'ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಸಾಮಾಜಿಕ ನ್ಯಾಯ'
ಮೈಸೂರು: ಅಹಿಂದ ಕಲ್ಪನೆ, ಜಾತಿವಾರು ಜನಗಣತಿ ಆಗ್ರಹಿಸಿದ್ದು, ಸ್ಥಳೀಯ ಸಂಸ್ಥೆಗಳಲ್ಲಿ ಸಾಮಾಜಿಕ ನ್ಯಾಯ ಒದಗಿಸಿದ್ದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಜೆಡಿಎಸ್ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಅವರು ಮಾತನಾಡಿದರು.
1974 ರಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದರು. ಆಗಲೇ ಜಾತಿವಾರು ಜನಗಣತಿ ನಡೆಸಬೇಕೆಂದು ದೇವೇಗೌಡರು ಆಗ್ರಹಿಸಿದ್ದರು. ದೇವೇಗೌಡರು ಅಹಿಂದ ನಿಜವಾದ ಹರಿಕಾರ. ಈ ಬಗ್ಗೆ ದಾಖಲೆ ನಮ್ಮ ಬಳಿಯಿದೆ. ಜಾತಿವಾರು ಜನಗಣತಿ ಸಮೀಕ್ಷೆ ನಾನೇ ಮಾಡಿಸಿದ್ದು ಎನ್ನುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದನ್ನು ಕಳುಹಿಸುವುದಾಗಿ ಅವರು ತಿಳಿಸಿದರು.
1991 ರಲ್ಲಿ ಮಹಾರಾಜ ಕಾಲೇಜು ಮೈದಾನದಿಂದ ದೇವೇಗೌಡರು ರೈತರನ್ನು ಸೇರಿಸಿ ಕಾವೇರಿ ಹೋರಾಟ ಆರಂಭಿಸಿದರು. ಈಗ ಹಿಂದುಳಿದ ವರ್ಗಗಳ ಸಮಾವೇಶ ಮಾಡಿದ್ದಾರೆ. ಮುಂದಿನದು ಪರದೆಯ ಮೇಲೆ ನೋಡಿ. ಸ್ಥಳೀಯ ಸಂಸ್ಥೆಗಳಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ಮೀಸಲಾತಿ ತಂದಿದ್ದು ಕಾಂಗ್ರಸ್ ಅಲ್ಲ, ಜೆಡಿಎಸ್ ಪಕ್ಷ. 2005 ರಲ್ಲಿ ನಮ್ಮ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರೇ ಈ ಹೇಳಿಕೆ ನೀಡಿದ್ದಾರೆ ಎಂದರು.
ವಿಧಾನಪರಿಷತ್ ಸದಸ್ಯ ಎಂ.ಸಿ. ನಾಣಯ್ಯ ಮಾತನಾಡಿ, ಬಿಜೆಪಿಯಿಂದ ನರೇಂದ್ರ ಮೋದಿ, ಕಾಂಗ್ರೆಸ್ನಿಂದ ರಾಹುಲ್ ಗಾಂಧಿ ಪ್ರಧಾನಿ ಆಗುತ್ತಾರೆಂದು ಹೇಳಿಕೊಳ್ಳುತ್ತಿದ್ದಾರೆ. ಇದಕ್ಕೆ ಪರ್ಯಾಯವಾಗಿ ದೇಶದ ಜೆಡಿಎಸ್ ಸೇರಿದಂತೆ 12-13 ಪ್ರಾದೇಶಿಕ ಪಕ್ಷಗಳು ಸೇರಿಕೊಂಡು ತೃತೀಯ ರಂಗ ರಚಿಸಲಾಗಿದೆ ಎಂದು ಅವರು ಹೇಳಿದರು.
ಶಾಸಕ ಎಸ್. ಚಿಕ್ಕಮಾದು ಮಾತನಾಡಿ, ಅಹಿಂದ ಉದ್ದಾರಕ್ಕೆ ಜೆಡಿಎಸ್ ಅನಿವಾರ್ಯವಾಗಿ ಬೆಳೆಯಬೇಕು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೆಂಗಲ್ ಹನುಮಂತಯ್ಯ ಅವರು ಸ್ಥಾಪಿಸಿದ್ದ ಪ್ರಾದೇಶಿದ ಪಕ್ಷಗಳು ಉಳಿಯಲಿಲ್ಲ. ದೇವೇಗೌಡರು ಸ್ಥಾಪಿಸದ ಜೆಡಿಎಸ್ ಮಾತ್ರ ಉಳಿದಿದೆ ಎಂದರು. ಶಾಸಕ ಮಧು ಬಂಗಾರಪ್ಪ ಮಾತನಾಡಿ, ಮಾಜಿ ಸಚಿವ ಬಂಡೆಪ್ಪ ಕಾಶಂಪುರ್ ಮತ್ತಿತರರು ಮಾತನಾಡಿದರು.
ಪ್ರಜ್ವಲ್ ಸಂಚಲನ: ಹಾಸನದಿಂದ ಪ್ರಜ್ವಲ್ ರೇವಣ್ಣ ನೂರಾರು ಕಾರ್ಯಕರ್ತರೊಂದಿಗೆ ಸಮಾವೇಶಕ್ಕೆ ಆಗಮಿಸುತ್ತಿದ್ದಂತೆ ಸಂಚಲನ ಮೂಡಿತು.ಸಭಿಕರ ಸಾಲಿನಲ್ಲಿ ಕುಳಿತ ಭಾಷಣ ಕೇಳಿದ ಅವರು, ನಂತರ ತಮ್ಮ ಬೆಂಬಲಿಗರೊಂದಿಗೆ ತೆರಳಿ ದೇವೇಗೌಡರು, ಕುಮಾರಸ್ವಾಮಿ ಅವರಿಗೆ ಮಾಲಾರ್ಪಣೆ ಮಾಡಿದರು. ಪ್ರಜ್ವಲ್ ಬಿಇ ಓದಿದ್ದಾನೆ. ಎಂ.ಟೆಕ್ ಮಾಡು ಎಂದಿದ್ದೇಕೆ ಆಯ್ತು ಎಂದಿದ್ದ. ಈಗ ಚುನಾವಣೆಯಲ್ಲಿ ನಿಮ್ಮನ್ನು ಗೆಲ್ಲಿಸಿದ ನಂತರ ಎಂ.ಟೆಕ್ಗೆ ಹೋಗುವುದಾಗಿ ಹೇಳುತ್ತಿದ್ದಾನೆ ಎಂದು ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಮೊಮ್ಮಗನ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು.