ಮಲ್ಲಿಕಾರ್ಜುನಸ್ವಾಮಿ ಬ್ರಹ್ಮರಥೋತ್ಸವ
ಟಿ. ನರಸೀಪುರ: ತಾಲೂಕಿನ ಮುಡುಕುತೊರೆಯಲ್ಲಿ ಭ್ರಮರಾಂಬಿಕೆ ಮಲ್ಲಿಕಾರ್ಜುನಸ್ವಾಮಿ ಬ್ರಹ್ಮರಥೋತ್ಸವವು ವಿಜೃಂಭಣೆಯಿಂದ ನೆರವೇರಿತು.
ನಾಡಿನ ಸೋಮಶೈಲ ಕ್ಷೇತ್ರವೆಂದೇ ಕರೆಯುವ ಮುಡುಕುತೊರೆಯಲ್ಲಿ ಶಾಲೀವಾಹನ ವಿಜಯನಾಮ ಸಂವತ್ಸರದ ಮಾಘ ಶುದ್ಧ ದಶಮಿಯ ರೋಹಿಣಿ ನಕ್ಷತ್ರ ಶುಭ ದಿವಸವಾದ ಭಾನುವಾರ ಮಧ್ಯಾಹ್ನ ಭ್ರಮರಾಂಬಿಕೆ ಸಮೇತ ಮಲ್ಲಿಕಾರ್ಜುನ ಸ್ವಾಮಿಯ ಬ್ರಹ್ಮರಥೋತ್ಸವವು ವೈಭಯುತವಾಗಿ ಜರುಗಿತು. ಭಕ್ತಿಯಿಂದ ಹಣ್ಣು, ಜವನವನ್ನು ಎಸೆದ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾಗಿದ್ದರು.
ರಥೋತ್ಸವದ ಹಿನ್ನೆಲೆ ಬೆಳಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಅಭಿಷೇಕಗಳು ನಡೆದವು. ಮಂಟಪೋತ್ಸವದ ನಂತರ ಉತ್ಸವ ಮೂರ್ತಿಗಳನ್ನು ರಥದ ಕೇಂದ್ರ ಸ್ಥಾನಕ್ಕೆ ತರಲಾಯಿತು. ಪ್ರದಕ್ಷಿಣೆ ನಂತರ ಉತ್ಸವಮೂರ್ತಿಗಳನ್ನು ರಥದಲ್ಲಿ ಪ್ರತಿಷ್‌ಠಾಪಿಸಿ, ಧಾರ್ಮಿಕ ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು.
ತಲಕಾಡು ವೈದ್ಯನಾಥೇಶ್ವರ ದೇವಾಲಯದ ಪ್ರಧಾನ ಆಗಮಿಕ ಕೃಷ್ಣ ದೀಕ್ಷಿತ್ ನೇತೃತ್ವದ ಆಗಮಿಕರ ತಂಡ ರಥೋತ್ಸವದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಗಣೇಶ ಹಾಗೂ ಮನೋನ್ಮಣಿ ಅಮ್ಮನವರ ಚಿಕ್ಕರಥಗಳು ಮುಂದೆ ಸಾಗಿದ ನಂತರ ಭ್ರಮರಾಂಬಿಕೆ ಮಲ್ಲಿಕಾರ್ಜುನ ಸ್ವಾಮಿಯ ರಥ ಸಾಗಿತ್ತು. ಭಕ್ತಿ ಭಾವದ ಪರವಶರಾಗಿದ್ದ ಭಕ್ತರು ರಥವನ್ನು ಎಳೆದು ಪುನೀತರಾದರು. ಉತ್ಸವಮೂರ್ತಿಗಳಿಗೆ ಪೂಜೆ ಸಲ್ಲಿಸಿ, ದೇವಾಲಯಕ್ಕೆ ತರಲಾಯಿತು.
ವಿಧಾನಪರಿಷತ್ ಸದಸ್ಯ ಆರ್. ಧರ್ಮಸೇನಾ, ಮಾಜಿ ಶಾಸಕ ಎಸ್. ಕೃಷ್ಣಪ್ಪ, ತಹಸೀಲ್ದಾರ್ ಚೌಡಯ್ಯ, ಕಾಂಗ್ರೆಸ್ ಮುಖಂಡ ಸುನಿಲ್ ಬೋಸ್, ತಾಪಂ ಸದಸ್ಯೆ ಮಲ್ಲಾಜಮ್ಮ, ಕಂದಾಯಾಧಿಕಾರಿ ಆನಂದ್‌ರಾವ್ ಭಾಗವಹಿಸಿದ್ದರು.