ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಯುವತಿ ಸೇರಿ, ಮೂವರ ನಾಪತ್ತೆ

Srinivasa Murthy VN
Updated On : 9 Feb 2014, 9:55 am

ಪಿರಿಯಾಪಟ್ಟಣ: ಪ್ರತ್ಯೇಕ ಪ್ರಕರಣದಲ್ಲಿ 14 ವರ್ಷದ ಬಾಲಕ ಸೇರಿದಂತೆ ಮೂವರು ನಾಪತ್ತೆಯಾಗಿದ್ದಾರೆ. ಕೊಡಗಿನ ಬಾಳೆಲೆಗೆ ಅಡಕೆ ವ್ಯಾಪಾರಕ್ಕೆ ಹೋದ ಪಟ್ಟಣದ ಒಳಕೋಟೆ ನಿವಾಸಿ ಜವರಪ್ಪ (46), ತಾಲೂಕಿನ ಹರಿಲಾಪುರ ಗ್ರಾಮದ ನಿವಾಸಿ ಸ್ವಾಮಿ ಎಂಬವರ ಪುತ್ರ ಮಂಜು (14), ಬಹಿರ್ದೆಸೆಗೆ ಹೊರಗೆ ಹೋದ ಪಟ್ಟಣದ ಎಂ.ಡಿ. ಅಬ್ಬಾಸ್‌ಖಾನ್ ಪುತ್ರಿ ರುಕ್ಸಾರ್ (19) ಕಾಣೆಯಾಗಿದ್ದಾರೆ.
ಮೂರು ಕಡೆ ಆಕಸ್ಮಿಕ ಬೆಂಕಿ
ಮೈಸೂರು:  ನಗರದಲ್ಲಿ ಭಾನುವಾರ ಮೂರು ಕಡೆಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿರುವ ಘಟನೆ ನಡೆದಿದೆ. ಚಾಮುಂಡಿ ಬೆಟ್ಟದ ತಪ್ಪಲಿನ ಉತ್ತನಹಳ್ಳಿ ರಸ್ತೆ, ನಗರದ ದಿವಾನ್ಸ್ ರಸ್ತೆಯ ಹಾಸಿಗೆ ಅಂಗಡಿ ಹಾಗೂ ಮಾನಸಗಂಗೋತ್ರಿಯ ಬಯಲು ರಂಗಮಂದಿರ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಧಾವಿಸಿದ್ದ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ (ಉತ್ತನಹಳ್ಳಿ ಕಡೆ) ಕಾಣಿಸಿಕೊಂಡ ಬೆಂಕಿಯಿಂದಾಗ ಅರಣ್ಯದ ಕೆಲವು ಭಾಗವು ಸುಟ್ಟು ಕರಕಲಾಗಿದೆ.

