂ ಸೇರಿದಂತೆ 17 ಮಕ್ಕಳಿಗೆ ಪರೀಕ್ಷೆಗೆ ಕೂರದಂತೆ ಅನ್ಯಾಯವಾಗಿದ್ದು, ಇಲಾಖೆ ಕೂಡಲೇ ಶಿಕ್ಷಕನ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಮುಂದೆ ಮಕ್ಕಳಿಗೆ ಹೀಗಾಗದಂತೆ ಶಿಕ್ಷಣ ಇಲಾಖೆ ಎಚ್ಚರ ವಹಿಸಬೇಕು ಹಾಗೂ ಸಿಆರ್‌ಪಿಗೆ ಶಿಕ್ಷೆಯಾಗಬೇಕೆಂದು ಕಟ್ಟೆಮಳಲವಾಡಿ ಗ್ರಾಮದ ನೊಂದ ಪೋಷಕ ಪ್ರೇಮಕುಮಾರ್ ಒತ್ತಾಯಿಸಿದ್ದಾರೆ.
ನಾವೆಲ್ಲಾ ವಾಪಸ್ ಬಂದ್ವಿ
ನವೋದಯ ಪರೀಕ್ಷೆ ಇದೆ ಅಂತ ಶನಿವಾರ ತಯಾರಾಗಿ ಶಾಲೆಗೆ ಹೋದೆವು. ಅಲ್ಲಿ ಎಚ್‌ಎಂ ಹಾಲ್ ಟಿಕೆಟ್ ಬಂದಿಲ್ಲ ಪರೀಕ್ಷೆಗೆ ಕೂರ್ಸಲ್ಲಾ ಅಂದ್ರು, ಅದಕ್ಕೆ ನಾವೆಲ್ಲಾ ವಾಪಸ್ ಬಂದ್ವಿ ಎಂದು 5ನೇ ತರಗತಿಯ ನಿರಾಶೆಗೊಳಗಾದ ವಿದ್ಯಾರ್ಥಿಗಳಾದ ಭಾನುಪ್ರಕಾಶ್, ಆಕಾಶ್, ಸ್ನೇಹ ಮಲ್ಲಾಡಿ ತಿಳಿಸಿದರು.
ಶಿಸ್ತು ಕ್ರಮಕ್ಕೆ ಶಿಫಾರಸ್ಸು: ಕಟ್ಟೆಮಳಲವಾಡಿ ಶಾಲೆಯಲ್ಲಿ ಇಂತಹ ಘಟನೆ ನಡೆದಿರುವುದು ಸತ್ಯ. ಈ ಕುರಿತಂತೆ ನಾನು ಪರಿಶೀಲನೆ ನಡೆಸಿದ್ದಾಗ ಸಿಕ್ಕಿಬಿದ್ದ ಸಿಆರ್‌ಪಿ ಮೇಲೆ ಈಗಾಗಲೇ ಡಿಡಿಪಿಐ ಗಮನಕ್ಕೆ ತಂದಿದ್ದು, ಬರುವ ಮಂಗಳವಾರದೊಳಗೆ ಸಿಆರ್‌ಪಿ ಮುರುಳಿ ಅವರನ್ನು ಕರ್ತವ್ಯದಿಂದ ಅಮಾನತುಗೊಳ್ಳಲಿದ್ದಾರೆ. ನಂತರ ಇಲಾಖಾ ತನಿಖೆ ನಡೆಯಲಿದ್ದು, ಕರ್ತವ್ಯ ಲೋಪದ ಆಧಾರದ ಮೇಲೆ ತಾವು ಇಲಾಖಾ ಉನ್ನತಾಧಿಕಾರಿಗಳಿಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದೇನೆಂದು ಹುಣಸೂರು ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್ ತಿಳಿಸಿದರು.
ತಪ್ಪಿತಸ್ಥರನ್ನು ವಜಾಗೊಳಿಸಿ
ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹಾಳು ಮಾಡಿರುವ ಸಿಆರ್‌ಪಿ ಕೆ.ಆರ್. ಮುರುಳಿ ಅವರನ್ನು ಕರ್ತವ್ಯದಿಂದ ವಜಾಗೊಳಿಸಿ, ಕ್ರಿಮಿನಲ್ ಮೊಕದ್ದಮೆ ಹಾಕಬೇಕು ಹಾಗೂ ನವೋದಯ ಪರೀಕ್ಷೆ ಬರೆಯದೆ ವಂಚಿತವಾದ ಮಕ್ಕಳಿಗೆ ಅವಕಾಶ ನೀಡಬೇಕು.
ಕಟ್ಟೆಮಳಲವಾಡಿ ಕಿರಣ್‌ಕುಮಾರ್, ಜಿಲ್ಲಾ ಬಿಜೆಪಿ ಸ್ಲಂ ಮೋರ್ಚಾ ಕಾರ್ಯದರ್ಶಿ
ವರದಿ ಆಧರಿಸಿ ಕ್ರಮ
ಬಿಇಒ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ದ ತಕ್ಷಣವೇ ಶಿಸ್ತು ಕ್ರಮ ಕೈಗೊಂಡು ಅಮಾನತುಗೊಳಿಸಲಾಗುವುದು ಹಾಗೂ ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲಾಗುವುದು.
ಎಚ್.ಆರ್. ಬಸಪ್ಪ, ಶಿಕ್ಷಣ ಇಲಾಖೆ ಉಪ ನಿರ್ದೇಶಕ