ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಾಲುಕೊಪ್ಪಲು; ಸಮಸ್ಯೆಗಳು ಸಾಲು ಸಾಲು

Srinivasa Murthy VN
Updated On : 9 Feb 2014, 9:53 am

-ಕೆ.ಟಿ. ಮೋಹನಕುಮಾರ್
ಸಾಲಿಗ್ರಾಮ: ಸರ್ಕಾರವು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ಪ್ರತಿ ವರ್ಷವು ವಿವಿಧ ಇಲಾಖೆಗಳ ಅಡಿಯಲ್ಲಿ ನೂರಾರು ಯೋಜನೆಗಳ ಮೂಲಕ ಕೋಟ್ಯಂತರ ರು. ಗಳನ್ನು ವ್ಯಯ ಮಾಡುತ್ತಿದೆ. ಆದರೂ ಅದರ ನಡುವೆಯೂ ಕೂಡ ಕನಿಷ್ಠ ಮೂಲಭೂತ ಸೌಲಭ್ಯಗಳು ಇಲ್ಲದ ಗ್ರಾಮವೊಂದು ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮ ಸಮೀಪದಲ್ಲಿದೆ.
ಇಂತಹ ಹೀನಾಯ ಸ್ಥಿತಿಯಲ್ಲಿರುವ ಗ್ರಾಮವೇ ಸಾಲುಕೊಪ್ಪಲು. ಈ ಗ್ರಾಮದಲ್ಲಿ ಒಂದರ ಹಿಂದೆ ಒಂದಂತೆ ಸಾಲು ಸಾಲು ಸಮಸ್ಯೆಗಳು ಕಂಡುಬರುತ್ತಿವೆ.
ಗ್ರಾಮದಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳಿದ್ದು, ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದ್ದರೂ ಮಾತ್ರ ಅಭಿವೃದ್ಧಿ ಕಾರ್ಯಗಳು ಎಲ್ಲೂ ಕೂಡ ಕಣ್ಣಿಗೆ ಕಾಣುವಂತಿಲ್ಲ. ಈ ಗ್ರಾಮದ ಜನತೆಯು ಸಾರ್ವತ್ರಿಕ ಚುನಾವಣೆಗಳಲ್ಲಿ ತಮ್ಮ ಹಕ್ಕನ್ನು ಚಲಾಯಿಸಲು ತಮ್ಮ ಗ್ರಾಮದಲ್ಲಿ ಮತಗಟ್ಟೆ ಇಲ್ಲದ ಕಾರಣ ಬಹುದೂರ ಇರುವ ದೊಡ್ಡಕೊಪ್ಪಲು ಗ್ರಾಮಕ್ಕೆ ತೆರಳಿ ತಮ್ಮ ಮತವನ್ನು ಚಲಾಯಿಸುತ್ತಿದ್ದಾರೆ. ಪ್ರತಿ ಮಾಹೆಯು ತಮ್ಮ ಪಡಿತರವನ್ನು ಪಡೆಯಲು ಪಕ್ಕದ ಗ್ರಾಮವಾದ ಮುಂಡೂರಿಗೆ ತೆರಳಿ ತರುತ್ತಿರುವ ದೃಶ್ಯವು ನಿತ್ಯ ಕಂಡುಬರುತ್ತಿದೆ.
ಗ್ರಾಮದಲ್ಲಿ ಚರಂಡಿಗಳಿಲ್ಲದೇ ತ್ಯಾಜ್ಯ ನೀರು ರಸ್ತೆಯಲ್ಲೇ ಹರಿಯುತ್ತಿದ್ದು ಇದರಿಂದ ಇಡೀ ಗ್ರಾಮವು ಅನೈರ್ಮಲ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಗ್ರಾಮದ ರಸ್ತೆಗಳು ಕಿರಿದಾಗಿದ್ದು, ಈ ರಸ್ತೆಗಳ ಇಕ್ಕೆಲಗಳಲ್ಲಿ ರಸ್ತೆಗೆ ಹೊಂದಿಕೊಂಡಂತೆ ವಿದ್ಯುತ್ ಕಂಬಗಳನ್ನು ಅಳವಡಿಸಿದ್ದು, ಇದರಿಂದ ಈ ಮಾರ್ಗದಲ್ಲಿ ವಾಹನಗಳು ಸಂಚರಿಸಲು ಕಷ್ಟಕರವಾಗಿದ್ದರೂ ಇದರತ್ತ ಯಾರೂ ಕೂಡ ತಲೆಹಾಕಿಲ್ಲ. ಈ ಎಲ್ಲ ಸಮಸ್ಯೆಗಳಿದ್ದರೂ ಮಹಿಳೆಯರು ಮಾತ್ರ ಕುಡಿಯುವ ನೀರಿಗಾಗಿ ಪರಿತಪಿಸುವ ಸ್ಥಿತಿಯು ಎಡೆಬಿಡದೆ ಕಾಡುತ್ತಿದೆ. ನಿತ್ಯ ತಮಗೆ ಕುಡಿಯುವ ನೀರು ಸಿಗದೆ 4 ಅಥವಾ 5 ದಿನಕ್ಕೊಮ್ಮೆ ನೀರು ಬರುತ್ತದೆ. ಇದರಿಂದ ಮುಕ್ತಿ ಕೊಡಿಸಿ ಎಂಬುದು ಮಹಿಳೆಯರ ಒಕ್ಕೊರಲ ಮನವಿಯಾಗಿದೆ.
ಮತಗಟ್ಟೆಯೂ ಇಲ್ಲ: ಗ್ರಾಮಕ್ಕೆ ಚರಂಡಿ ವ್ಯವಸ್ಥೆಯನ್ನು ಮಾಡಿಕೊಡಬೇಕು, ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡಬೇಕು, ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಬೇಕು. ರಸ್ತೆಯ ಇಕ್ಕೆಲಗಳಲ್ಲಿರುವ ವಿದ್ಯುತ್ ಕಂಬಗಳ ಸ್ಥಳ ಬದಲಾವಣೆ ಮಾಡಬೇಕು, ಮತದಾನಕ್ಕೆ ಮತಗಟ್ಟೆಯನ್ನು ಗ್ರಾಮದಲ್ಲೇ ತೆರೆಯಬೇಕು, ಪಡಿತರ ವಿತರಣಾ ಅಂಗಡಿಯನ್ನು ಗ್ರಾಮದಲ್ಲೇ ಆರಂಭಿಸಬೇಕು ಮತ್ತು ಉದ್ಯೋಗ ಖಾತ್ರಿ ಯೋಜನೆಯನ್ನು ಗ್ರಾಮದಲ್ಲಿ ಪ್ರಾಮಾಣಿಕವಾಗಿ ಹಾಗೂ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಶ್ರಮಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement