ಎನ್ಐಇ ವಿದ್ಯಾರ್ಥಿಗಳ ಯೋಜನೆಗೆ ಅನುದಾನ
ಮೈಸೂರು: ಮೈಸೂರಿನ ಎನ್ಐಇ ವಿದ್ಯಾರ್ಥಿಗಳು ರೂಪಿಸಿದ್ದ 5 ಯೋಜನೆಗಳನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯಲು ಆಯ್ಕೆ ಮಾಡಿ 1 ಲಕ್ಷ ಅನುದಾನ ನೀಡಿದೆ.
ನಾವೀನ್ಯತೆ ಮತ್ತು ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರದ ಪ್ರಾಯೋಜಕತ್ವದಲ್ಲಿ ಈ ಐದು ಯೋಜನೆಗಳನ್ನು ರೂಪಿಸಲಾಗಿತ್ತು. ಸಲಹಾ ಸಮಿತಿ ಯೋಜನೆಗಳನ್ನು ಆಯ್ಕೆ ಮಾಡಿತು. ನಾಲ್ಕು ಚಕ್ರದ ವಾಹನದಲ್ಲಿ ಸ್ವಯಂ ಚಾಲಿತ ಹ್ಯಾಂಡ್ ಬ್ರೇಕ್, ಗುಣಮಟ್ಟದ ಸಿಮೆಂಟ್ ಪುಡಿ ಶೋಧನೆ, ಜೈವಿಕ ಡೀಸೆಲ್ ವಿನ್ಯಾಸ, ಹೈಡ್ರಿಕ್ ರಿಸೈಕಲ್ ಎಂಬ ಐದು ಯೋಜನೆಗಳನ್ನು ಕಂಡು ಹಿಡಿಯಲಾಗಿತ್ತು.
ಸಿಇಒ ಅಚ್ಯುತ ಬಾಚಳ್ಳಿ, ನರೇಂದ್ರ, ಡಾ. ಸತೀಶ್ ವರ್ಮಾ, ಡಾ.ಜಿ.ಎಲ್. ಶೇಖರ್ ಈ ಯೋಜನೆಗಳನ್ನು ಆಯ್ಕೆ ಮಾಡಿದ್ದರು. ವಿದ್ಯಾರ್ಥಿಗಳಿಗೆ ಡಾ.ಎನ್. ಸುರೇಶ್, ಡಾ.ಟಿ.ಎಚ್. ಸದಾಶಿವ ಮೂರ್ತಿ, ಪ್ರೊ.ಎಸ್.ಎಂ. ಸೋಮಸುಂದರ್, ತಜ್ಮುಲ್ ಪಾಷಾ ಮಾರ್ಗದರ್ಶನ ನೀಡಿದ್ದರು. ವಿಜೇತರನ್ನು ಸಂಸ್ಥೆಯ ಕಾರ್ಯದರ್ಶಿ ಎಸ್.ಎಲ್. ರಾಮಚಂದ್ರ, ಖಜಾಂಚಿ ಎಸ್.ಕೆ. ಲಕ್ಷ್ಮೀನಾರಾಯಣ, ಪ್ರಾಂಶುಪಾಲ ಡಾ.ಜಿ.ಎಲ್. ಶೇಖರ್ ಅಭಿನಂದಿಸಿದ್ದಾರೆ.
15ಕ್ಕೆ ಬಯಲು ರಂಗಮಂದಿರದಲ್ಲಿ ರಾಜ ನಮನ
ಮೈಸೂರು: ಟೆಲಿ ಕ್ರಿಯೇಷನ್ಸ್ ಸಂಸ್ಥೆಯು ಫೆ.15ರ ಸಂಜೆ 6ಕ್ಕೆ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ರಾಜ- ನಮನ ಕಾರ್ಯಕ್ರಮ ಆಯೋಜಿಸಿದೆ.