ಮಾನಸಿಕ ಅಸ್ವಸ್ಥನ ರಕ್ಷಣೆಗೆ ಮನವಿ
ಮೈಸೂರು: ಮಹಾತ್ಮಗಾಂಧಿ ರಸ್ತೆಯ ಹಲವೆಡೆ ಅನೇಕ ದಿನಗಳಿಂದ ಮಾನಸಿಕ ಅಸ್ವಸ್ಥನೊಬ್ಬ ಕನಿಷ್ಠ ವಸ್ತ್ರದಲ್ಲಿ ತಿರುಗಾಡುತ್ತಿದ್ದು, ಆತನಿಗೆ ರಕ್ಷಣೆ ನೀಡುವಂತೆ ಸಿಕ್ರಂ ಜಿಲ್ಲಾ ಮಾನವ ಹಕ್ಕುಗಳ ಕೇಂದ್ರದ ಸಂಚಾಲಕ ಪ್ರಸನ್ನ ಕೋರಿದ್ದಾರೆ. 35 ರಿಂದ 40ರ ಪ್ರಾಯದ ವ್ಯಕ್ತಿಯು ಜನಜಂಗುಳಿಯಲ್ಲಿ ತಿರುಗಾಡುತ್ತಿದ್ದು, ಬಿಸಿಲು, ಚಳಿ, ಗಾಳಿ ಎನ್ನದೆ ದಿನದೂಡುತ್ತಿದ್ದಾನೆ. ಆತನಿಗೆ ಮಾನವೀಯ ನೆಲೆಯಲ್ಲಿ ರಕ್ಷಣೆ ಜತೆಗೆ, ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆ ಕೊಡಿಸುವಂತೆ ಕೋರಿದ್ದಾರೆ. ಈ ಮನವಿಯನ್ನು ಆಧರಿಸಿ ಡಿಸಿ ಸಿ. ಶಿಖಾ ಮಾನಸಿಕ ಅಸ್ವಸ್ಥನಿಗೆ ನೆರವು ನೀಡುವ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪಡಿತರ ಅಕ್ಕಿ ಕಾಳಸಂತೆಗೆ: ದೂರು
ಕೆ.ಆರ್. ನಗರ: ತಾಲೂಕಿನ ಪಡಿತರದಾರರಿಗೆ ವಿತರಣೆ ಮಾಡಬೇಕಾದ ಅಕ್ಕಿ ಲೋಡ್ ಗಟ್ಟಲೆ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದ್ದರೂ ತಾಲೂಕು ಆಡಳಿತ ಕಣ್ಣುಮುಚ್ಚಿಕೊಂಡು ಕುಳಿತಿದ್ದು, ಜಿಲ್ಲಾಧಿಕಾರಿಗಳು ಸಂಬಂಧಪಟ್ಟವರ ಮೇಲೆ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ಶಹೀದ್ ಟಿಪ್ಪು ಸುಲ್ತಾನ್ ಟ್ರಸ್ಟ್ ಅಧ್ಯಕ್ಷ ಸೈಯದ್ ಜಾಬೀರ್ ಒತ್ತಾಯಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೆ ಉದಾಸೀನದ ಉತ್ತರ ನೀಡುತ್ತಿದ್ದು, ಕಾಳ ಸಂತೆಯ ವ್ಯವಹಾರದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆಂಬ ಅನುಮಾನ ಇದ್ದು, ಇದಕ್ಕೆ ಸಂಬಂಧಪಟ್ಟ ಸೂಕ್ತ ದಾಖಲಾತಿಗಳೊಂದಿಗೆ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು ಎಂದಿದ್ದಾರೆ. ಜಿಲ್ಲಾಡಳಿತ ಅಕ್ರಮದ ಬಗ್ಗೆ ಕ್ರಮಕೈಗೊಳ್ಳದೆ ನಿಷ್ಕ್ರಿಯವಾದರೆ ಮುಂದಿನ ದಿನಗಳಲ್ಲಿ ಟ್ರಸ್ಟ್ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.

ಟ್ರ್ಯಾಕ್ಟರ್ ಪಲ್ಟಿ; ಚಾಲಕ ಸಾವು
ಸಾಲಿಗ್ರಾಮ: ಮರದ ತುಂಡುಗಳನ್ನು ಹೊತ್ತು ಬರುತ್ತಿದ್ದ ಟ್ರ್ಯಾಕ್ಟರ್ ಉರುಳಿ ಚಾಲಕ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಮಾದಾಪುರ ಬಳಿ  ನಡೆದಿದೆ.  ಕೆ.ಆರ್. ನಗರ ತಾಲೂಕಿನ ದೆಗ್ಗನಹಳ್ಳಿ ಗ್ರಾಮದ ವಿಷಕಂಠ ಎಂಬವರ ಮಗ ಲೋಕೇಶ್ (26) ಮೃತಪಟ್ಟ ದುರ್ದೈವಿ. ಮೃತರಿಗೆ ಪತ್ನಿ, ಒಬ್ಬ ಪುತ್ರ ಮತ್ತು ಒಬ್ಬ  ಪುತ್ರಿ ಇದ್ದಾರೆ. ಇವರು ತಮ್ಮ ಗ್ರಾಮದವರ ಟ್ರ್ಯಾಕ್ಟರ್‌ನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದು ಅದರಂತೆ ಹೊಳೆನರಸೀಪುರ ತಾಲೂಕಿನ ಮಾಳನಾಯಕನಹಳ್ಳಿ ಗ್ರಾಮದಿಂದ ಮರದ ದಿಮ್ಮಿಗಳನ್ನು ತುಂಬಿಕೊಂಡು ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮದ ಸಾಮಿಲ್‌ಗೆ ಬರುತ್ತಿರುವಾಗ ಈ ದುರ್ಘಟನೆ ನಡೆದಿದೆ. ಈ ಸಂಬಂಧ ಸಾಲಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement