ಕೆರೆ ಹೂಳೆತ್ತದೆ ಹಣ ಡ್ರಾ: ಆರೋಪ
ಕೆ.ಆರ್. ನಗರ: ತಾಲೂಕಿನ ದೊಡ್ಡೇಕೊಪ್ಪಲು ಗ್ರಾಪಂ ಅಧ್ಯಕ್ಷ ಬಿ.ಎಂ. ಗಿರೀಶ್ ಮತ್ತು ಅಭಿವೃದ್ಧಿ ಅಧಿಕಾರಿ ಚಿದಾನಂದ ಅವರು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಮತ್ತು ವರ್ಗ ಒಂದರ ಹಣವನ್ನು ಚೌಕಹಳ್ಳಿ ಗ್ರಾಮದ ಬಳಿ ಇರುವ ಕೆರೆ ಹೂಳೆತ್ತದೆ ಅಕ್ರಮವಾಗಿ ಡ್ರಾ ಮಾಡಿಕೊಂಡಿದ್ದಾರೆ ಎಂದು ಗ್ರಾಪಂ ಸದಸ್ಯರು ಆರೋಪಿಸಿದ್ದಾರೆ.
2013-14ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಡಿ ಡೋರ್ನಹಳ್ಳಿ- ದೊಡ್ಡೇಕೊಪ್ಪಲು ಗ್ರಾಮದ ಸಂಪರ್ಕ ರಸ್ತೆಯ ಕಾಮಗಾರಿಯನ್ನು ಜಾಬ್ ಕಾರ್ಡ್ ಹೊಂದಿರುವ ಕೂಲಿ ಕಾರ್ಮಿಕರಿಂದ ಮಾಡಿಸದೆ ಅಕ್ರವಾಗಿ ಜೆಸಿಬಿ ಯಂತ್ರದಿಂದ ಮಾಡಿಸಿದ್ದಾರೆ ಎಂದು ನೀಡಿರುವ ಸದಸ್ಯರಾದ ಸಿ.ಎ. ರಾಜು, ಮಹದೇವಿ, ಬಸವರಾಜನಾಯ್ಕ, ಶಿವಮ್ಮ ಮತ್ತು ರವಿ ದೂರಿದ್ದಾರೆ.
2013ರ ಡಿ. 6ರಂದು ನಡೆದ ಸಾಮಾನ್ಯ ಸಭೆಯಲ್ಲಿ ನಡಾವಳಿಯನ್ನು ಪುಸ್ತಕದಲ್ಲಿ ದಾಖಲಿಸಿದ ನಂತರ ನಿಯಮ ಬಾಹಿರವಾಗಿ ಕಾಮಗಾರಿ ವಿಷಯ ದಾಖಲಿಸಿ ಸರ್ಕಾರದ ಲಕ್ಷಾಂತರ ರು.ಗಳನ್ನು ದುರ್ಬಳಕೆ ಮಾಡಿಕೊಂಡಿರುವ ಅಧ್ಯಕ್ಷ ಮತ್ತು ಅಭಿವೃದ್ಧಿ ಅಧಿಕಾರಿ ವಿರುದ್ದ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಪಂಚಾಯ್ತಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಪ್ರಶ್ನಿಸುವ ಸಾಮಾನ್ಯ ಜನರಿಗೆ ಮತ್ತು ಆರ್‌ಟಿಐ ಅಡಿಯಲ್ಲಿ ಮಾಹಿತಿ ಕೇಳುವವರಿಗೆ ರಾಜಕೀಯ ಬಲ ಬಳಸಿ, ಸುಳ್ಳು ಮೊಕದ್ದಮೆ ದಾಖಲಿಸಿ ಹೆದರಿಸುವ ಅಧ್ಯಕ್ಷ ಬಿ.ಎಂ. ಗಿರೀಶ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ಈ ದುರಾಡಳಿತದ ವಿರುದ್ದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಒತ್ತಾಯಿಸಿದ್ದಾರೆ.