ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರೈತರ ಭದ್ರತೆಗೆ ಕಾಯ್ದೆ ಅಗತ್ಯ: ಪುಟ್ಟಣ್ಣಯ್ಯ

Srinivasa Murthy VN
Updated On : 9 Feb 2014, 9:54 am

ಕ.ಪ್ರ.ವಾರ್ತೆ ಮೈಸೂರು ಫೆ. 9
ದೇಶದ ಅನ್ನದಾತ ರೈತರ ಭದ್ರತೆಗೆ ಸರ್ಕಾರಗಳು ಸೂಕ್ತ ಕಾಯ್ದೆ ತರಬೇಕು ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ವರಿಷ್ಟ ಕೆ.ಎಸ್. ಪುಟ್ಟಣ್ಣಯ್ಯ ಆಗ್ರಹಿಸಿದರು.
ಮೈಸೂರು ಲಯನ್ಸ್ ಸಂಸ್ಥೆಯ ಪ್ರಾಂತ್ಯ 7 ರ ವತಿಯಿಂದ ಮಾನಸಗಂಗೋತ್ರಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರಾಂತ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಯಾರು ಚರ್ಚಿಸುತ್ತಿಲ್ಲ: ಕೇಂದ್ರ ಸರ್ಕಾರ ಆಹಾರ ಭದ್ರತೆಗೆ ಮುಂದಾಗಿದೆ, ಆದರೆ ಆಹಾರ ಉತ್ಪಾದಿಸುವ ರೈತರ ಭದ್ರತೆಗೆ ಮುಂದಾಗದಿರುವುದು ದುರಂತ. ದೇಶದಲ್ಲಿ 3 ಲಕ್ಷ ಮಂದಿ ರೈತರು ಆತ್ಮಹತ್ಯೆಗೆ ಒಳಗಾಗಿದ್ದರೆ, ಕರ್ನಾಟಕದಲ್ಲಿ 56 ಸಾವಿರ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಬಗ್ಗೆ ವಿಧಾನಮಂಡಲ ಹಾಗೂ ಸಂಸತ್ತಿನಲ್ಲಿ ಯಾರು ಚರ್ಚಿಸುತ್ತಿಲ್ಲ. ಆದ್ದರಿಂದ ರೈತರ ಭದ್ರತೆಗೂ ಕಾಯ್ದೆ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.
ಉದ್ಯೋಗ ಸೃಷ್ಟಿ ಸಾಧ್ಯವಿದೆ: ಭಾರತದಲ್ಲಿ 250 ಮಿಲಿಯನ್ ಟನ್ ಆಹಾರವನ್ನು ಉತ್ಪಾದಿಸುತ್ತಿರುವ ರೈತರು 120 ಕೋಟಿ ಜನರಿಗೆ ಆಹಾರ ಉತ್ಪಾದಿಸುತ್ತಿದ್ದಾರೆ. ರಾಜ್ಯದಲ್ಲಿ 150 ಲಕ್ಷ ಟನ್ ಆಹಾರ ಉತ್ಪಾದನೆಯಾಗುತ್ತಿದ್ದು ಕೃಷಿ ಕ್ಷೇತ್ರದಲ್ಲಿ 30 ಕೋಟಿ ಉದ್ಯೋಗ ಸೃಷ್ಟಿ ಸಾಧ್ಯವಿದೆ. ಬೆಂಗಳೂರು ನಗರ ಒಂದರಲ್ಲಿಯೇ 1 ಕೋಟಿ ಜನಸಂಖ್ಯೆಗೆ ಆಹಾರ ಒದಗಿಸಬೇಕು. ಇದು ಎಲ್ಲಿಂದ ಬರಬೇಕು. ರೈತರು ಬೆಳೆಯದೆ ಹೋದರೆ ಆಹಾರ ಸಮಸ್ಯೆಯಿಂದ ಜನರು ಪರಿತಪಿಸಬೇಕಾಗುತ್ತದೆ ಎಂದರು.  
ಸರ್ಕಾರಿ ನೌಕರರಿಗೆ ವೇತನ ಆಯೋಗ ರಚಿಸಲಾಗಿದೆ. ಆದರೆ ಅದರಂತೆಯೇ ರೈತರು, ಕಾರ್ಮಿಕರು ಹಾಗೂ ಕೂಲಿಕಾರರಿಗೆ ಯಾವುದೇ ಆಯೋಗ ನೇಮಿಸಬಾರದೆ ಎಂದ ಅವರು, ಎಲ್ಲಾ ಉದ್ಯೋಗಕ್ಕೂ ಸಮಾನ ಗೌರವ ದೊರಕಬೇಕು. ಇಂದು ರೈತರು ಹಳ್ಳಿಗಳನ್ನು ಬಿಟ್ಟು ವಲಸೆ ಹೋಗುತ್ತಿದ್ದಾರೆ.
ಕೃಷಿ ಸಂಸ್ಕೃತಿ ಕುಸಿಯುತ್ತಿದೆ. ರೈತರ ಬದುಕು ಅತಂತ್ರ ಸ್ಥಿತಿಗೆ ತಲುಪಿದ್ದು, ಕೃಷಿಕರ ಸರ್ವತೋಮುಖ ಅಭಿವೃದ್ಧಿಗೆ  ಸರ್ಕಾರ ಗಮನ ಹರಿಸಬೇಕು. ಹಾಗೂ ಲಯನ್ಸ್ ಸಂಸ್ಥೆಯೂ ಗ್ರಾಮೀಣ ಭಾಗದಲ್ಲಿ ಹೆಚ್ಚು ಸೇವಾ ಕಾರ್ಯ ಹಮ್ಮಿಕೊಳ್ಳಬೇಕು ಎಂದರು. ಸುಮಾರು ರು. 4 ಲಕ್ಷ ಮೌಲ್ಯದ ಸಾಧನ ಸಲಕರಣೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಬಿಳಿಗಿರಿರಂಗನಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಸಂಸ್ಥಾಪಕ ಡಾ. ಎಚ್. ಸುದರ್ಶನ್, ಲಯನ್ಸ್ ಪ್ರಾಂತೀಯ ಅಧ್ಯಕ್ಷ ವಿ. ನಾಗರಾಜ್ ಬೈರಿ, ಜಿಲ್ಲಾ ರಾಜ್ಯಪಾಲ ಪ್ರೊ. ಟಿ.ಜೆ. ರಾಮಮೂರ್ತಿ,
ಸಂಸ್ಥೆ ಕಾರ್ಯದರ್ಶಿ ಪಿ. ರಮೇಶ್, ಖಜಾಂಚಿ ಧರ್ಮರಾಜು, ಲಯನ್‌ಗಳಾದ ವಿ. ವೆಂಕಟೇಶ್, ಎಂ.ಎನ್. ಜೈಪ್ರಕಾಶ್, ಶಾಲಿನಿ ನಾಗರಾಜ್, ಡಾ. ನಿರ್ಮಲಾ ಇದ್ದರು. ಇದಕ್ಕೂ ಮುನ್ನ ಕರಾಟೆ ಪ್ರದರ್ಶನ ನಡೆಯಿತು. ನಂತರ ಮಿಮಿಕ್ರಿ ದಯಾನಂದ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement