'ಪೋಷಕರ ನಿರ್ಲಕ್ಷ್ಯದಿಂದ ಮಕ್ಕಳ ಶಿಕ್ಷಣ-ಭವಿಷ್ಯ ಎರಡೂ ಕುಂಠಿತ'
ಮೈಸೂರು: ಮಕ್ಕಳು ಶಿಕ್ಷಣದಿಂದ ವಂಚಿತರಾಗಲು ಪೋಷಕರ ನಿರ್ಲಕ್ಷ್ಯ ಮುಖ್ಯ ಕಾರಣವಾಗಿದೆ ಎಂದು ಮಕ್ಕಳ ಸಂಪನ್ಮೂಲ ವ್ಯಕ್ತಿ ಈ. ಧನಂಜಯ ಎಂದು ಹೇಳಿದರು.
ರಂಗಾಯಣದ ಶ್ರೀರಂಗದಲ್ಲಿ ಭಾನುವಾರ ನಡೆದ ಚಿನ್ಮಯ ಸೇವಾ ಟ್ರಸ್ಟ್ ಉದ್ಘಾಟನೆ ಮತ್ತು ಮಕ್ಕಳ ಹಕ್ಕುಗಳು ಮತ್ತು ಮಾನವ ಸಾಗಣಿಕೆ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಸಂಶೋಧನಾ ಗುಣವಿರುವ ಮಕ್ಕಳ ಎಲ್ಲಾ ಚಟುವಟಿಕೆಗಳನ್ನು ಪೋಷಕರು ನಿಯಂತ್ರಿಸುತ್ತಿದ್ದಾರೆ ಎಂದು ವಿಷಾದಿಸಿದರು.
ಮಕ್ಕಳು ಶಿಕ್ಷಣದಿಂದ ವಂಚಿತರಾಗಲು ಬಡತನ ಕಾರಣ ಎನ್ನುತ್ತಾರೆ. ಆದರೆ ಶೇ. 1 ರಷ್ಟು ಮಾತ್ರ ಬಡತನ ಕಾರಣವಾಗಿದ್ದು ಎಂದು ಹೇಳಿದರು. ದೇಶದಲ್ಲಿ 11.5 ಕೋಟಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದು, ಬಾಲ ಕಾರ್ಮಿಕರಾಗಿದ್ದಾರೆ. ಬಾಲ ಕಾರ್ಮಿಕ ಪದ್ದತಿಯೇ ಬಡತನ, ಅನಕ್ಷರತೆ, ನಿರುದ್ಯೋಗಕ್ಕೆ ಮೂಲವಾಗಿದ್ದು, ಮಕ್ಕಳಿಗೆ ಶಿಕ್ಷಣ ನೀಡಿದರೆ ಬಾಲಕಾರ್ಮಿಕ
ಪದ್ದತಿಯೊಂದಿಗೆ ದೇಶದ ಎಲ್ಲ ಸಮಸ್ಯೆಗಳು ನಿವಾರಣೆಯಾಗಲಿದೆ ಎಂದು ಅವರು ಹೇಳಿದರು.ಮಕ್ಕಳು ಕೀಟಲೆ, ತುಂಟಾಟ ಮತ್ತು ಪ್ರಶ್ನೆ ಮಾಡುವುದು ಸಹಜ ಗುಜವಾಗಿದೆ. ಮಕ್ಕಳೊಂದಿಗೆ ಸ್ನೇಹದೊಂದಿಗೆ ವರ್ತಿಸುವ ಮೂಲಕ ಮಕ್ಕಳ ಹಕ್ಕುಗಳನ್ನು ಗೌರವಿಸಬೇಕು ಎಂದು ಮನವಿ ಮಾಡಿದರು.
ಸಿಎಸ್ಆರ್ಡಿ ಟ್ರಸ್ಟ್ ಅಧ್ಯಕ್ಷೆ ನಂದಾ ಹಳೆಮನೆ ಚಿನ್ಮಯ ಸೇವಾ ಟ್ರಸ್ಟ್ ಉದ್ಘಾಟಿಸಿದರು. ಜಾನಪದ ವಿದ್ವಾಂಸ ಡಾ. ಹಿ.ಶಿ. ರಾಮಚಂದ್ರೇಗೌಡ, ಶಿಕ್ಷಣ ಇಲಾಖೆಯ ಬಿಆರ್ಸಿ ಕೆ. ಕೃಷ್ಣೇಗೌಡ, ಟ್ರಸ್ಟ್ನ ಹನುಮಂತಪ್ಪ ಚಿನ್ನಪ್ಪ, ಎಂ. ಉಷಾ, ಕುಮಾರಸ್ವಾಮಿ ಇದ್ದರು.