ಯದುವಂಶದ ಪ್ರಮುಖ ರಾಜರ ಸಾಧನೆಗಳನ್ನು ಮೆಲುಕು ಹಾಕುವುದರ ಜೊತೆಗೆ ಮಹಾರಾಜರ ಜನಪರ ಚಿಂತನೆ ಕಾಳಜಿ, ಯೋಜನೆ ಕುರಿತು ಚಿಂತಿಸುವ ಪ್ರಯತ್ನ ಇದಾಗಿದೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ವ್ಯಕ್ತಿ- ವ್ಯಕ್ತಿತ್ವ ಪರಿಚಯ ಮಾಡಲಾಗುತ್ತದೆ ಎಂದು ಗಾಯಕ ರಮೇಶ್ ಚಂದ್ರ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮಕ್ಕೆ ಸಂಸದ ವಿಶ್ವನಾಥ್, ಸಚಿವರಾದ ಅಂಬರೀಶ್, ಶ್ರೀನಿವಾಸಪ್ರಸಾದ್, ಪ್ರಮೋದಾದೇವಿ ಒಡೆಯರ್, ಶಾಸಕ ವಾಸು, ಮೇಯರ್ ರಾಜೇಶ್ವರಿ, ಪತ್ರಿಕೋದ್ಯಮಿ ರಾಜಶೇಖರ ಕೋಟಿ, ರಂಗಾಯಣ ನಿರ್ದೇಶಕ ಎಚ್.ಜನಾರ್ದನ್, ಶ್ರೀಶಂಕರ ವಾಹಿನಿ ವ್ಯವಸ್ಥಾಪಕ ಹರಿಕೃಷ್ಣ, ಮಧುವನ ಹೌಸ್ ಬಿಲ್ಡಿಂಗ್ ಸೊಸೈಟಿ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಚಲನಚಿತ್ರ ಭಕ್ತಿ-ಭಾವ- ಜನಪದ ಗೀತೆಗಳ ಜೊತೆಗೆ ಮೈಸೂರು ಗೀತೆ ಹಾಗೂ ಮಹಾರಾಜರ ಕುರಿತ ರಚನೆಗಳನ್ನು ಪ್ರಸ್ತುತ ಪಡಿಸಲಾಗುವುದು. ಸಂಗೀತ ಶ್ರೀಕಿಶನ್ ತಂಡದಿಂದ ಮಹಾರಾಜ ಜಾಜ್ ವಾದ್ಯಗೋಷ್ಠಿ ಕಾರ್ಯಕ್ರಮ ವಿಶೇಷ ಆಕರ್ಷಣೆ ಆಗಿದೆ. ಪ್ರವೀಣ್ ಡಿ.ರಾವ್ ಅವರ ಸಂಗೀತ ನಿರ್ದೇಶನ ಮತ್ತು ಎಸ್.ಎಲ್.ಎನ್.ಸ್ವಾಮಿ ಅವರ ನಿರ್ದೇಶನ ಇದೆ ಎಂದರು.
ಮಹಾರಾಜ ಪ್ರಶಸ್ತಿ: ಹಿರಿಯ ಸ್ವಾತಂತ್ರ್ಯ ಸೇನಾನಿ 117 ವರ್ಷದ ಪಂಡಿತ ಸುಧಾಕರ ಚತುರ್ವೇದಿ ಅವರಿಗೆ ಮಹಾರಾಜ ಪ್ರಶಸ್ತಿ ಪ್ರದಾನ, ಡಾ. ಪಾವಗಡ ಪ್ರಕಾಶರಾವ್ ಮತ್ತು ವಾಗ್ಗೇಯಕಾರ ಪ್ರೊ.ರಾ. ವಿಶ್ವೇಶ್ವರನ್ ಅವರಿಗೆ ರಾಜ ಸನ್ಮಾನ ಆಯೋಜಿಸಲಾಗಿದೆ. ಪಾಸ್ಗಳು ಕುವೆಂಪುನಗರ ನ್ಯೂ ಕಾಂತರಾಜ ಅರಸ್ ರಸ್ತೆಯ ಕಣ್ವ ಮಾರ್ಟ್, ರಾಮಾನುಜ ರಸ್ತೆಯ ಆಂದೋಲನ ಪತ್ರಿಕೆ ಕಚೇರಿ, ರಂಗಾಯಣ ಮತ್ತು ಗೋಕುಲಂ ಡಾಕ್ಟರ್ ಕಾರ್ನರ್ನ ಹಿಂದೂಸ್ಥಾನ್ ಇನ್ಫ್ರಾ ಇಂಡಿಯಾ ಸಂಸ್ಥೆಯಲ್ಲಿ ದೊರಕುತ್ತದೆ ಎಂದು ಹೇಳಿದರು.