ಆರೋಗ್ಯಕರ ಸಮಾಜದ ನಿರ್ಮಾಪಕರಾಗಿ
ಕ.ಪ್ರ.ವಾರ್ತೆ ಮೈಸೂರು ಫೆ. 10
ಪದವೀಧರರು ಆರೋಗ್ಯವಂತ ಸಮಾಜದ ನಿರ್ಮಾಪಕರಾಗುವಲ್ಲಿ ಕೊಡುಗೆ ನೀಡಬೇಕು ಎಂದು ಮಹಾರಾಜ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಸ.ನ. ಗಾಯತ್ರಿ ಹೇಳಿದರು.
ಜ್ಞಾನಬುತ್ತಿ ಸಂಸ್ಥೆಯು ಮಹಾರಾಣಿ ಎನ್ಟಿಎಂ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಕನ್ನಡ ಎಂಎ (ಪ್ರಥಮ ಮತ್ತು ದ್ವಿತೀಯ) 30ನೇ ತಂಡದ ತರಗತಿಗಳ ಉಚಿತ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಜಾಗತಿಕ ಯುಗದಲ್ಲಿ ಕನ್ನಡ ಪದವೀಧದರರು ಅನೇಕ ಸವಾಲುಗಳನ್ನು ಎದುರಿಸಬೇಕಿದೆ. ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ಎದುರಿಸಲು ಅಗತ್ಯವಾದ ಕೌಶಲವನ್ನು ವೃದ್ಧಿಸಿಕೊಂಡು ಉದ್ಯೋಗ ಪಡೆಯುವುದರ ಜತೆಗೆ, ನಾಡಿನ ನೆಲ, ಜಲ ಹಾಗೂ ಭಾಷೆಯ ಸಂರಕ್ಷಣೆಗೂ ಸಮರ್ಪಿಸಿಕೊಳ್ಳುವ ಅನಿವಾರ್ಯವಿದೆ. ಈ ಗುರಿ ಸಾಧಿಸಲು ಸಾಮರ್ಥ್ಯ ರೂಢಿಸಿಕೊಳ್ಳಬೇಕು ಎಂದರು.
ಕೇವಲ ಪದವಿ ಗಳಿಸಿದ ಮಾತ್ರಕ್ಕೆ ಇಂದು ಉದ್ಯೋಗ ದೊರಕುವುದಿಲ್ಲ. ಬದಲಾದ ಈ ಕಾಲಘಟ್ಟದಲ್ಲಿ ಇಂಗ್ಲಿಷ್ ಸಂವಹನ, ಕಂಪ್ಯೂಟರ್ ಜ್ಞಾನ, ಯಾವುದಾದರೂ ವಿಷಯದಲ್ಲಿ ಪರಿಣತಿ ಜತೆಗೆ ವ್ಯಕ್ತಿತ್ವ ಇದ್ದರೆ ಮಾತ್ರ ಹುದ್ದೆಗಳನ್ನು ಪಡೆಯಲು ಯಶಸ್ವಿಯಾಗಬಹುದು. ಈ ಕಾರ್ಯಕ್ಕೆ ಇಂಥ ಶಿಬಿರಗಳು ಮಾರ್ಗದರ್ಶನವಾಗಲಿದೆ. ಕಳೆದ 30 ವರ್ಷಗಳಿಂದ ಉಚಿತವಾಗಿ ತರಬೇತಿ ನೀಡುತ್ತಿರುವ ಸಂಸ್ಥೆಯ ಸೇವಾ ಕಾರ್ಯ ಅಭಿನಂದನೀಯ ಎಂದರು.
ಕಳೆದ 30 ವರ್ಷದಿಂದ ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸುತ್ತಿರುವ ವಿದ್ವಾಂಸರಾದ ಪ್ರೊ.ಕೆ. ಕೆಂಪೇಗೌಡ, ಪ್ರೊ. ಚಂದ್ರಶೇಖರಯ್ಯ, ಪ್ರೊ. ಸೀತಾರಾಂ ಜಹಗೀರ್ದಾರ್ ಹಾಗೂ ಪ್ರೊ. ಪ. ನಾಗರಾಜಯ್ಯ ಅವರನ್ನು ಸನ್ಮಾನಿಸಲಾಯಿತು.
ಸಂತ ಫಿಲೋಮಿನಾ ಕಾಲೇಜಿನ ಪ್ರಾಧ್ಯಾಪಕ ಎಂ. ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ ಸ್ವಾಗತಿಸಿದರು. ಸಯೋಜಕರಾದ ಡಾ. ಪಳನಿಸ್ವಾಮಿ ಮೂಡುಗೂರಿ ನಿರೂಪಿಸಿದರು. ಕಾರ್ಯದರ್ಶಿಗಳಾದ ರಾ. ರಾಮಕೃಷ್ಣ, ಎಚ್.ಬಾಲಕೃಷ್ಣ ಇದ್ದರು.